Advertisement

ಹೆಸರಿಗಷ್ಟೇ ನಮ್ಮ ಕ್ಲಿನಿಕ್‌: ವೈದ್ಯರೇ ಇಲ್ಲ ಸ್ವಾಮಿ!

06:17 PM Feb 12, 2023 | Team Udayavani |

ಸಕಲೇಶಪುರ: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿರವರ ಕನಸಿನ ಕೂಸಾದ ನಮ್ಮ ಕ್ಲಿನಿಕ್‌ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಗಳ ಪಾಲಿಗೆ ಆಸ್ಪತ್ರೆ ಇದ್ದು ಇಲ್ಲದಂತಹ ಪರಿಸ್ಥಿತಿ ನಿರ್ಮಾ ಣವಾಗಿದ್ದು ಈ ಯೋಜನೆಯಿಂದ ಜನಗಳ ತೆರಿಗೆ ಹಣ ವಿನಾಕಾರಣ ಪೋಲಾಗುತ್ತಿದೆ.

Advertisement

ನಗರ ಪ್ರದೇಶಗಳ ಜನರ ಅನುಕೂಲಕ್ಕಾಗಿ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಿ ಮೊಹಲ್ಲಾ ಆಸ್ಪತ್ರೆಗಳ ರೀತಿಯಂತೆ ಮುಖ್ಯಮಂತ್ರಿ ಬೊಮ್ಮಾಯಿರವರು ಕಳೆದ ಡಿ. 14 ರಂದು ಆನ್‌ ಲೈನ್‌ ಮೂಲಕ ರಾಜ್ಯದ 438ಕಡೆ ನಮ್ಮ ಕ್ಲಿನಿಕ್‌ ಗಳನ್ನು ಉದ್ಘಾಟನೆ ಮಾಡಿದ್ದರು. ಪಟ್ಟಣದ ಅರೇಹಳ್ಳಿ ರಸ್ತೆಯ ಖಾಸಗಿ ವ್ಯಕ್ತಿಯೋರ್ವರ ಮನೆಯೊಂದನ್ನು 5 ವರ್ಷಗಳ ಕಾಲ ಕ್ಕೆ ಪ್ರತಿ ತಿಂಗಳು ಸುಮಾರು 45 ಸಾವಿರ ರೂ.ಗಳಿಗೆ ಬಾಡಿಗೆ ಒಪ್ಪಂದ ಮಾಡಿ ಕೊಂಡು, ಕ್ಲಿನಿಕ್‌ನ್ನು ಆರಂಭ ಮಾಡಲಾಗಿತ್ತು. ಇಡಿ ಹಾಸನ ಜಿಲ್ಲೆಯಲ್ಲೆ ನಮ್ಮ ಕ್ಲಿನಿಕ್‌ಗಾಗಿ ಗುರುತಿಸಲಾದ ಮನೆ ಮಾದರಿಯಾಗಿತ್ತು ಅಲ್ಲದೆ ರಾಜ್ಯ ಹೆದ್ದಾರಿಯ ಬದಿಯಲ್ಲಿ ಕ್ಲಿನಿಕ್‌ ಉದ್ಘಾಟನೆ ಮಾಡಿದ್ದರಿಂದ ಕೇವಲ ಪಟ್ಟಣ ಮಾತ್ರವಲ್ಲ ಬೇಲೂರು ರಸ್ತೆಯಲ್ಲಿರುವ ಗ್ರಾಮಾಂತರ ಪ್ರದೇಶಗಳ ಜನಕ್ಕೂ ಅನುಕೂಲವಾಗಿತ್ತು.

ವೈದ್ಯರಿಲ್ಲದೆ ಸೊರಗುತ್ತಿರುವ ನಮ್ಮ ಕ್ಲಿನಿಕ್‌: ನಮ್ಮ ಕ್ಲಿನಿಕ್‌ಗಳಲ್ಲಿ ಸುಮಾರು 12 ರೀತಿಯ ಆರೋಗ್ಯ ಸೇವೆಗಳು ಲಭ್ಯ ಇರಬೇಕಿತ್ತು, ಜೊತೆಗೆ ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್‌ ಸ್ಟಾಪ್‌, ಲ್ಯಾಬ್‌ ಟೆಕ್ನಿಷಿಯನ್‌, ಡಿ ದರ್ಜೆ ನೌಕರರು ಇರಬೇಕಿತ್ತು. ಆದರೆ ಇಲ್ಲಿ ವೈದ್ಯರಿಲ್ಲದ ಕಾರಣ ಸಣ್ಣಪುಟ್ಟ ಕಾಯಿಲೆಗಳ ಚಿಕಿತ್ಸೆಗೆ ಬರುವ ರೋಗಿ ಗಳು ಇಲ್ಲಿ ಇರುವ ನರ್ಸ್‌ಗಳಿಂದ ಚಿಕಿತ್ಸೆ ಪಡೆಯ ಬೇಕಿದ್ದು ಕಾಯಿಲೆ ಹೆಚ್ಚಿದಲ್ಲೆ ಅನಿವಾರ್ಯವಾಗಿ ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆ ಹಾಗೂ ಖಾಸಗಿ ಕ್ಲಿನಿಕ್‌ಗಳಿಗೆ ರೋಗಿಗಳು ಹೋಗಬೇಕಾಗಿದೆ.

