ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರಕಾರ ರೂಪಿಸಿದ್ದ ಸ್ಟಡಿ ಸರ್ಕಲ್ ಕಾರ್ಯಕ್ರಮವು ಕೊರೊನಾ ಅನಂತರ ಅನುದಾನದ ಕೊರತೆಯಿಂದ ಚೇತರಿಕೆ ಕಾಣಲೇ ಇಲ್ಲ.
ಎಲ್ಲ ಜಿಲ್ಲೆಗಳ ಉದ್ಯೋಗ ವಿನಿ ಮಯ ಕೇಂದ್ರದ ಮೂಲಕ ವರ್ಷಕ್ಕೆ ನಾಲ್ಕು ಸ್ಟಡಿ ಸರ್ಕಲ್ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಪ್ರತೀ ಕಾರ್ಯಕ್ರಮದಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ವಿಷಯ ತಜ್ಞರ ಮೂಲಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಯನ್ನು ಒದಗಿಸಲಾಗುತ್ತಿತ್ತು. ಸುಮಾರು 2 ಗಂಟೆಯ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳ ಆಸಕ್ತಿಗೆ ಅನುಸಾರವಾಗಿ ಬ್ಯಾಂಕಿಂಗ್, ನೆಟ್-ಸ್ಲೆಟ್, ಎಸ್‌ಡಿಎ, ಎಫ್ಡಿಎ, ಕಂಪೆನಿ ಸೆಕ್ರೆಟರಿ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪೂರ್ಣ ಮಾಹಿತಿಯನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗುತ್ತಿತ್ತು.
ಪ್ರತೀ ಕಾರ್ಯಕ್ರಮಕ್ಕೆ ಬರುವ ಸಂಪನ್ಮೂಲ ವ್ಯಕ್ತಿಗಳ ಗೌರವಧನ ಸಹಿತ ಕಾರ್ಯ ಕ್ರಮ ಆಯೋಜನೆಗೆ ಸರಕಾರ ದಿಂದ 25 ಸಾವಿರ ರೂ. ನೀಡಲಾಗುತ್ತಿತ್ತು. ಕೊರೊನಾದಿಂದ ಎರಡು ವರ್ಷಗಳಿಂದ ಸ್ಟಡಿ ಸರ್ಕಲ್ ಕಾರ್ಯಕ್ರಮ ನಡೆಯುತ್ತಿಲ್ಲ ಹಾಗೂ ಸರಕಾರಿಂದ ಅನುದಾನವೂ ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಾಲೇಜು ವಿದ್ಯಾರ್ಥಿಗಳನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಕರೆಸಿ, ತರಬೇತಿ ನೀಡುವ ಬಗ್ಗೆಯೂ ಯೋಚನೆ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಬರುವುದು ಕಷ್ಟಸಾಧ್ಯ ಎಂಬುದನ್ನು ಅರಿತು ಕಾಲೇಜುಗಳಲ್ಲೇ ಸ್ಟಡಿ ಸರ್ಕಲ್ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಒಂದೊಂದು ಕಾರ್ಯಕ್ರಮದಲ್ಲೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದರು. ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವೂ ಆಗಿತ್ತು. ಜತೆಗೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವೂ ಇತ್ತು. ಕೊರೊನಾ ಅನಂತರದಲ್ಲಿ ಸರಕಾರದಿಂದ ಒಂದು ಕಾರ್ಯಕ್ರಮ ಮಾತ್ರ ಮಾಡಲಾಗಿತ್ತು. ಅದು ಉದ್ಯೋಗ ವಿನಿಯಮ ಕೇಂದ್ರದಲ್ಲೇ ಆಗಿರುವುದಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ.
ಅನುದಾನದ ನಿರೀಕ್ಷೆಯಲ್ಲಿ
2022-23ನೇ ಸಾಲಿನ ಪದವಿ ಶೈಕ್ಷಣಿಕ ತರಗತಿಗಳು ಇನ್ನಷ್ಟೇ ಆರಂಭವಾಗಬೇಕಿದೆ. ಹೀಗಾಗಿ ಈ ಸಾಲಿನಲ್ಲಿ ಸರಕಾರದಿಂದ ಸ್ಟಡಿ ಸರ್ಕಲ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವ ಸಾಧ್ಯತೆಯಿದೆ. ಸರಕಾರದಿಂದ ಅನುದಾನ ಬಂದ ಅನಂತರವೇ ಕಾರ್ಯಕ್ರಮ ನಡೆಸಲು ಸಾಧ್ಯ. ಸಂಪನ್ಮೂಲ ವ್ಯಕ್ತಿ ಗಳಿಗೂ ಗೌರವಧನ ನೀಡಬೇಕಿದೆ. ಹೀಗಾಗಿ ಈ ವರ್ಷ ಅನುದಾನ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.