ಹೊಳೆನರಸೀಪುರ: ತಾಲೂಕಿನ ದೊಡ್ಡ ಹೋಬಳಿಗಳಲ್ಲಿ ಒಂದಾದ ಹಳ್ಳಿಮೈಸೂರು ಹೋಬಳಿ ಕೇಂದ್ರದಲ್ಲಿ ಸಾರಿಗೆ ಬಸ್ ನಿಲ್ದಾಣವಿದ್ದರೂ ಸಹ ಮೂಲಭೂತ ಸೌಕರ್ಯ ವಂಚಿತಗೊಂಡು ಸಾರ್ವಜನಿಕರಿಗೆ ದೊರಕ ಬೇಕಾದ ಸೌಲಭ್ಯದಿಂದ ವಂಚಿತಗೊಂಡಿದೆ.
ತಾಲೂಕಿನ ಹನ್ನೆರಡು ಗ್ರಾಪಂಗಳನ್ನು ಹೊಂದಿ ರುವ ಹಳ್ಳಿಮೈಸೂರು ಗ್ರಾಮ ವ್ಯಾಪಾರಿ ಕೇಂದ್ರ ವಾಗಿದ್ದು ನಿತ್ಯ ಸಾವಿರಾರು ಮಂದಿ ಹೋಬಳಿ ಕೇಂದ್ರಕ್ಕೆ ಆಗಮಿಸಿ ತಮ್ಮ ವ್ಯಾಪಾರ ವಹಿವಾಟು ನಡೆಸುವ ಕೇಂದ್ರವಾಗಿದೆ. ಆದರೆ, ಕೇಂದ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಿಲ್ದಾಣ ನಿರ್ಮಿಸಿ ದ್ದರೂ ಸಹ ಮೂಲ ಭೂತ ಸೌರ್ಕಯದಿಂದ ವಂಚಿತಗೊಂಡಿದೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಇನ್ನು ಬಸ್‌ನಿಲ್ದಾಣದ ನೆಲ ಸಂಪೂರ್ಣ ದಪ್ಪದಪ್ಪ ಕಲ್ಲುಗಳಿಂದ ಕೂಡಿದ್ದು ಇವುಗಳನ್ನು ಕಲ್ಪಿಸಬೇಕಾದ ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಸಹ ಹರಿಸಿಲ್ಲ. ಜೊತೆಗೆ ಈ ಹೋಬಳಿ ಕೇಂದ್ರ ಜಿಪಂ, ಗ್ರಾಪಂ ಹೊಳೆನರಸೀಪುರಕ್ಕೆ ಬರುತ್ತದೆ. ಇನ್ನು ವಿಧಾನ ಸಭಾ ಚುನಾವಣೆಯಲ್ಲಿ ಪಕ್ಕದ ಅರಕಲಗೂಡು ಕ್ಷೇತ್ರಕ್ಕೆ ಬರುವುದರಿಂದ ಇಬ್ಬರು ಶಾಸಕರುಗಳಾದ ಎಚ್.ಡಿ.ರೇವಣ್ಣ ಮತ್ತು ಎ.ಟಿ.ರಾಮಸ್ವಾಮಿ ಅವರುಗಳ ತಾತ್ಸರದಿಂದ ಇಂದು ಮೂಲ ಭೂತ ಸೌಕರ್ಯದಿಂದ ವಂಚಿತಗೊಂಡು ಪ್ರಯಾಣಿಕರು ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ.
