Advertisement

ಲಾಲ್‌ಬಾಗ್‌ ನಿರ್ವಹಣೆಗೆ ಆರ್ಥಿಕ ಕೊರತೆ

11:32 AM Sep 18, 2020 | Suhan S |

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆ ಬಾಗಿಲು ಮುಚ್ಚಿದ್ದ ಸಸ್ಯಕಾಶಿ ಲಾಲ್‌ಬಾಗ್‌ ಎರಡನೇ ಬಾರಿ ಪುನರಾರಂಭವಾದ ಬಳಿಕವೂ ಪ್ರವಾಸಿಗರ ಸಂಖ್ಯೆ ಶೇ.80 ರಷ್ಟು ಕುಸಿದಿದೆ. ನಿತ್ಯ ಉದ್ಯಾನ ನಿರ್ವಹಣೆಗೆ ಖರ್ಚು ಮಾಡುತ್ತಿರುವ ಹಣದ ಅರ್ಧದಷ್ಟು ಆದಾಯ ಸಂಗ್ರಹವಾಗುತ್ತಿಲ್ಲ !

Advertisement

ಲಾಕ್‌ಡೌನ್‌ ಮೊದಲು ಸಾಮಾನ್ಯ ದಿನಗಳಲ್ಲಿ ನಿತ್ಯ ಸರಾಸರಿ 4,000 ಸಾವಿರ ಮಂದಿ ಉದ್ಯಾನಕ್ಕೆ ಭೇಟಿ ನೀಡುತ್ತಿದ್ದರು. ವಾರಾಂತ್ಯದಲ್ಲಿ 7,000ಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿತ್ತು. ಅಂತೆಯೇ ನಿತ್ಯ ಸರಾಸರಿ ಒಂದೂವರೆ ಲಕ್ಷ ರೂ.ಆದಾಯ ಸಂಗ್ರವಾಗುತ್ತಿತ್ತು. ವಾರಾಂತ್ಯಲ್ಲಿ ಎರಡೂವರೆ ಲಕ್ಷ ರೂ.ದಾಟುತ್ತಿತ್ತು. ಆದರೆ, ಆಗ ನಿತ್ಯ ಸರಾಸರಿ 500 ಮಂದಿ ಉದ್ಯಾನಕ್ಕೆ ಭೇಟಿ ನೀಡುತ್ತಿದ್ದು, 18 ರಿಂದ 20 ಸಾವಿರ ಆದಾಯ ಸಂಗ್ರಹವಾಗುತ್ತಿದೆ. ನಿತ್ಯ ಉದ್ಯಾನದ ನಿರ್ವಹಣೆಗೆ ಕನಿಷ್ಠ 50 ಸಾವಿರ ರೂ. ಖರ್ಚಾಗಲಿದ್ದು, ಅದರ ಅರ್ಧದಷ್ಟು ಆದಾಯ ಇಲ್ಲದಂತಾಗಿದೆ.

