ಯಳಂದೂರು: ತಾಲೂಕಿನಲ್ಲಿ ಪಶು ಚಿಕಿತ್ಸಾ ಕೇಂದ್ರಗಳಿದ್ದರೂ ವೈದ್ಯರು, ಸಿಬ್ಬಂದಿ ಕೊರತೆಯಿಂದ ಖಾಲಿ ಕಾಣುತ್ತಿವೆ. ಪಶುಗಳಿಗೆ ಸಮರ್ಪಕ ಚಿಕಿತ್ಸೆ ಇಲ್ಲದೇ ರೈತರು ಪರದಾಡುತ್ತಿದ್ದಾರೆ. ಒಬ್ಬ ವೈದ್ಯ 7 ಕಡೆ ಚಿಕಿತ್ಸಾ ಕೇಂದ್ರಗಳಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಇಲಾಖೆ ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ.
ತಾಲೂಕಿನಲ್ಲಿ ದುಗ್ಗಹಟ್ಟಿ, ಹೊನ್ನೂರು, ಕೆಸ್ತೂರು, ಅಗರ-ಮಾಂಬಳ್ಳಿ, ಯರಿಯೂರು, ಮದ್ದೂರು, ಅಂಬಳೆ, ಕಂದಹಳ್ಳಿ, ಉಪ್ಪಿನಮೋಳೆ, ಗೌಡಹಳ್ಳಿ, ಕೊಮಾರನಪುರ ಸೇರಿ ತಾಲೂಕಿನಲ್ಲಿ 10,854 ರಾಸು, 15,985 ಕುರಿ, ಮೇಕೆ, ಹಂದಿ ಸೇರಿ ಇತರೆ ಜಾನುವಾರುಗಳ ಸಂಖ್ಯೆ ಇದೆ.
ವೈದ್ಯರು, ಸಿಬ್ಬಂದಿ ಕೊರತೆ ತೀವ್ರ: ಜಾನು ವಾರುಗಳಿಗೆ ಆರೋಗ್ಯ ಸೇವೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಮಳೆಗಾಲದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ, ಚರ್ಮಗಂಟು ಸೇರಿ ಇತರೆ ಕಾಯಿಲೆಗಳು ಬಾಧಿಸುತ್ತವೆ. ಇದನ್ನು ತಡೆಯಲು ತಾಲೂಕಿನ ಪಶು ಸಂಗೋಪನಾ ಇಲಾಖೆಯ ಅಡಿಯಲ್ಲಿ ಪಶು ಚಿಕಿತ್ಸಾ ಕೇಂದ್ರಗಳಿದ್ದರೂ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದ ತಾಲೂಕಿನಲ್ಲಿ ಅಗರ, ಕೆಸ್ತೂರು, ಹೊನ್ನೂರು, ಗುಂಬಳ್ಳಿ, ಬಿಳಿಗಿರಿರಂಗನಬೆಟ್ಟ ಸೇರಿ 5 ಪಶು ಚಿಕಿತ್ಸಾ ಕೇಂದ್ರಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ.
ಸೇವೆಗಳಿಗೆ ತೊಡುಕು: ತಾಲೂಕಿನ ಪಶು ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆಯಿಂದ ರೈತರಿಗೆ ಅಗತ್ಯ ಸೇವೆ ಒದಗಿಸಲು ಸಮಸ್ಯೆ ಆಗಿದೆ. ಕರ್ತವ್ಯದ ಲ್ಲಿರುವ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೂ, ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಯಲ್ಲಿ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವುದು, ದೇಶಿ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ, ಪಶು ಆರೋಗ್ಯ ಸೇವೆ ಕಲ್ಪಿಸುವುದು, ಬ್ಯಾಕ್ಟೀರಿಯಾ ಹಾಗೂ ವೈರಸ್ ರೋಗಗಳ ಪತ್ತೆ ಹಚ್ಚುವಿಕೆ, ರೋಗಗಳಿಂದ ನರಳುತ್ತಿರುವ ಪ್ರಾಣಿಗಳಿಗೆ ಚಿಕಿತ್ಸೆ ಹಾಗೂ ಪ್ರಾಣಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ, ಸರ್ಕಾರದ ಯೋಜನೆಗಳನ್ನು ಸೇವೆಗಳನ್ನು ಒದಗಿಸಲು ಇಲಾಖೆಗೆ ಸಿಬ್ಬಂದಿ ಕೊರತೆ ತೊಡಕಾಗುತ್ತಿದೆ.
ಖಾಲಿ ಹುದ್ದೆಗಳು: ತಾಲೂಕಿನಲ್ಲಿ 7 ಪಶುವೈದ್ಯಾಧಿಕಾರಿಗೆ ಒಬ್ಬ ವೈದ್ಯರು ಮಾತ್ರ ಇದ್ದಾರೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರು ಸೇರಿ 3 ಹುದ್ದೆ ಇದ್ದು ಎಲ್ಲವೂ ಖಾಲಿಯಾಗಿದೆ. ನಾಲ್ವರು ಕಿರಿಯ ಪಶು ಪರೀಕ್ಷಕರು ಬೇಕಿದೆ. ಒಬ್ಬರು ಮಾತ್ರ ಇದ್ದು ಉಳಿದ ಮೂರು ಹುದ್ದೆ ಖಾಲಿಯಾಗಿವೆ. ಇದರೊಂದಿಗೆ ವಾಹನ ಚಾಲಕರ ಒಂದು ಹುದ್ದೆಯೂ ಖಾಲಿ ಇದೆ. 11 ಮಂದಿ ಡಿ.ದರ್ಜೆ ನೌಕರರ ಹುದ್ದೆ ಇದೆ. ಇದರಲ್ಲಿ 7 ಹುದ್ದೆ ಖಾಲಿಯಾಗಿವೆ. ಒಟ್ಟು 21 ಖಾಲಿ ಹುದ್ದೆ ಇದ್ದು, ಹಾಲಿ ಕೆಲಸ ನಿರ್ವಹಿಸುವ ಒಟ್ಟು 12 ಸಿಬ್ಬಂದಿ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ.
ತಾಲೂಕಿನಲ್ಲಿ ವೈದ್ಯರ ಕೊರತೆಯಿಂದ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಹವಾಮಾನ ವೈಪರಿತ್ಯದಿಂದ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಾಗ ಸೂಕ್ತ ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ಇದೆ. ಈ ಬಗ್ಗೆ ಇಲಾಖೆ ಮೇಲಧಿಕಾರಿಗಳು ಗಮನ ಹರಿಸಿ, ಕೂಡಲೇ ವೈದ್ಯರ ನೇಮಕ ಮಾಡಬೇಕು.
●ಮನು, ರೈತ, ಯಳಂದೂರು.
ಯಳಂದೂರು ತಾಲೂಕಿನ ಪಶು ಇಲಾಖೆಯಲ್ಲಿ ಖಾಲಿ ಇರುವ ಪ್ರಮುಖ ಹುದ್ದೆಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಸಿಬ್ಬಂದಿ ಕೊರತೆ ನಡುವೆಯೂ ಯಾರಿಗೂ ಸಮಸ್ಯೆ ಆಗದಂತೆ ಚಿಕಿತ್ಸೆ ನೀಡಲಾಗುತ್ತಿದೆ.
●ಡಾ.ಶಿವರಾಜು, ಪ್ರಭಾರ ಸಹಾಯಕ ನಿರ್ದೇಶಕ, ಪಶು ಇಲಾಖೆ, ಯಳಂದೂರು.
-ಫೈರೋಜ್‌ಖಾನ್