Advertisement

ಆಸ್ಪತ್ರೆಗಳಲ್ಲಿ ಹಾಸಿಗೆಗಳದ್ದೇ ಕೊರತೆ; ರಕ್ತಕ್ಕೆ ಭಾರೀ ಬೇಡಿಕೆ  

05:30 AM Jul 20, 2017 | |

ಮಹಾನಗರ: ಎಚ್‌1ಎನ್‌1, ಡೆಂಗ್ಯೂ ಸಹಿತ ವಿವಿಧ ಸಾಂಕ್ರಾಮಿಕ ರೋಗ ಬಾಧಿತರ ಸಂಖ್ಯೆ ಹೆಚ್ಚುತ್ತಿದ್ದು, ನಗರದ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಳ್ಳಲು ಹಾಸಿಗೆಗಳ ಕೊರತೆ ಎದುರಾಗಿದೆ. ಇನ್ನೊಂದೆಡೆ ಡೆಂಗ್ಯೂನಂತಹ ಕಾಯಿಲೆಗಳಿಗೆ ಸಕಾಲದಲ್ಲಿ ರಕ್ತ ನೀಡುವುದಕ್ಕೆ ಬ್ಲಡ್‌ ಬ್ಯಾಂಕ್‌ಗಳಲ್ಲಿ ಬೇಡಿಕೆಯ ಜತೆಗೆ ಒತ್ತಡವೂ ಜಾಸ್ತಿಯಾಗಿದೆ. ಹದಿನೈದು ದಿನಗಳ ಹಿಂದಷ್ಟೇ ಒಟ್ಟು 105 ಮಂದಿಗೆ ಎಚ್‌1ಎನ್‌1 ಇರುವುದು ದೃಢಪಟ್ಟಿದ್ದರೆ, ಜು. 18ರ ವೇಳೆಗೆ ಈ ಪಟ್ಟಿಗೆ 51 ಮಂದಿ ಹೊಸ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಇಲ್ಲಿವರೆಗೆ 156 ಮಂದಿಗೆ ಜಿಲ್ಲೆಯಲ್ಲಿ ಎಚ್‌1ಎನ್‌1 ದೃಢಪಟ್ಟಿದೆ. ಇದರೊಂದಿಗೆ ಮಲೇರಿಯಾ, ಡೆಂಗ್ಯೂ ಹಿನ್ನೆಲೆಯಲ್ಲೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಮಳೆ- ಬಿಸಿಲಿನ ಕಣ್ಣಾಮುಚ್ಚಾಲೆಯಿಂದಾಗಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಜತೆಗೆ ಸೊಳ್ಳೆ ಉತ್ಪತ್ತಿಗೆ ಪೂರಕ ವಾತಾವರಣವೂ ನಿರ್ಮಾಣವಾಗುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ.

Advertisement

ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ
ನಗರದ ಕೆಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಗ್ರಾಮೀಣ ಆಸ್ಪತ್ರೆಗಳಲ್ಲಿ ದಾಖಲಾದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆತರುವುದೂ ಇದಕ್ಕೆ ಕಾರಣ. ಸಾಂಕ್ರಾಮಿಕ ರೋಗ ದಿಂದ ಬಳಲುತ್ತಿರುವವರು ಮಾತ್ರವಲ್ಲದೇ, ಇತರ ಒಳರೋಗಿಗಳೂ ದಾಖಲಾಗಿರುವ ಹಿನ್ನೆಲೆಯಲ್ಲಿ ಖಾಸಗಿ, ಅರೆ ಖಾಸಗಿ ವಾರ್ಡ್‌ಗಳೂ ಭರ್ತಿಯಾಗಿವೆ.
 
ಕೆಲವು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಇಲ್ಲದಿರುವುದರಿಂದ ರೋಗಿಗಳು ಸ್ವಇಚ್ಛೆಯಿಂದ ಬೇರೆಡೆಗೆ ತೆರಳುತ್ತಿದ್ದಾರೆ ಎಂದು ನಗರದ ಆಸ್ಪತ್ರೆಯೊಂದರಲ್ಲಿ ರೋಗಿಯೋರ್ವರ ಸಂಬಂಧಿ ಶಿಲ್ಪಾ ಹೇಳುತ್ತಾರೆ. ಆದರೆ ಆಸ್ಪತ್ರೆಗಳ ಸಿಬಂದಿ ಪ್ರಕಾರ, ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ನಿಜ. ಆದರೆ, ಯಾರನ್ನೂ ಚಿಕಿತ್ಸೆ ನೀಡದೆ ವಾಪಸು ಕಳುಹಿಸುತ್ತಿಲ್ಲ ಎನ್ನುತ್ತಾರೆ.