ಒಂದು ತಿಂಗಳು ಬಂದ್‌: ಕೋವಿಡ್ ಹಿನ್ನೆಲೆ ಮಾರ್ಚ್‌ ಮೊದಲ ವಾರ ಬಂದ್‌ ಆಗಿದ್ದ ಉದ್ಯಾನ ಅನ್‌ಲಾಕ್‌ ಬಳಿಕ ಜೂ.22 ರಂದು ತೆರೆಯಿತು. ಈ ವೇಳೆ ನಿತ್ಯ ಸರಾಸರಿ 50ಕ್ಕೂ ಕಡಿಮೆ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಇದರಿಂದ ಸಾಮಾನ್ಯ ದಿನಗಳಲ್ಲಿ ನಿತ್ಯ ಒಂದೂವರೆ ಲಕ್ಷ ಆದಾಯ ಸಂಗ್ರಹಿಸುತ್ತಿದ್ದ ಉದ್ಯಾನದಲ್ಲಿ ಒಂದೂವರೆ ಸಾವಿರ ಆದಾಯಕ್ಕೆಸೀಮಿತವಾಯಿತು. ಇದರಿಂದ ನಿತ್ಯ ವಿದ್ಯುತ್‌ ವೆಚ್ಚ, ಭದ್ರತೆ, ಸ್ವತ್ಛತೆ ಕಾರ್ಯ ನಿರ್ವಹಿಸುತ್ತಿರುವ 100ಕ್ಕೂಹೆಚ್ಚು ಸಿಬ್ಬಂದಿ ಸಂಬಳ ನಿರ್ವಹಣೆ ಸಾಧ್ಯವಾಗಲಿಲ್ಲ. ಹೀಗಾಗಿ, ಆಗಸ್ಟ್‌ ಎರಡನೇ ವಾರದಿಂದ ಮತ್ತೆ ಬಂದ್‌ ಮಾಡಲಾಗಿತ್ತು. ಬಳಿಕ ಸರ್ಕಾರದ ಆದೇಶದ ಮೇರೆಗೆ ಸೆ.8 ರಿಂದ ಪುನರಾರಂಭವಾಗಿದೆ.

2 ಕೋಟಿ ರೂ.ಆದಾಯ ಖೋತಾ: ಪ್ರತಿ ವರ್ಷ ಫ‌ಲ  ಪುಷ್ಪ ಪ್ರದರ್ಶನ, ವಿವಿಧ ಮೇಳಗಳನ್ನು ಆಯೋಜಿಸುವ ಮೂಲಕ 2 ಕೋಟಿ ರೂ.ಗೂ ಅಧಿಕ ಲಾಭ ಸಂಗ್ರಹಿಸಿಉದ್ಯಾನ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿತ್ತು. ಕೋವಿಡ್ ಹಿನ್ನೆಲೆ ಈ ಬಾರಿ ಮೇಳಗಳು ಇಲ್ಲದೆ, ಉದ್ಯಾನವೂ ಆರು ತಿಂಗಳು ಬಂದ್‌ ಆಗಿ ನಿರ್ವಹಣೆಗೆ ಪರ ದಾಟವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗದಿದ್ದರೆ ಉದ್ಯಾನ ನಿರ್ವಹಣೆ ಕಷ್ಟವಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿಗಳು.

15 ಕೋಟಿ ರೂ.ಅನುದಾನಕ್ಕೆ ಮನವಿ :  ಪ್ರವಾಸಿಗರಿಲ್ಲದೆ ರಾಜ್ಯ ಪ್ರಮುಖ ಉದ್ಯಾನಗಳಿಗೆ ಆದಾಯವಿಲ್ಲದಂತಾಗಿ ನಿರ್ವಹಣೆ, ಅಭಿವೃದ್ಧಿ ಕಷ್ಟವಾಗಿದೆ. ಲಾಕ್‌ಡೌನ್‌ ವೇಳೆಯಲ್ಲಿ ಉದ್ಯಾನಗಳ ನಿರ್ವಹಣೆಗೆಂದು ಸರ್ಕಾರ 10 ಕೋಟಿ ರೂ. ಅನುದಾನ ನೀಡಿತ್ತು. ಈಗ ಲಾಲ್‌ಬಾಗ್‌, ಕಬ್ಬನ್‌ ಉದ್ಯಾನ ಸೇರಿದಂತೆ ನಂದಿಬೆಟ್ಟದ, ಊಟಿ, ಕೆಮ್ಮಣ್ಣುಗುಂಡಿಯಲ್ಲಿನ ಉದ್ಯಾನಗಳ ಅಭಿವೃದ್ಧಿ ಕಾರ್ಯಕ್ಕೆ 15 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ನಿರ್ದೇಶಕ ವೆಂಕಟೇಶ್‌ “ಉದಯವಾಣಿ”ಗೆ ತಿಳಿಸಿದರು.

