ದೇವದುರ್ಗ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಲ್ಕು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ನೂರಾರು ರೈತರು ಸ್ಪಿಂಕ್ಲರ್ ಪೈಪ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ನಿತ್ಯ ಕಚೇರಿಗೆ ಅಲೆಯುವಂತಹ ಸ್ಥಿತಿ ಎದುರಾಗಿದೆ.
ಒಂದೊಂದು ರೈತ ಸಂಪರ್ಕ ಕೇಂದ್ರದಲ್ಲಿ ಎಸ್‌ಸಿ, ಎಸ್‌ಟಿ, ಸಾಮಾನ್ಯ ವರ್ಗದ ರೈತರು ಸೇರಿದಂತೆ 200 ಅಧಿಕ ಅರ್ಜಿಗಳು ಬಂದಿದ್ದು, ಕೋವಿಡ್ ಹಿನ್ನೆಲೆ ಹಾಗೂ ಅನುದಾನ ಕೊರತೆಯಿಂದ ಯೋಜನೆಗಳು ರೈತರಿಗೆ ಸಕಾಲಕ್ಕೆ ತಲುಪುತ್ತಿಲ್ಲ. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಪರಿಶಿಷ್ಟ ಜಾತಿ 36, ಪರಿಶಿಷ್ಟ ಪಂಗಡ 122, ಸಾಮಾನ್ಯ ವರ್ಗ 135 ರೈತರಿಂದ ಅರ್ಜಿಗಳು ಬಂದಿವೆ. ಗಬ್ಬೂರು ರೈತ ಸಂಪರ್ಕ ಕೇಂದ್ರ ಪರಿಶಿಷ್ಟ ಜಾತಿ 50, ಪರಿಶಿಷ್ಟ ಪಂಗಡ 50, ಸಾಮಾನ್ಯ ವರ್ಗದ ರೈತರಿಂದ 100 ಅರ್ಜಿಗಳು ಹಾಕಿದ್ದಾರೆ. ಜಾಲಹಳ್ಳಿ, ಅರಕೇರಾ ಸೇರಿ 250 ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅನುದಾನ ಕೊರತೆ ಹಿನ್ನೆಲೆ ಈಬಾರಿ ಸ್ಪಿಂಕ್ಲರ್ ಪೈಪ್‌ಗ್ಳು ರೈತರಿಗೆ ವಿತರಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ನಿತ್ಯ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ರೈತ ಸಂಪರ್ಕ ಕೇಂದ್ರಗಳಿಗೆ ಅಲೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಬೇಡಿಕೆ ಸಾಕಷ್ಟು ಇದ್ದರೂ ಮುಂಚಿತವಾಗಿ ಅರ್ಜಿ ಸಲ್ಲಿಸದ ರೈತರನ್ನು ಮೊದಲು ಪರಿಗಣಿಸಲಾಗುತ್ತದೆ.
ಅರ್ಜಿ ಮೂಲಕ ಸ್ಪಿಂಕ್ಲರ್ ಪೈಪ್‌ಗ್ಳ ಸೌಲಭ್ಯ ಪಡೆಯಲು ರೈತರು ಅಗತ್ಯ ದಾಖಲಾತಿ ನೀಡಬೇಕು. 20 ರೂ. ಬಾಂಡ್, ಜಾತಿ ಪ್ರಮಾಣ ಪತ್ರ, ನೀರಿನ ಹಕ್ಕಿನ ಪ್ರಮಾಣ ಪತ್ರ, ಎರಡು ಫೋಟೋ, ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್ ಮುಂತಾದ ದಾಖಲಾತಿ ಕೊಡಬೇಕು. ಎಸ್‌ಸಿ, ಎಸ್‌ಟಿ ರೈತರು 2070ರೂ. ನೀಡಿ ಸ್ಲಿಂಕ್ಲರ್ ಪೈಪ್ ಸೌಲಭ್ಯ ಪಡೆಯಬೇಕು. ಸಾಮಾನ್ಯ ವರ್ಗದ ರೈತರು 18.632ರೂ. ಕಟ್ಟಬೇಕು.
ನಾಲ್ಕು ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಸ್ಪಿಂಕ್ಲರ್ ಪೈಪ್ ಸೌಲಭ್ಯಕ್ಕಾಗಿ ನೂರಾರು ಅರ್ಜಿಗಳು ಬಂದಿವೆ. ಅನುದಾನ ಕೊರತೆ ಹಿನ್ನೆಲೆ ವಿಳಂಬವಾಗಿದ್ದು, ವಾರದಲ್ಲಿ ಪೈಪ್‌ಗ್ಳನ್ನು ವಿತರಿಸಲಾಗುತ್ತದೆ.
-ಡಾ| ಎಸ್.ಪ್ರಿಯಾಂಕ, ಸಹಾಯಕ ಕೃಷಿ ನಿರ್ದೇಶಕಿ
ಅರ್ಜಿ ಹಾಕಿ ತಿಂಗಳು ಕಳೆಯುತ್ತಿದ್ದು, ಇಲ್ಲಿವರೆಗೆ ಪೈಪ್‌ಗ್ಳು ಬಂದಿಲ್ಲ. ಕಚೇರಿಗೆ ಹೋಗಿ ಅಧಿಕಾರಿಗಳಿಗೆ ಕೇಳಿದರೆ ಬರುತ್ತವೆ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಬೆಳೆಗಳಿಗೆ ನೀರಿನ ಅಭಾವ ಉಂಟಾಗುತ್ತಿದೆ.
-ಬಸ್ಸಪ್ಪ, ರಂಗಪ್ಪ, ಅರ್ಜಿದಾರ ರೈತ
-ನಾಗರಾಜ ತೇಲ್ಕರ್