Advertisement

ಶವ ಸಂಸ್ಕಾರಕ್ಕೆ ಹಳ್ಳ-ಕೊಳ್ಳಗಳೇ ಗತಿ

04:39 PM Jan 08, 2020 | Team Udayavani |

ಕುಕನೂರು: ಸರಕಾರ ಹಳ್ಳಿ ಜನತೆ ಬದುಕು ಹಸನುಗೊಳಿಸುವುದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಜನತೆಗೆ ಅವಶ್ಯವಾಗಿರುವ ಕೆಲ ಮೂಲಸೌಕರ್ಯ ಸಿಗುತ್ತಿಲ್ಲ ಎಂಬುದಕ್ಕೆ ಕುಕನೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಇದುವರೆಗೂ ರುದ್ರಭೂಮಿ ಇಲ್ಲದಿರುವುದೇ ಸಾಕ್ಷಿಯಾಗಿದೆ.

Advertisement

ಕಂದಾಯ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನ ಗೋರ್ಲೆಕೊಪ್ಪ, ವೀರಾಪುರ, ನಿಟ್ಟಾಲಿ, ಆಡೂರು, ಚಿತ್ತಾಪುರ, ಕೋಮಲಾಪುರ, ಭಟಪ್ಪನಹಳ್ಳಿ, ನೆಲಜೇರಿ, ಚಿಕ್ಕಬಿಡನಾಳ, ಚಂಡಿನಾಳ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ರುದ್ರಭೂಮಿ ಇಲ್ಲ. 14 ಗ್ರಾಮಗಳಲ್ಲಿ ಮಂಗಳೂರು ಹೋಬಳಿಯ 7 ಗ್ರಾಮಗಳ ಹಾಗೂ ಕುಕನೂರು ಹೋಬಳಿಯ 1 ಗ್ರಾಮದಲ್ಲಿ ಸ್ಥಳವನ್ನು ಗುರುತಿಸಿದ್ದು ಬಿಟ್ಟರೆ ಮುಂದಿನ ಕ್ರಮವಾಗಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಹಳ್ಳ ಕೊಳ್ಳಗಳೇ ಗತಿ: ಈ ಎಲ್ಲ ಗ್ರಾಮಗಳಲ್ಲಿ ರುದ್ರಭೂಮಿಗೆ ಸ್ಥಳಾವಕಾಶ ಇಲ್ಲದಿರುವುದರಿಂದ ಹಳ್ಳ-ಕೊಳ್ಳಗಳಲ್ಲಿಶವ ಸಂಸ್ಕಾರ ಮಾಡಲಾಗುತ್ತಿದೆ. ಇನ್ನು ಜಮೀನು ಹೊಂದಿದ ಕುಟುಂಬದವರು ತಮ್ಮ ಜಮೀನುಗಳಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಜಮೀನು ಇಲ್ಲದವರಿಗೆ ಹಳ್ಳ, ಕೊಳ್ಳಗಳೇ ಗತಿಯಾಗಿದ್ದು, ಮಳೆಗಾಲದಲ್ಲಿ ಶವಸಂಸ್ಕಾರ ಮಾಡುವುದಕ್ಕೆ ಜನತೆ ಹರಸಾಹಸ ಪಡಬೇಕಾಗಿದೆ. ಜಮೀನು ಮಾರಾಟ ಮಾಡುವವರಿಲ್ಲ: ಸರಕಾರ ರುದ್ರಭೂಮಿ ಇಲ್ಲದಿರುವ ಗ್ರಾಮಗಳನ್ನು ಗುರುತಿಸಿ, ಅವಶ್ಯ ಇರುವ ಕಡೆಗಳಲ್ಲಿ ಸರಕಾರಿ ಜಮೀನು ಇಲ್ಲದಿರುವುದರಿಂದ ಅನಿವಾರ್ಯವಾಗಿ ಖಾಸಗಿಯವರಿಂದ ಜಮೀನು ಪಡೆಯಬೇಕಿದೆ. ಆದರೆ ರುದ್ರಭೂಮಿಗೆ ಜಮೀನು ಖರೀದಿ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಯೋಗ್ಯ ಪರಿಹಾರ ನೀಡುವುದಾಗಿ ಅಧಿ ಕಾರಿಗಳು ಹೇಳುತ್ತಿದ್ದರೂ ಜಮೀನು ಮಾಲೀಕರು ಮನಸ್ಸು ಮಾಡುತ್ತಿಲ್ಲ.

ಮಾನವೀಯತೆ ಮೆರೆಯುವುದು ಅವಶ್ಯ: ಸಮರ್ಪಕ ಹಾಗೂ ರುದ್ರಭೂಮಿಗಳು ಇಲ್ಲದಿರುವುದರಿಂದ ಹಳ್ಳಿಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಮೊದಲೇ ಕುಟುಂಬದ ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಗಳ ಸಂಬಂಧಿಕರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತ ಹಾಗೋ ಹೀಗೋ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಾದರೂ ಆಯಾ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ರುದ್ರಭೂಮಿಗಳಿಗೆ ಅವಶ್ಯ ಇರುವ ಜಾಗವನ್ನು ಜಮೀನು ಮಾಲೀಕರ ಮನವೊಲಿಸಿ ಖರೀದಿಸಿ ಮಾನವೀಯತೆ ಮೆರೆಯುವುದು ಅವಶ್ಯವಾಗಿದೆ.

ಮಂಡಲಗೇರಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅಂತ್ಯ ಸಂಸ್ಕಾರ ಮಾಡುತ್ತಾ ಬಂದ ಸ್ಥಳದಲ್ಲಿ ಕಳೆದ ವರ್ಷ ಜಾತ್ರೆ ಸಮಯದಲ್ಲಿ ಮೃತ ವ್ಯಕ್ತಿಯ ಹಾಗೂ ಜಾಗ ಮಾಲೀಕನ ವೈಮನಸ್ಸಿನಿಂದ ಅಂತ್ಯ ಸಂಸ್ಕಾರ ಮಾಡಬೇಡಿ ಎಂದು ತಡೆಯಲಾಗಿತ್ತು. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರಗಳು ತಡೆಯಬೇಕಾದರೆ ಜಾಗೆ ಖರೀದಿಸಿ ಸರ್ವಧರ್ಮಗಳ ಶವ ಸಂಸ್ಕಾರ ಅನುಕೂಲ ಮಾಡಬೇಕು.-ಮಂಡಲಗೇರಿ ಗ್ರಾಮಸ್ಥರು

Advertisement

 

-ಎಲ್‌. ಮಂಜುನಾಥಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next