ಅಭಿವೃದ್ಧಿಗೆ ಇಚ್ಛಾ ಶಕ್ತಿ ಕೊರತೆ: ಕಳೆದ 2008 ರವರೆಗೆ ಈ ಹೋಬಳಿ ಕೇಂದ್ರ ಹೊಳೇನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿತ್ತು. ಆದರೆ, 2008ರಲ್ಲಿ ಕ್ಷೇತ್ರ ವಿಂಗಡಣೆಯಾದ ಹಳ್ಳಿಮೈಸೂರು ಅರಕಲಗೂಡು ಕ್ಷೇತ್ರಕ್ಕೆ ಹೋಯಿತು. ಇದರ ಪರಿಣಾಮ ಇಂದು ಈ ಹೋಬಳಿ ಕೇಂದ್ರ ಜನಪ್ರತಿನಿಧಿಗಳ ಅಸಡ್ಡೆ ಮತ್ತು ತಿರಸ್ಕಾರದಿಂದ ಇಂದು ಸಂಪೂರ್ಣ ಮೂಲೆಗುಂಪಾಗಿದೆ. ಸೌಲಭ್ಯ ವಂಚಿತ: ಕಳೆದ 2008 ರಿಂದ 2018 ರವರೆಗೆ ಎ.ಮಂಜು ಶಾಸಕರಾಗಿ ಪ್ರತಿನಿಧಿಸಿದ್ದರು. ಅದರಂತೆ 2018ರಲ್ಲಿ ಎ.ಟಿ. ರಾಮಸ್ವಾಮಿ ಶಾಸಕರಾಗಿದ್ದು ಆಲ್ಲಿಂದ ಇಂದಿನವರೆಗೆ ಈ ಹೋಬಳಿ ಕೇಂದ್ರಕ್ಕೆ ದೊರಕಬೇಕಾದ ಸವಲತ್ತುಗಳು ದೊರಕದೆ ಪೂರ್ಣ ವಂಚಿತವಾಗಿದೆ. ಈ ಹೋಬಳಿ ಕೇಂದ್ರದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಸ್ಪಂದಿಸಿ ಹೋಬಳಿ ಕೇಂದ್ರದಲ್ಲಿನ ಸಾರಿಗೆ ಬಸ್ ನಿಲ್ದಾಣದ ಆಭಿವೃದ್ಧಿಗೆ ಕೈ ಜೋಡಿಸುವರೆ ಎಂಬದುನ್ನು ಕಾದು ನೋಡಬೇಕಿದೆ.
ಮೂಲ ಸೌಕರ್ಯ ಕೊರತೆ : ಬಸ್ ನಿಲ್ದಾಣ ನಿರ್ಮಾಣಗೊಂಡು ಹತ್ತಾರು ವರ್ಷಗಳೇ ಕಳೆದಿದೆ. ಬಸ್ ನಿಲ್ದಾಣಕ್ಕೆ ಮೇಲ್ಛಾವಣಿಯೇ ಇಲ್ಲ. ಈ ಗ್ರಾಮಕ್ಕೆ ಸುಮಾರು ನೂರಕ್ಕೂ ಹೆಚ್ಚು ಸಾರಿಗೆ ಬಸ್ಸುಗಳು ಬಂದು ಹೋಗುತ್ತದೆ. ಆದರೆ ಬಹುತೇಕ ಬಸ್ಸುಗಳು ನಿಲ್ದಾಣಕ್ಕೆ ಬರದೆ ನೇರವಾಗಿ ಬಸ್ ನಿಲ್ದಾಣದ ಮುಂದೆ ಸಾಗುತ್ತವೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕೂರಲು ಆಸನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಇಲ್ಲವಾಗಿದೆ. ಪ್ರಸ್ತುತ ಸಾರಿಗೆ ಬಸ್‌ನಿಲ್ದಾಣದಲ್ಲಿ ಈಗ ಖಾಸಾಗಿ ಕಾರುಗಳು, ಲಾರಿಗಳು ಮತ್ತು ಎತ್ತಿನಗಾಡಿಗಳು ನಿಲ್ಲುವ ಕೇಂದ್ರವಾಗಿ ಪರಿವರ್ತನೆ ಆಗಿದೆ. ಸಾರಿಗೆ ಇಲಾಖೆಯ ಸಂಚಾರಿ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಬೀಗ ಜಡಿದಿದರುವುದು ಕಾಣಬಹುದಾಗಿದೆ.