ಅಫಜಲಪುರ: ಜಿ.ಪಂ ಮತಕ್ಷೇತ್ರ, ಗ್ರಾ.ಪಂ ಕೇಂದ್ರ ಸ್ಥಾನವಾಗಿದ್ದರೂ ತಾಲೂಕಿನ ಬಡದಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ.
ಗ್ರಾಮದ 300ಕ್ಕೂ ಹೆಚ್ಚು ಮನೆಗಳಿರುವ ಹೊಸ ಬಡಾವಣೆ ನಿರ್ಮಾಣ ಆದಾಗಿನಿಂದ ಇಲ್ಲಿಯ ವರೆಗೆ ಸಿಸಿ ರಸ್ತೆಗಳಾಗಿಲ್ಲ, ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗಿ ಜನತೆಗೆ ತಿರುಗಾಡಲು ಸಾಧ್ಯವಾಗುತ್ತಿಲ್ಲ.
ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದೆ ಎಂಬುದಾಗಿ ದಾಖಲೆಗಳಲ್ಲಿ ತೋರಿಸುತ್ತಾರೆ. ಆದರೆ ವಾಸ್ತವದಲ್ಲಿ ಬಡಾವಣೆ ಪರಿಸ್ಥಿತಿ ಬೇರೆಯೇ ಇದೆ. ಇದು ಅಧಿಕಾರಿಗಳು, ಜನಪ್ರತಿನಿಧಿಗಳ ಗಮನದಲ್ಲಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಬಡಾವಣೆಯಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯುತ್ ದೀಪವಿಲ್ಲದೇ ನಿವಾಸಿಗಳು ಕತ್ತಲಲ್ಲೇ ದಿನ ದೂಡುವಂತಾಗಿದೆ. ಗ್ರಾಮದ ಆಡಳಿತ ಕೇಂದ್ರವಾಗಿರುವ ಗ್ರಾ.ಪಂ ಕಚೇರಿಗೂ ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ ಹೀಗಾಗಿ ಕತ್ತಲಾಗುತ್ತಿದ್ದಂತೆ ಈ ಕಟ್ಟಡದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.
ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ, ಚರಂಡಿ, ಬೀದಿ ದೀಪ, ಮಹಿಳಾ ಶೌಚಾಲಯ ಸೇರಿದಂತೆ ಗ್ರಾಮದ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ, ಬಡದಾಳ ಗ್ರಾಮಸ್ಥರು ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಆಗ ಶಾಸಕರು ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳಾದರೂ ಪರಿಹಾರ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸ ಬಡಾವಣೆ ನಿರ್ಮಾಣವಾಗಿ ಮೂರು ದಶಕಗಳ ಮೇಲಾಗಿದೆ. ಗ್ರಾಮದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಗ್ರಾ.ಪಂ ಆಡಳಿತ ಸಂಪೂರ್ಣ ನಿಷ್ಕ್ರೀಯವಾಗಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಸತ್ಯಾಗ್ರಹ ಮಾಡಿದರೂ ಪ್ರಯೋಜನವಾಗಿಲ್ಲ. ಶಾಸಕರು ಸತ್ಯಾಗ್ರಹ ಸ್ಥಳಕ್ಕೆ ಬಂದಾಗ ವಾರದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡುತ್ತೇವೆ. ಸತ್ಯಾಗ್ರಹ ಕೈಬಿಡಿ ಎಂದು ಮನವೊಲಿಸಿದ್ದರು. ಆದರೆ ಇದುವರೆಗೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಗ್ರಾಪಂ ಹಾಗೂ ಜನಪ್ರತಿನಿಧಿಗಳ ಮೇಲಿನ ನಂಬಿಕೆ ಹೊರಟುಹೋಗಿದೆ.–
ರಾಹುಲ್ ದೊಡ್ಮನಿ, ತಾಲೂಕು ಅಧ್ಯಕ್ಷ, ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ
ಮಲ್ಲಿಕಾರ್ಜುನ ಹಿರೇಮಠ