Advertisement

ಸಹಸ್ರಾರು ಮಂದಿಗೆ ಸಾಲುತ್ತಾ 10 ಶೌಚಗೃಹ?

11:32 AM Feb 18, 2023 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರಮುಖ ಭಾಗಗಳಲ್ಲಿ ಒಂದಾದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿದಿನ ಧರಣಿಗಳು ನಡೆಯುತ್ತಲೇ ಇರುತ್ತವೆ. ಆದರೆ, ಇಲ್ಲಿ ಪ್ರತಿಭಟನಾಕಾರರಿಗೆ ಅವಶ್ಯಕವಾಗಿರುವ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆ ಇಲ್ಲ. ಸ್ವಾತಂತ್ರ್ಯ ಉದ್ಯಾನವು ಒಟ್ಟು 22 ಎಕರೆ ಭೂಮಿಯನ್ನು ಹೊಂದಿದ್ದು, ಅದರಲ್ಲಿ 2 ಎಕರೆ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಪ್ರತಿದಿನ ಏಳರಿಂದ ಹತ್ತು ಪ್ರತಿಭಟನೆಗಳನ್ನು ನಡೆಸುತ್ತಾರೆ. ಸುಮಾರು 10 ರಿಂದ 12 ಸಾವಿರ ಹೋರಾಟಗಾರರು ಪ್ರತಿಭಟನೆಗಳಲ್ಲಿ ಭಾಗವಹಿಸುತ್ತಾರೆ. ಆದರೆ, ಇವರಿಗೆ ಬೇಕಾದ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ ಇಲ್ಲದೇ, ಎಲ್ಲೆಂದರಲ್ಲೆ ಮಲ-ಮೂತ್ರ ವಿಸರ್ಜನೆ ಮಾಡುತ್ತಿದ್ದು, ಹೋರಾಟಗಾರರ ಕರ್ಮಭೂಮಿಯಾದ ಸ್ವಾತಂತ್ರ್ಯ ಉದ್ಯಾನ ಅವ್ಯವಸ್ಥೆಯ ಆಗರವಾಗಿದೆ.

Advertisement

ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆ, ಹೋರಾಟ ಮಾಡಬೇಕು ಎಂಬ ಹೈಕೋರ್ಟ್‌ ಆದೇಶದಿಂದಾಗಿ ನಿತ್ಯ ಹಲವಾರು ಸಂಘಟನೆಗಳಿಂದ ಸಹಸ್ರಾರು ಮಂದಿ ಹೋರಾಟ ನಡೆಸುತ್ತಾರೆ. ಆದರೆ, ಇಲ್ಲಿ ಕೇವಲ ಹತ್ತು ಶೌಚಾಲಗಳಿದ್ದು, ಅದರಲ್ಲಿ 5 ಪುರುಷರಿಗೆ ಮತ್ತು 5 ಮಹಿಳೆಯರಿಗೆ ಇವೆ. ಕೆಲವೊಮ್ಮೆ 20ರಿಂದ 25 ಸಾವಿರದ್ದು ಮಹಿಳೆಯರೇ ಧರಣಿಯಲ್ಲಿ ಭಾಗವಹಿಸುತ್ತಾರೆ. ಇತ್ತೀಚೆಗೆ ಅಂಗನವಾಡಿ ಕಾರ್ಯ ಕರ್ತೆಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ಅನಿರ್ದಿಷ್ಟವಧಿಯ ಪ್ರತಿಭಟನೆ ನಡೆಸುತ್ತಿದ್ದು, ಇಲ್ಲಿ ದಿನಲೂ 15ರಿಂದ 20 ಸಾವಿರ ಮಹಿಳೆಯರು ಭಾಗವಹಿಸುತ್ತಿದ್ದರು. ಇಷ್ಟು ಜನಕ್ಕೆ 5 ಶೌಚಾಲಯಗಳು ಸಾಲದೇ, ಗಿಡ-ಮರ ಅಥವಾ ಪಾರ್ಕಿಂಗ್‌ ನಿಲ್ಲಿಸಿದ ವಾಹನಗಳ ಮೊರೆಯಲ್ಲಿ ಹೋಗುತ್ತಿದ್ದಾರೆ. ಇದರಿಂದಾಗಿ ಫ್ರೀಡಂ ಪಾರ್ಕ್‌ ಸುತ್ತಮುತ್ತಲೂ ದುರ್ವಾಸನೆಯಿಂದ ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆ ಮಾತ್ರವಲ್ಲದೇ, ವಿದ್ಯುತ್‌ ಸಮಸ್ಯೆಯೂ ಇಲ್ಲಿ ಕಾಡುತ್ತಿದೆ.

