Advertisement

ಭದ್ರಾ ಡ್ಯಾಂನಲ್ಲಿ ಸೌಕರ್ಯ ಕೊರತೆ!

04:49 PM Aug 06, 2018 | |

ಶಿವಮೊಗ್ಗ: ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ಭದ್ರಾ ಜಲಾಶಯ ಭದ್ರತೆ, ಸೌಕರ್ಯಗಳಿಲ್ಲದೆ ನರಕ ದರ್ಶನ ಮಾಡಿಸುತ್ತಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದರೂ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ರಾಜಕಾರಣಿಗಳು ಮತ್ತು ವಿಐಪಿಗಳಿಗಷ್ಟೇ ಭದ್ರತೆ ಎನ್ನುವಂತಾಗಿದ್ದು ಬಾಗಿನ ಬಿಡಲು ಬರುವ ಕಾರುಗಳನ್ನು ಕಾಯುವುದಷ್ಟೇ ಪೊಲೀಸರ ಕೆಲಸವಾಗಿದೆ.

Advertisement

ದಾವಣಗೆರೆ ಜಿಲ್ಲೆ, ತರೀಕೆರೆ, ಭದ್ರಾವತಿಯಿಂದ ನಿತ್ಯ ತಂಡೋಪತಂಡವಾಗಿ ಜನ ಆಗಮಿಸುತ್ತಿದ್ದಾರೆ. ಭಾನುವಾರವಂತೂ ಕಿಕ್ಕಿರಿದು ಜನ ಸೇರಿರುತ್ತಾರೆ. ಗೇಟ್‌ ನಿಂದ ನೀರು ಹೊರಬಿಟ್ಟಿರುವುದರಿಂದ ಫೋಟೋ, ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಡ್ಯಾಂ ಒಳಗೆ ಸುಂದರ ಪ್ರಕೃತಿ ಇರುವುದರಿಂದ ನೀರಿಗಿಳಿದು ಸೆಲ್ಫಿ
ತೆಗೆದುಕೊಳ್ಳುತ್ತಿದ್ದಾರೆ. ಕೆಲ ಹುಡುಗರು ಅಪಾಯಕಾರಿ ಜಾಗಗಳಲ್ಲಿ ನಿಂತು ಫೋಟೋ ತೆಗೆದುಕೊಳ್ಳುತ್ತಿದ್ದು ಅವರಿಗೆ
ಕಡಿವಾಣ ಹಾಕುವವರು ಯಾರೂ ಇಲ್ಲದಂತಾಗಿದೆ. ಕೆಲ ಕಡೆ ಕಲ್ಲುಬಂಡೆಗಳು ಪಾಚಿಗಟ್ಟಿದ್ದು ಜಾರಿ ಬೀಳುವ ಆತಂಕ ಕೂಡ ಇದೆ. ಶನಿವಾರ ಇದೇ ರೀತಿ ಸಾಹಸ ಮಾಡಲು ಹೋದ ವ್ಯಕ್ತಿಯೊಬ್ಬ ಕಾಲುಜಾರಿ ಬಿದ್ದು ಕೈ ಮುರಿದುಕೊಂಡ ಘಟನೆ ನಡೆದಿದೆ.

ಬೇಲಿ ಇಲ್ಲ: ಜಲಾಶಯದ ಬಲಭಾಗದಿಂದ ಗೇಟ್‌ನಿಂದ ನೀರು ಹೊರಬಿಟ್ಟಿರುವುದರನ್ನು ನೋಡಲು ಪ್ರಶಸ್ತವಾದ ಸ್ಥಳವಾಗಿದೆ. ಆದರೇ ಈ ಭಾಗದಲ್ಲ ಬೇಲಿ ಇಲ್ಲ. ಈ ಭಾಗದಲ್ಲಿ ಜನರು 40 ಅಡಿಗೂ ಹೆಚ್ಚು ಎತ್ತವಿರುವ ಕಟ್ಟೆ ಪಕ್ಕದಲ್ಲೇ ನಿಂತು ಫೋಟೋ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಎಲ್ಲರಿಗಿಂತ ಉತ್ತಮ ಫೋಟೋ ಬರಲಿ ಎಂಬ ಉದ್ದೇಶದಿಂದ ರಿಸ್ಕ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಿದೆ. ಜಲಾಶಯದ ಎಡಭಾಗದಲ್ಲೂ ಅಲ್ಪ ಸ್ವಲ್ಪ ಬೇಲಿ ಇರುವುದು ಬಿಟ್ಟರೆ ಅಲ್ಲೂ ಭದ್ರತೆ ಇಲ್ಲ.

