Advertisement

Drinking Water, ಮೇವಿನ ಕೊರತೆ ; ಎದುರಾಗದಂತೆ ಮುನ್ನೆಚ್ಚರಿಕೆ: ಕೃಷ್ಣ ಬೈರೇಗೌಡ

12:35 AM Mar 02, 2024 | Team Udayavani |

ಬೆಂಗಳೂರು: ಈವರೆಗೆ ಬರಪರಿಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟಿದ್ದು, ಮಾರ್ಚ್‌, ಎಪ್ರಿಲ್‌ನಲ್ಲಿ ಸಮಸ್ಯೆ ಉಲ್ಬಣಿಸಬಹುದು ಎಂಬ ಅಂದಾಜು ಮಾಡಲಾಗಿದೆ. ಹೀಗಾಗಿ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ 116 ಹಳ್ಳಿಗಳಲ್ಲಿ 175 ಟ್ಯಾಂಕರ್‌ ಮೂಲಕ ಕುಡಿಯುವ ನೀರು ಒದಗಿಸುತ್ತಿದ್ದು, 382 ಹಳ್ಳಿಗಳಲ್ಲಿ 445 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದಲ್ಲದೆ, 9 ನಗರ ಸ್ಥಳೀಯ ಸಂಸ್ಥೆಗಳ 57 ವಾರ್ಡ್‌ಗಳಿಗೆ 24 ಟ್ಯಾಂಕರ್‌ ಮತ್ತು 29 ವಾರ್ಡ್‌ಗಳಿಗೆ 17 ಖಾಸಗಿ ಬೋರ್‌ವೆಲ್‌ಗ‌ಳ ಮೂಲಕ ಕುಡಿಯುವ ನೀರು ಕೊಡಲಾಗುತ್ತಿದೆ ಎಂದರು.

7,080 ಬೋರ್‌ ಬಾಡಿಗೆಗೆ?
ಮುಂದಿನ ದಿನಗಳಲ್ಲಿ 7,377 ಗ್ರಾಮಗಳು ಹಾಗೂ 1,272 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಹುದು ಎಂದು ಅಂದಾಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ 7,080 ಖಾಸಗಿ ಬೋರ್‌ವೆಲ್‌ಗ‌ಳನ್ನು ಬಾಡಿಗೆಗೆ ಪಡೆಯಲು ಗುರುತಿಸಿದ್ದು, 3,757 ಬೋರ್‌ವೆಲ್‌ ಮಾಲಕರ ಜತೆಗೆ ಬಾಡಿಗೆ ಕರಾರು ಕೂಡ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮೇವು ಕೊರತೆ ಇಲ್ಲ
ರಾಜ್ಯದಲ್ಲಿ ಪ್ರಸ್ತುತ 144 ಲಕ್ಷ ಟನ್‌ ಮೇವು ಲಭ್ಯವಿದ್ದು, ಮುಂದಿನ 27 ವಾರಗಳ ಬಳಕೆಗೆ ಸಾಕಾಗಲಿದೆ. 25 ಜಿಲ್ಲೆಗಳಲ್ಲಿ ಹೆಚ್ಚುವರಿ ಮೇವು ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಮೇವಿನ ಕಿಟ್‌ ಖರೀದಿಗಾಗಿ ಪಶು ಸಂಗೋಪನೆ ಇಲಾಖೆಗೆ ಎಸ್‌ಡಿಆರ್‌ಎಫ್ ಮೂಲಕ 20 ಕೋಟಿ ರೂ. ಕೊಟ್ಟಿದ್ದು, 7.62 ಲಕ್ಷ ಮಿನಿ ಕಿಟ್‌ ಖರೀದಿಸಿ 4.19 ಲಕ್ಷ ರೈತರಿಗೆ ವಿತರಿಸಲಾಗಿದೆ. ಜಿಲ್ಲೆಗೊಂದು ಗೋಶಾಲೆ ಇದ್ದು, ಹೋಬಳಿ ಮಟ್ಟದಲ್ಲೂ ಗೋಶಾಲೆ ಮತ್ತು ಮೇವಿನ ಬ್ಯಾಂಕ್‌ ಸ್ಥಾಪಿಸಲು ಅನುಮತಿ ಕೊಡಲಾಗಿದೆ ಎಂದು ವಿವರಣೆ ನೀಡಿದರು.

ಬರ ನಿರ್ವಹಣೆಗೆ 861 ಕೋಟಿ
ಟ್ಯಾಂಕರ್‌ ಆಗಲೀ, ಕೊಳವೆಬಾವಿ ಮಾಲಕರಿಗಾಗಲೀ 15 ದಿನಕ್ಕೊಮ್ಮೆ ಹಣ ಪಾವತಿಸಬೇಕು ಎಂದು ಸೂಚಿಸಿದ್ದು, ನವೆಂಬರ್‌ನಿಂದ ಈವರೆಗೆ ಬಳಕೆ ಮಾಡಿಕೊಂಡೂ ಹಣ ಪಾವತಿಸದಿದ್ದರೆ 10 ದಿನದಲ್ಲಿ ಲೆಕ್ಕಾ ಚುಕ್ತಾ ಮಾಡಲು ಸೂಚಿಸಲಾಗಿದೆ. ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 725.92 ಕೋಟಿ ರೂ. ಹಾಗೂ ತಹಶೀಲ್ದಾರ್‌ ಖಾತೆಯಲ್ಲಿ 135.40 ಕೋಟಿ ರೂ. ಸೇರಿ ಒಟ್ಟು 861.32 ಕೋಟಿ ರೂ. ಅನುದಾನ ಲಭ್ಯವಿದೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next