ವಾಡಿ: ಸುಸಜ್ಜಿತ ಭವ್ಯ ಕಟ್ಟಡದಲ್ಲಿ ತರಗತಿಗಳ ಪಾಠ ಆಲಿಸುತ್ತಿರುವ ಅಲ್ಪಸಂಖ್ಯಾತ ಮಕ್ಕಳ ಊಟಕ್ಕೆ ಪೆಟ್ಟು ಬಿದ್ದಿದೆ. ಅಡುಗೆ ಸಿಬ್ಬಂದಿ ಕೊರತೆ ಕಾರಣ ಊಟದ ತಟ್ಟೆಯಿಂದ ರೊಟ್ಟಿ ಕಣ್ಮರೆಯಾಗಿದೆ.
ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿವರೆಗಿನ ಸುಮಾರು 250 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲ ಸವಲತ್ತು ಚೆನ್ನಾಗಿದ್ದರೂ ಅಗತ್ಯಕ್ಕೆ ತಕ್ಕಷ್ಟು ಅಡುಗೆ ಸಿಬ್ಬಂದಿ ನೇಮಕವಾಗದ ಕಾರಣ ರೊಟ್ಟಿ ವಿತರಣೆಯಲ್ಲಿ ತೊಡಕುಂಟಾಗಿದೆ.
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಡಿ ಗ್ರೂಪ್ ನೌಕರರ ನೇಮಕವಾಗಿಲ್ಲ. 11 ಸಿಬ್ಬಂದಿ ನೇಮಕವಾಗಬೇಕಿದ್ದ ಜಾಗದಲ್ಲಿ ಕೇವಲ ಏಳು ಮಂದಿಯನ್ನು ಜಿಲ್ಲಾಡಳಿತ ನೇಮಿಸಿದೆ. ಇವರಲ್ಲಿ ಕೇವಲ ಮೂವರು ಅಡುಗೆಗೆ ನೇಮಕವಾಗಿದ್ದು, ಇಬ್ಬರು ಅಡುಗೆಯವರಾದರೆ ಒಬ್ಬರು ಅಡುಗೆ ಸಹಾಯಕರಾಗಿದ್ದಾರೆ. ಹಾಜರಾತಿ ಇರುವ 190 ವಿದ್ಯಾರ್ಥಿಗಳಿಗೆ ತಲಾ ಎರಡು ರೊಟ್ಟಿಯಂತೆ ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ಸುಮಾರು 400 ರೊಟ್ಟಿ ತಟ್ಟಬೇಕಾಗುತ್ತದೆ. ಮಕ್ಕಳ ಹಾಜರಾತಿ ಪೂರ್ಣ ಪ್ರಮಾಣದಲ್ಲಿದ್ದರೆ ದಿನಕ್ಕೆ ಸಾವಿರ ರೊಟ್ಟಿ ತಟ್ಟಬೇಕಾಗುತ್ತದೆ. ಇಬ್ಬರು ಮಹಿಳೆಯರಿಂದ ಇಷ್ಟೊಂದು ರೊಟ್ಟಿ ತಟ್ಟಲು ಸಾಧ್ಯವಾಗದೆ ಕೇವಲ ಒಂದು ರೊಟ್ಟಿ ಮಾತ್ರ ಮಕ್ಕಳಿಗೆ ನೀಡಲಾಗುತ್ತಿದೆ. ಇನ್ನು ಊಟದ ಕೋಣೆಗಳಿಗೆ ಅಗತ್ಯವಿರುವ ಎಲ್ಲ ಅಡುಗೆ ಪದಾರ್ಥಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪೂರೈಸಲಾಗಿದೆ.
ಪ್ರತಿ ದಿನವೂ ಮಕ್ಕಳಿಗೆ ಕೇಳಿದಷ್ಟು ಪಲ್ಲೆ ಮತ್ತು ಅನ್ನ ನೀಡಲಾಗುತ್ತಿದೆ. ಆದರೆ ನೀಡಬೇಕಾದ ಎರಡು ಚಪಾತಿ ಅಥವಾ ಜೋಳದ ರೊಟ್ಟಿಯಲ್ಲಿ ಒಂದನ್ನು ಮಾತ್ರ ವಿತರಿಸಲಾಗುತ್ತಿದೆ. ಅಡುಗೆ ಸಿಬ್ಬಂದಿ ಕೊರತೆ ವರ್ಷದಿಂದ ಮುಂದುವರಿದಿದ್ದರೂ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿಲ್ಲ ಎಂಬುದು ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರ ಆರೋಪವಾಗಿದೆ.
ಹೆಚ್ಚಿನ ಅಡುಗೆ ಸಿಬ್ಬಂದಿ ನೇಮಕ ಅಸಾಧ್ಯವಾಗಿರುವ ಕಾರಣ ಇದ್ದವರನ್ನೇ ಬಳಸಿಕೊಂಡು ಮಕ್ಕಳಿಗೆ ಎರಡು ರೊಟ್ಟಿ ವಿತರಿಸುವಂತೆ ಮೊರಾರ್ಜಿ ವಸತಿ ಶಾಲೆಗಳ ಪ್ರಾಂಶುಪಾಲರಿಗೆ ಆದೇಶ ನೀಡಿದ್ದೇನೆ. ಮಕ್ಕಳ ಊಟಕ್ಕೆ ರೊಟ್ಟಿ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ.
-ಮಹೆಮೂದ್ ಎಸ್., ಜಿಲ್ಲಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕಲಬುರಗಿ
-ಮಡಿವಾಳಪ್ಪ ಹೇರೂರ