ಬೆಂಗಳೂರು ಸುತ್ತಮುತ್ತ ಮಾತ್ರವಲ್ಲದೇ, ರಾಜ್ಯಾದ್ಯಂತ ಜನರು ಪ್ರತಿಭಟನೆಗೆ ಬರುತ್ತಾರೆ. ಕೆಲವು ಧರಣಿಗಳು ಅನಿರ್ದಿಷ್ಟಾವಧಿಯಾಗಿದ್ದು, ರಾತ್ರಿ ಸಮಯ ಸ್ವಾತಂತ್ರ್ಯ ಉದ್ಯಾನದಲ್ಲೇ ಉಳಿದುಕೊಳ್ಳುತ್ತಾರೆ. ಇಲ್ಲಿ ಸರಿಯಾಗಿ ವಿದ್ಯುತ್‌ ಸೌಲಭ್ಯವಿಲ್ಲದೇ, ಕತ್ತಲಲ್ಲಿಯೇ ಇರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಳ್ಳತನ-ದರೋಡೆ ಮಾಡುವವರು ಒಂದಡೆಯಾದರೆ, ಮತ್ತೂಂದೆಡೆ ಮದ್ಯ ಸೇವಿಸಿ ಬರುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆ ಯರಿಗೆ ಸರಿಯಾದ ಸುರಕ್ಷತೆ ಇಲ್ಲದಂತಾಗಿದೆ.

ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಬಾಟಲಿಗಳು : ಪ್ರತಿಭಟನಾಕಾರರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ, ಕೆಲವು ಮನೆಯಿಂದಲೇ ಬಾಟಲಿಗಳಲ್ಲಿ ನೀರು ತೆಗೆದುಕೊಂಡು ಬರುತ್ತಾರೆ. ಇನ್ನೂ ಕೆಲವರು ಅಲ್ಲೇ ನೀರಿನ ಬಾಟಲಿಗಳನ್ನು ಖರೀದಿಸುತ್ತಾರೆ. ಒಬ್ಬರು ದಿನಕ್ಕೆ ಕನಿಷ್ಠ 2 ನೀರಿನ ಬಾಟಲಿಗಳನ್ನು ಖರೀದಿಸಿದರೂ, ಸಾವಿರಾರು ಸಂಖ್ಯೆಯಲ್ಲಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಿಸಾಡುತ್ತಾರೆ. ಜತೆಗೆ ಊಟ ಮಾಡಿದ ಫ್ಲೇಟ್‌, ಪಾರ್ಸೆಲ್‌ ತಂದ ಕವರ್‌ ಹೀಗೆ ವಿವಿಧ ರೀತಿಯ ಪ್ಲಾಸ್ಟಿಕ್‌ ತ್ಯಾಜ್ಯದ ಗುಡ್ಡ ನಿರ್ಮಾಣವಾಗುತ್ತದೆ.

ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಮಹಿಳೆಯರು ಸೇರಿದ್ದು, ಇವರಲ್ಲಿ ಕೆಲವರು ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಇನ್ನೂ ಅನೇಕರಿಗೆ ಬಿ.ಪಿ. ಶುಗರ್‌ ಇರುವ ಕಾರಣ ಪದೇ ಪದೆ ಶೌಚಾಲಯಕ್ಕೆ ಹೋಗುತ್ತಾರೆ. ಆದರೆ, ಇಲ್ಲಿ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲದೇ, ಅನಿವಾರ್ಯದಿಂದಾಗಿ ಹೊರಗಡೆ ಹೋಗುವ ಪರಿಸ್ಥಿತಿಯಿದೆ. ವರಲಕ್ಷ್ಮೀ, ರಾಜ್ಯ ಘಟಕ ಅಧ್ಯಕ್ಷೆ, ಸಿಐಟಿಯು

Advertisement

ರಾಜ್ಯದ ಮೂಲೆ- ಮೂಲೆಗಳಿಂದ ಹೋರಾಟ ಮಾಡಲು ಫ್ರೀಡಂ ಪಾರ್ಕಿಗೆ ಜನ ಬರುತ್ತಾರೆ. ಆದರೆ, ಇಲ್ಲಿ ಕನಿಷ್ಠ ಸೌಲಭ್ಯ ಹಾಗೂ ಸ್ವತ್ಛತೆಯಿಲ್ಲದ ಕಾರಣ ಅದೆಷ್ಟೋ ಮಂದಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಕುರುಬೂರು ಶಾಂತಕುಮಾರ್‌, ಅಧ್ಯಕ್ಷರು, ರಾಜ್ಯ ರೈತ ಸಂಘ

ಫ್ರೀಡಂ ಪಾರ್ಕ್‌ಬಳಿಯಲ್ಲಿ ಕಾರು ಪಾರ್ಕಿಂಗ್‌ಗೆ ಸುವ್ಯವಸ್ಥೆಯನ್ನುಕಲ್ಪಿಸಿ, ಅಲ್ಲಿಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತುಷಾರ್‌ಗಿರಿನಾಥ್‌, ಬಿಬಿಎಂಪಿ ಆಯುಕ್ತರು

ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next