ವೈದ್ಯರಿಲ್ಲದೆ ರೋಗಿಗಳಿಗೆ ಹೊರೆ: ಪ್ರಾರಂಭದ ಕೆಲವು ದಿನಗಳ ಕಾಲ ವೈದ್ಯರೊಬ್ಬರನ್ನು ಇಲ್ಲಿಗೆ ತಾತ್ಕಾಲಿಕವಾಗಿ ನಿಯೋಜಿಸಲಾಗಿತ್ತು ಇದೀಗ ಖಾಯಂ ವೈದ್ಯರಿಲ್ಲದ ಕಾರಣ ರೋಗಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಆಟೋದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳು ಇಲ್ಲಿ ವೈದ್ಯರಿಲ್ಲದೆ ಪುನ: ಬೇರೆ ಆಸ್ಪತ್ರೆಗಳಿಗೆ ಹೋಗಬೇಕಾಗಿರುವ ಕಾರಣ ಬಡ ರೋಗಿಗಳು ಸುಮ್ಮನೆ ಆಟೋ ಬಾಡಿಗೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ತಾಯಿ ಮಗುವಿನ ಆರೈಕೆ: ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿ ಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ , ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮಾನಸಿಕ ರೋಗ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫ‌ರಲ್‌ ಸೇವೆಗಳು ಇಲ್ಲಿ ಇಲ್ಲಿ ಲಭ್ಯವಾಗಬೇಕಿತ್ತು. ಆದರೆ ಖಾಯಂ ವೈದ್ಯರಿಲ್ಲದೆ ಯಾವುದೆ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರಕದ ಪರಿಸ್ಥಿತಿ ನಿರ್ಮಾಣವಾಗಿದೆ.

ನಮ್ಮ ಕ್ಲಿನಿಕ್‌ ಸೇವಾ ಸಮಯದ ಬಗ್ಗೆ ಗೊಂದಲ: ಸೋಮವಾರ ದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 4.30ರ ತನಕ ಮಾತ್ರ ಇಲ್ಲಿ ಸೇವೆ ಲಭ್ಯವಿದ್ದು ಭಾನುವಾರ ರಜೆ ಇರಲಿದೆ. ಆದರೆ ಇಲ್ಲಿ ಸಮಯದ ಕುರಿತು ಬೋರ್ಡ್‌ ಹಾಕದಿರುವುದರಿಂದ ರೋಗಿಗಳು ಸಂಜೆಯ 4.30 ರ ನಂತರವು ಬಂದು ಆಸ್ಪತ್ರೆಗೆ ಬಾಗಿಲು ಹಾಕಿರುವುದನ್ನು ನೋಡಿ ಹಿಂತಿರುಗುತ್ತಿದ್ದಾರೆ.

ಕೂಡಲೆ ಕಾಯಂ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಸಂಜೆ 4.30 ನಂತರ ರಾತ್ರಿ 9.30 ರವರೆಗೆ ಸೇವೆಯ ವ್ಯವಸ್ಥೆ ಮಾಡಬೇಕು. ಇದರಿಂದ ಮಾತ್ರ ನಮ್ಮ ಕ್ಲಿನಿಕ್‌ ಯೋಜನೆಗೆ ಅರ್ಥ ಬರುತ್ತದೆ. – ಸುಧೀಶ್‌, ವಕೀಲರು, ಕುಡುಗರಹಳ್ಳಿ

ಇದೀಗ ಕಾಯಂ ವೈದ್ಯರ ನೇಮಕಾತಿಯಾಗಿದ್ದು , ಬುಧವಾರದಿಂದ ನಮ್ಮ ಕ್ಲಿನಿಕ್‌ನಲ್ಲಿ ಕಾಯಂ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. – ಡಾ.ಮಹೇಶ್‌, ತಾಲೂಕು ವೈದ್ಯಾಧಿಕಾರಿ

ಕ್ರಾಫ‌ರ್ಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿರಿಯ ನಾಗರಿಕರಿಗೆ ಈ ಆಸ್ಪತ್ರೆ ಅನುಕೂಲವಾಗಿತ್ತು. ಆದರೆ ಇದೀಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಸಣ್ಣಪುಟ್ಟ ಕಾಯಿಲೆಗಳಿಗೂ ಸಹ ಚಿಕಿತ್ಸೆ ದೊರಕುತ್ತಿಲ್ಲ. -ಧನ್ಯಕುಮಾರ್‌, ಹಿರಿಯ ನಾಗರಿಕ

– ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next