ಟಾಯ್ಲೆಟ್‌ ಇಲ್ಲ: ಜಲಾಶಯದ ಒಳಗೆ ಊಟ, ತಿಂಡಿ, ತಿನಿಸುಗಳನ್ನು ಕಟ್ಟಿಕೊಂಡು ಸಂಸಾರ ಸಮೇತ ಬರುವವರಿಗೇನೂ ಕಡಿಮೆ ಇಲ್ಲ. 4 ವರ್ಷ ನಂತರ ಡ್ಯಾಂ ಭರ್ತಿಯಾಗಿರುವುದರಿಂದ ನಿರೀಕ್ಷೆಗಿಂತಲೂ ಹೆಚ್ಚಿನ ಬರುತ್ತಿದ್ದಾರೆ. ಇಷ್ಟೆಲ್ಲಾ ಜನಕ್ಕೆ ಒಂದೇ ಒಂದು ಶೌಚಾಲಯ ಇಲ್ಲ. ಡ್ಯಾಂ ಒಳಭಾಗ ಹಾಗೂ ಹೊರಭಾಗದಲ್ಲೂ ಇಲ್ಲ.
ಐಬಿ ಕಟ್ಟಡ ವಿಐಪಿಗಳಿಗೆ ಮಾತ್ರ ಸೀಮಿತವಾಗಿದೆ.

ಇದರಿಂದ ಜನ ಬಯಲನ್ನೇ ಆಶ್ರಯಿಸಿದ್ದಾರೆ. ಜಲಬಾಧೆ ತಡೆಯದೇ ಸಾರ್ವಜನಿಕರ ಎದುರೇ ಮೂತ್ರ ವಿಸರ್ಜನೆ
ಮಾಡುವ ದೃಶ್ಯಗಳು ಸಾಮಾನ್ಯವಾಗಿದೆ. ಇನ್ನು ಬೇಲಿ ಮರೆ ಹೋಗಲೂ ಅವಕಾಶವಿಲ್ಲದಂತಾಗಿದೆ.

Advertisement

ಲೋಕಸಭೆ ಚುನಾವಣೆ ಹಾಗೂ ಬಾಗಿನ ಪ್ರಕೃತಿ ಕೃಪೆಯಿಂದ ಭರ್ತಿಯಾಗಿರುವ ಜಲಾಶಯಕ್ಕೆ ಬಾಗಿನ ಅರ್ಪಿಸುವ ರಾಜಕೀಯ ಜೋರಾಗಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮುಖಂಡರು ಪ್ರತ್ಯೇಕವಾಗಿ ಆಗಮಿಸಿ ಬಾಗಿನ ಅರ್ಪಿಸುವ ಜತೆಗೆ ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ. ಜಲಾಶಯ ತೋರಿಸುವ ನೆಪದಲ್ಲಿ ಬಸ್‌ ವ್ಯವಸ್ಥೆ ಮಾಡಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ಅವರಿಗೆ ಊಟ ಹಾಕಿಸುವ ಮೂಲಕ ಮತ ಹಾಕುವಂತೆ ಪ್ರೇರೇಪಿಸಲಾಗುತ್ತಿದೆ. ಮೊದಲು ದಾವಣಗೆರೆ ಕಾಂಗ್ರೆಸ್‌ ಶಾಸಕರು, ನಂತರ ಬಿಜೆಪಿ ಶಾಸಕರು ಸಂಸದರು ಆಗಮಿಸಿ ಬಾಗಿನ ಬಿಟ್ಟು ಕಾರ್ಯಕ್ರಮ ನಡೆಸಿ ಲೋಕಸಭೆ ಚುನಾವಣೆಗೆ ರಣಕಹಳೆ ಊದಿದರು

ಗೇಟ್‌ನಿಂದ ನೀರು ಬಿಟ್ಟಿರುವುದರಿಂದ ಫೋಟೋ ತೆಗೆದುಕೊಳ್ಳಲು ತುಂಬಾ ಜನ ಬರುತ್ತಾರೆ. ಆದರೆ ಇಲ್ಲಿ ಯಾಮಾರಿದರೆ ಕೆಳಗೆ ಬೀಳ್ಳೋದು ಗ್ಯಾರಂಟಿ. ಇಷ್ಟೊಂದು ಜನ ಬಂದರೂ ಬೇಲಿ ಮಾಡಿಲ್ಲ. ಫೋಟೋ ತೆಗೆಸಿಕೊಳ್ಳಲು ಒಂದೇ ಒಂದು ಸ್ಥಳವಿಲ್ಲ.
 ಅನಿಲ್‌, ಪ್ರವಾಸಿಗ

ಬಹಳ ವರ್ಷ ಆಗಿತ್ತು ಡ್ಯಾಂ ತುಂಬಿ. ಅದಕ್ಕೆ ನೋಡಲು ಬಂದೆವು. ಇಲ್ಲಿ ಯಾವ ವ್ಯವಸ್ಥೆಯೂ ಸರಿ ಇಲ್ಲ. ಕೆಲವರು ರಸ್ತೆ ಪಕ್ಕವೇ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ನಮಗೆ ಮುಜುಗರ ಆದರೂ ಸಹಿಸಿಕೊಳ್ಳಬೇಕಿದೆ. ಇಷ್ಟು ದೊಡ್ಡ ಡ್ಯಾಂನಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯ ಇಲ್ಲ
 ವಿದ್ಯಾ, ಪ್ರವಾಸಿ

„ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next