ರಕ್ತಕ್ಕೆ ಬೇಡಿಕೆ
ಸಾಂಕ್ರಾಮಿಕ ರೋಗಗಳ ಹಿನ್ನೆಲೆಯಲ್ಲಿ ರೋಗಿಗಳಿಗೆ ರಕ್ತ ಅಗತ್ಯವಾಗಿ ಬೇಕು. ಇದಕ್ಕಾಗಿ ರೆಡ್‌ಕ್ರಾಸ್‌ ಘಟಕ, ಬ್ಲಡ್‌ಬ್ಯಾಂಕ್‌ಗಳಲ್ಲಿ ವಿವಿಧ ಗುಂಪುಗಳ ರಕ್ತಕ್ಕಾಗಿ ಅನೇಕ ಕರೆಗಳು ಬರುತ್ತಿವೆ. ರಕ್ತದ ತುರ್ತು ಅಗತ್ಯಕ್ಕಾಗಿ ಸಾಮಾಜಿಕ ತಾಣಗಳಾದ ವಾಟ್ಸಪ್‌, ಫೇಸ್‌ಬುಕ್‌ಗಳಲ್ಲೂ ರೋಗಿಯ ಹೆಸರು, ರಕ್ತದ ಗುಂಪು, ಆಸ್ಪತ್ರೆ, ಮೊಬೈಲ್‌ ಸಂಖ್ಯೆ ಸಮೇತ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ.

“ಮೊದಲೆಲ್ಲ ಪ್ರತಿ ತಿಂಗಳು 500 ಯುನಿಟ್‌ ರಕ್ತ ರೆಡ್‌ಕ್ರಾಸ್‌ ಮುಖಾಂತರ ರೋಗಿಗಳಿಗೆ ಪೂರೈಕೆಯಾಗುತ್ತಿತ್ತು. ಆದರೆ ಈಗ ಮಾಮೂಲಿಗಿಂತ ಶೇ. 10ರಷ್ಟು ಅಧಿಕ ಬೇಡಿಕೆ ಹೆಚ್ಚಿದೆ. ಅದರಲ್ಲೂ ಎಬಿ+ ಮತ್ತು ಒ ಗುಂಪಿನ ರಕ್ತಕ್ಕೆ ಜಾಸ್ತಿ ಬೇಡಿಕೆ ಇದೆ ಎನ್ನುತ್ತಾರೆ ರೆಡ್‌ಕ್ರಾಸ್‌ ಅಧ್ಯಕ್ಷ ಶಾಂತಾರಾಮ ಶೆಟ್ಟಿ. ಡೆಂಗ್ಯೂ, ಮಲೇರಿಯಾ ಪೀಡಿತರಲ್ಲಿ ಪ್ಲೇಟ್‌ಲೆಟ್‌ ಕೊರತೆ ಕಾಣುತ್ತಿರುವುದರಿಂದ ವಿವಿಧ ರಕ್ತನಿಧಿ ಘಟಕಗಳಿಗೆ ಪ್ಲೇಟ್‌ಲೆಟ್‌ಗಳನ್ನೂ ಕೋರಿ ಕರೆಗಳು ಬರುತ್ತಿವೆ. ಅಪರೂಪದ ರಕ್ತಗುಂಪುಗಳಾದ ಬಿ  ಮತ್ತು ಒ ಗೂ ಬೇಡಿಕೆ ಇದೆ. ಅಗತ್ಯವಿದ್ದವರಿಗೆ ದಾನಿಗಳ ಮುಖಾಂತರ ಕೊಡಿಸುವ ಪ್ರಯತ್ನವೂ ನಡೆದಿದೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯಲ್ಲಿ 1 ಲಕ್ಷದಿಂದ 3 ಲಕ್ಷದವರೆಗೆ ಪ್ಲೇಟ್‌ಲೆಟ್‌ ಇರುತ್ತದೆ. ಸಾಂಕ್ರಾಮಿಕ ರೋಗ ಅಥವಾ ಇತರ ರೋಗಗಳ ಕಾರಣಗಳಿಂದ ಕಡಿಮೆಯಾಗುತ್ತದೆ. 40,000ದಿಂದ 20,000ಗಳ ತನಕ ಇಳಿದರೆ ಅಗತ್ಯವಾಗಿ ಹೊಂದಿಕೆಯಾಗುವ ಪ್ಲೇಟ್‌ಲೆಟ್‌ಗಳನ್ನು ರೋಗಿಗೆ ನೀಡಬೇಕಾಗುತ್ತದೆ ಎಂದು ರೆಡ್‌ಕ್ರಾಸ್‌ ಪದಾಧಿಕಾರಿ ತಿಳಿಸಿದ್ದಾರೆ.

