ದೇವನಹಳ್ಳಿ: ಈ ಹಿಂದೆ 2011ರಲ್ಲಿ ಆವತಿ ಗ್ರಾಮ ಪಂಚಾಯಿತಿಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂಘಟನೆಯ ವತಿಯಿಂದ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಿಕೊಡುವಂತೆ ಮನವಿ ಮಾಡುವುದರ ಮೂಲಕ ಅರ್ಜಿ ಹಾಕಲಾಗಿತ್ತು. ಅದರಂತೆ, ಗ್ರಾಮದಲ್ಲಿ ಒಂದೇ ಮನೆಯಲ್ಲಿ 3-4 ಕುಟುಂಬಗಳ ವಾಸವಿರುತ್ತದೆ. ಹಾಗಾಗೀ ಜಾಗದ ಸಮಸ್ಯೆ ಇದ್ದಿದ್ದರಿಂದ ಸರಕಾರಿ ಜಾಗ ವನ್ನು ಗುರ್ತಿಸಿದ್ದ ಫಲವಾಗಿ ಎರಡು ವರ್ಷದ ಹಿಂದೆಯಷ್ಟೇ ನಿವೇಶನ ಹಂಚಿಕೆಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಎಸ್‌ಎಸ್ ತಾಲೂಕು ಸಂಚಾಲಕ ಹಾಗೂ ಆವತಿ ಗ್ರಾಪಂ ಸದಸ್ಯ ಅತ್ತಿಬೆಲೆ ನರಸಪ್ಪ ತಿಳಿಸಿದರು.
ತಾಲೂಕಿನ ಆವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅತ್ತಿಬೆಲೆ ಸಮೀಪದ ಸರ್ವೆ ನಂ.20ರಲ್ಲಿನ ಸರಕಾರಿ ಗೋಮಾಳದ ಜಾಗದಲ್ಲಿ ನಿವೇಶನ ರಹಿತರಿಗೆ ಹಕ್ಕು ಪತ್ರಗಳ ವಿತರಣೆಗೆ ಜಾಗದ ಅಭಿವೃದ್ಧಿಗೆ ಅನುದಾನ ಕೊರತೆ ಇರುವು ದರಿಂದ ಕೂಡಲೇ ದೇವನಹಳ್ಳಿ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಿ, ನಿವೇಶನ ರಹಿತರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಮನವಿ ಮಾಡುವುದರ ಮೂಲಕ ಅವರು ಮಾತನಾಡಿದರು.
ಅತ್ತಿಬೆಲೆ ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿದ್ದಾರೆ. ಒಂದೇ ಮನೆಯಲ್ಲಿ ಅಣ್ಣತಮ್ಮಂದಿರ ಕುಟುಂಬಗಳು ವಾಸವಾಗಿದ್ದು, ಅವರಿಗೆ ನಿವೇಶನ ಕಲ್ಪಿಸಿಕೊಡುವ ದೃಷ್ಠಿಯಿಂದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದು ಕೊಂಡು ನಮ್ಮ ಸಂಘಟನೆಯ ಮೂಲಕ ಅರ್ಜಿ ಗಳನ್ನು ಹಾಕಿ ಒಂದು ಹಂತಕ್ಕೆ ತರಲಾಗಿದೆ. ಜಿಲ್ಲಾಧಿಕಾರಿ ಪಾಲಯ್ಯ ಅವರ ಅವಧಿಯಲ್ಲಿ 3 ಎಕರೆ 30ಗುಂಟೆ ಜಾಗ ಮಂಜೂರಿಯಾಗಿರುತ್ತದೆ. ಹೆಚ್ಚಾಗಿ ಹಳ್ಳಕೊಳ್ಳ ವಿದ್ದು, ಬಂಡೆ ಇರುವುದರಿಂದ ಅದನ್ನು ಸಮಾಂತರಗೊಳಿಸಿ, ಸುಮಾರು ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗುತ್ತದೆ. ಅಭಿವೃದ್ಧಿ ಪಡಿಸಲು ಅನುದಾನ ಕೊರತೆ ಇದೆ.
ಸುಮಾರು 25ಲಕ್ಷ ರೂಗೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಈಗಾಗಲೇ ಗ್ರಾಮ ಪಂಚಾಯಿತಿಯಿಂದ 8ಲಕ್ಷ ರೂ., ತಾಲೂಕು ಪಂಚಾಯಿತಿಯಿಂದ 8ಲಕ್ಷ ರೂ., ಅನುದಾನ ಮೀಸಲಿಡಲಾಗಿದೆ. ಇನ್ನುಳಿದ ಅನುದಾನವನ್ನು ಶಾಸಕರೊಂದಿಗೆ ಚರ್ಚಿಸಿ, ಅಭಿವೃದ್ಧಿಗೊಳಿಸಿ, ಶೀಘ್ರವಾಗಿ ಹಕ್ಕುಪತ್ರ ಹಂಚಿಕೆ ಕಾರ್ಯ ಮಾಡಲಾಗುತ್ತದೆ ಎಂದು ಹೇಳಿದರು.