ಯಳಂದೂರು: ಸರ್ಕಾರವು ಪ್ರತಿ ಮನೆಯಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಿ ಉಪಯೋಗಿಸುವ ನಿಟ್ಟಿನಲ್ಲಿ ಕೋಟಿಗಟ್ಟೆಲೆ ಅನುದಾನವನ್ನು ನೀಡಿ ಪ್ರಚಾರ ಪಡಿಸಿ ಅನೇಕ ಕಾರ್ಯಕ್ರಮವನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿತ್ತಿದ್ದು, ಆದರೆ ತಾಲೂಕಿನ ಅಂಬಳೆ ಗ್ರಾಪಂನಲ್ಲಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ.!
ಈ ಗಾಪಂ ವ್ಯಾಪ್ತಿಯಲ್ಲಿ ವೈಯುಕ್ತಿಕ ಶೌಚಗೃಹ ನಿರ್ಮಾಣ ಮಾಡಿರುವ ಫಲಾನುಭವಿಗಳಿಗೆ ಕಳೆದ ವರ್ಷದಿಂದ ಸಹಾಯಧನ ನೀಡದ ಕಾರಣ ಕಚೇರಿಗೆ ದಿನನಿತ್ಯ ಅಲೆದಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಬಳೆ, ಅಂಬಳೆ 2, ಚಂಗಚಹಳ್ಳಿ, ಹೆಗ್ಗಡೆ ಹುಂಡಿ, ವೈ.ಕೆ.ಮೋಳೆ ಗ್ರಾಮಗಳು ಇದರ ವ್ಯಾಪ್ತಿಗೆ ಬರುತ್ತದೆ. 100ಕ್ಕೂ ಹೆಚ್ಚು ಫಲಾನುವಿಗಳು ಸ್ವಚ್ಛ ಭಾರತ್ ಯೋಜನೆ ಮೂಲಕ ವೈಯುಕ್ತಿಕ ಶೌಚಗೃಹವನ್ನು ನಿರ್ಮಾಣ ಮಾಡಿಕೊಂಡು ವರ್ಷ ಕಳೆದರೂ ಇನ್ನೂ ಇವರಿಗೆ ಬಿಲ್ ಪಾವತಿಯಾಗಿಲ್ಲ. ಪ.ಜಾತಿ, ಪಂಗಡದವರಿಗೆ 15 ಸಾವಿರ ಹಾಗೂ ಇತರೆ ವರ್ಗದ ಬಡವರ್ಗದವರಿಗೆ 12,500 ರೂ. ಸಹಾಯಧನ ನೀಡಬೇಕಾಗಿದೆ, ಆದರೂ ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಈ ಯೋಜನೆಯಲ್ಲಿ ಸಹಾಯಧನವನ್ನು ನೀಡದೆ ಮೀನಾಮೇಷ ಎಣಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಬಂಧಪಟ್ಟ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ. ಈ ಗ್ರಾಮ ವ್ಯಾಪ್ತಿಯಲ್ಲಿ ಇನ್ನೂ ಕೆಲವು ಮನೆಗಳಲ್ಲಿ ಶೌಚಾಲಯವಿಲ್ಲ. ಇವರು ಇನ್ನೂ ಶೌಚಕ್ಕೆ ಬಯಲನ್ನೇ ಆಶ್ರಯಿಸಿದ್ದಾರೆ. ಈಗ ಕಟ್ಟಿರುವವರಿಗೆ ಇನ್ನೂ ಬಿಲ್ ಪಾವತಿಯಾಗದ ಕಾರಣ, ಇದಿಲ್ಲದಿದ್ದವರು ಇದಕ್ಕಾಗಿ ಇನ್ನಷ್ಟು ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಬಳೆ ಗ್ರಾಪಂ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಬಡವರ್ಗದ ಫಲಾನುಭವಿಗಳು ಶೌಚಗೃಹ ನಿರ್ಮಿಸಿಕೊಂಡು ವರ್ಷ ಕಳೆದರೂ ಪಂಚಾಯಿತಿ ಅಧಿಕಾರಿಗಳು ಸಹಾಯಧನವನ್ನೂ ನೀಡಿಲ್ಲ. ಸರ್ಕಾರದ ಯೋಜನೆ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ, ಈ ಬಗ್ಗೆ ಮೇಲಧಿಕಾರಿಗಳು ತಕ್ಷಣ ಹಣವನ್ನು ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು.
-ಎಂ.ನಾಗರಾಜು, ವೈ.ಕೆ.ಮೋಳೆ ನಿವಾಸಿ ಅಂಬಳೆ
ಗ್ರಾಪಂಗೆ ವರ್ಗಾವಣೆಯಾಗಿ ಇತ್ತೀಚೆಗೆ ಬಂದಿದ್ದು, ಸ್ವತ್ಛ ಭಾರತ್ ಯೋಜನೆ ಮೂಲಕ ವೈಯುಕ್ತಿಕ ಶೌಚಗೃಹ ನಿರ್ಮಿಸಿರುವ ಫಲಾನುಭವಿ ಗಳಿಗೆ ಸಹಾಯಧನವನ್ನು ನೀಡುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ವಹಿಸಲಾಗುವುದು.
-ಮಮತಾ, ಪಿಡಿಒ, ಅಂಬಳೆ ಗ್ರಾಪಂ