156 ಮಂದಿಗೆ ಎಚ್‌1ಎನ್‌1
ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದ ಜು. 17ರವರೆಗೆ ಒಟ್ಟು 50 ಡೆಂಗ್ಯೂ ಪ್ರಕರಣ ಕಂಡು ಬಂದಿದೆ. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ 13, ಮಂಗಳೂರು ತಾಲೂಕು- 3, ಬಂಟ್ವಾಳ-9, ಪುತ್ತೂರು-10, ಬೆಳ್ತಂಗಡಿ-3, ಸುಳ್ಯದಲ್ಲಿ- 12 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ಕಳೆದ ವರ್ಷ ಒಟ್ಟು  485 ಮಂದಿಗೆ ಡೆಂಗ್ಯೂ ಬಾಧಿಸಿದ್ದು, 6 ಮಂದಿ ಮೃತಪಟ್ಟಿದ್ದರು. 2016ರಲ್ಲಿ ಜಿಲ್ಲೆಯಲ್ಲಿ ಒಟ್ಟು  6,409 ಮಲೇರಿಯಾ ಪ್ರಕರಣ ಕಂಡು ಬಂದಿದ್ದರೆ, ಈ ಬಾರಿ ಜೂನ್‌ವರೆಗೆ 370 ಪ್ರಕರಣ ದೃಢಪಟ್ಟಿದೆ. ಎಚ್‌1ಎನ್‌1 ಜ್ವರಕ್ಕೆ ಒಳಗಾಗಿರುವವರ ಸಂಖ್ಯೆ ಕಳೆದ ವರ್ಷಕ್ಕಿಂತ ಅಧಿಕವಾಗಿದ್ದು, ಇಲ್ಲಿವರೆಗೆ ಒಟ್ಟು 156 ಪ್ರಕರಣ ದೃಢಪಟ್ಟಿದೆ. ಜು. 5ಕ್ಕೆ 105 ಪ್ರಕರಣ ಇದ್ದರೆ, ಸುಮಾರು 15 ದಿನಗಳ ಅಂತರದಲ್ಲಿ 51 ಪ್ರಕರಣ ಹೆಚ್ಚಳವಾಗಿರುವುದು ಗಮನಾರ್ಹ.

Advertisement

ಸರಕಾರಿ ಆಸ್ಪತ್ರೆಗಳಲ್ಲಿ ಜಾಗದ ಕೊರತೆ ಇಲ್ಲ
ಸರಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಕಾಯಿಲೆಯ ಚಿಕಿತ್ಸೆಗಾಗಿ ರೋಗಿಗಳು ಬಂದಲ್ಲಿ ಅವರನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಅದು ನಮ್ಮ ಜವಾಬ್ದಾರಿ. ಜಾಗದ ಕೊರತೆ ಸರಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿಲ್ಲ. ಆದರೆ ಖಾಸಗಿ ಆಸ್ಪತ್ರೆಗಳ ಬಗ್ಗೆ ನನಗೇನೂ ಮಾಹಿತಿ ಬಂದಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್‌ ಕೌಂಟಿಂಗ್‌ ಮಾತ್ರ ಮಾಡಲಾಗುತ್ತದೆಯೇ ಹೊರತು ಪ್ಲೇಟ್‌ಲೆಟ್‌ ಸಿಗುವುದಿಲ್ಲ. ಸಾಂಕ್ರಾಮಿಕ ರೋಗಗಳ ಹಿನ್ನೆಲೆಯಲ್ಲಿ ಪ್ಲೇಟ್‌ಲೆಟ್‌ಗಾಗಿ ಜನಸಾಮಾನ್ಯರು ರಕ್ತನಿಧಿ ಘಟಕಗಳನ್ನು ಸಂಪರ್ಕಿಸಬೇಕಾಗುತ್ತದೆ

– ಡಾ| ರಾಮಕೃಷ್ಣ  ರಾವ್‌, ಜಿಲ್ಲಾ  ಆರೋಗ್ಯಾಧಿಕಾರಿ

– ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next