Advertisement

ವಾಯುವಿಹಾರಕ್ಕೆ 5000ಕ್ಕೂ ಅಧಿಕ ಮಂದಿ :  ಲಾಲ್‌ಬಾಗ್‌ಗೆ ನಿತ್ಯ ಬೆಳಗ್ಗೆ 5,000, ಸಂಜೆ 2,000ಕ್ಕೂ ಅಧಿಕ ಮಂದಿ ವಾಯುವಿಹಾರಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಪ್ರವಾಸಿಗರ ಸಂಖ್ಯೆಮಾತ್ರ ಕಡಿಮೆ ಇದೆ. ಪುನರಾರಂಭವಾದ ಬಳಿಕ ನಿತ್ಯ ಸರಾಸರಿ 500 ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.10 ದಿನಗಳಲ್ಲಿ ಎರಡು ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಲಾಲ್‌ಬಾಗ್‌ ಸಸ್ಯ ತೋಟ ಉಪನಿರ್ದೇಶಕಿ ಜಿ.ಕುಸುಮಾ ತಿಳಿಸಿದರು.

ಅಭಿವೃದ್ಧಿ ಕಾರ್ಯ ಸ್ಥಗಿತ : ಕಬ್ಬನ್‌ ಉದ್ಯಾನಕ್ಕೆ ಸಾರ್ವಜನಿಕರಿಗೆ ಪ್ರವೇಶ ಶುಲ್ಕ ಇಲ್ಲ. ವಾಹನ ನಿಲುಗಡೆ ಶುಲ್ಕ ಮಾತ್ರ ಆದಾಯವಾಗಿದೆ. ಸದ್ಯ ವಾಹನ ದಟ್ಟಣೆ ಕಡಿಮೆ ಇದ್ದು, ವಾಹನ ನಿಲುಗಡೆಅರ್ಧದಷ್ಟು ಕಡಿಮೆಯಾಗಿದೆ. ಐದಾರು ತಿಂಗಳ ನಿರ್ವಹಣೆಗೆ ಅನುದಾನ ಬಳಕೆ ಹಿನ್ನೆಲೆ ಉದ್ಯಾನದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ.

ಲಾಲ್‌ಬಾಗ್‌ನ ಪ್ರತಿ ತಿಂಗಳ ನಿರ್ವಹಣಾ ವೆಚ್ಚ 12 ರಿಂದ 15 ಲಕ್ಷ ರೂ. ಇದೆ. ಸದ್ಯ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಲಾಕ್‌ಡೌನ್‌ ವೇಳೆ ಸರ್ಕಾರದ ಅನುದಾನದಿಂದ ನಿರ್ವಹಣೆ ಮಾಡಲಾಗಿದೆ. ವಿವಿಧ ಮೇಳ, ಪ್ರದರ್ಶನದಿಂದ ವಾರ್ಷಿಕ ಎರಡು ಕೋಟಿ.ರೂ ಆದಾಯವಿತ್ತು. ಈ ಬಾರಿ ಅನುದಾನ ಎದುರು ನೋಡುವಂತಾಗಿದೆ. ಡಾ.ಎಂ.ಜಗದೀಶ್‌, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಐದಾರು ತಿಂಗಳ ಕಾಲ ಜನರ ಓಡಾಟವಿಲ್ಲದೆ ಉದ್ಯಾನದಲ್ಲಿಹಸಿರು ಹೆಚ್ಚಾಗಿದೆ. ಹೂ, ಗಿಡ ಮರಗಳು ಸೊಂಪಾಗಿ ಬೆಳೆದಿವೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಉದ್ಯಾನ ನೋಡಲು ಇನ್ನಷ್ಟು ಸುಂದರವಾಗಿದ್ದು, ಪ್ರಶಾಂತವಾಗಿದೆ. ಆನಂದ್‌ ಹಳ್ಳೂರ್‌, ಪ್ರವಾಸಿಗ

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next