Advertisement

ಹೊಸಬಸ್‌ ನಿಲ್ದಾಣದಲ್ಲಿ ಸೌಕರ್ಯದ ಕೊರತೆ

05:04 PM Sep 14, 2021 | Team Udayavani |

ದೇವನಹಳ್ಳಿ: ಪಟ್ಟಣದ ಹೃದಯಭಾಗದಲ್ಲಿರುವ ಹೊಸ ಬಸ್‌ ನಿಲ್ದಾಣ ಮೂಲ ಸೌಕರ್ಯಗಳಿಂದ ‌ ವಂಚಿತವಾಗಿದ್ದು, ಗಾಳಿ, ಬಿಸಿಲು, ಮಳೆ ಎನ್ನದೆ ಬಸ್‌ಗಳಿಗೆ ಪ್ರಯಾಣಿಕರು ಕಾಯುವ ಪರಿಸ್ಥಿತಿ ಬಂದೊದಗಿದೆ.

Advertisement

ದೇವನಹಳ್ಳಿ ತಾಲೂಕಿನಲ್ಲಿ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂ.ಗ್ರಾ. ಜಿಲ್ಲೆಯ ಜಿಲ್ಲಾಡಳಿತ ಭವನ ತಾಲೂಕಿ ನಲ್ಲಿಯೇ ನಿರ್ಮಾಣವಾಗಿದ್ದು, ಹೈಟೆಕ್‌ ಬಸ್‌ ನಿಲ್ದಾಣವನ್ನು ಸರ್ಕಾರ ತ್ವರಿತವಾಗಿ ಮಾಡಬೇಕಿದೆ. ಹೊಸ ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿ ಕರಿಗೆ ಯಾವುದೇ ಮೂಲ ಸೌಕರ್ಯವಿಲ್ಲದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ವೃದ್ಧರು, ಮಹಿಳೆಯರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೊಂದರೆಯಾಗಿದೆ.

ಸುಸಜ್ಜಿತವಾದ ಆಸನ ವ್ಯವಸ್ಥೆ ಇಲ್ಲ: ಪ್ರಯಾಣಿಕರಿಗೆ ಸುರಕ್ಷತೆ ಮತ್ತು ಭದ್ರತೆಯಿಲ್ಲ. ಬಸ್‌ ನಿಲ್ದಾಣದ ಆವರಣದಲ್ಲಿ ಕಾರು, ದ್ವಿಚಕ್ರ ವಾಹನ ನಿಲ್ಲಿಸಿಕೊಂಡಿರುತ್ತಾರೆ. ಇದರಿಂದ ನಿಲ್ದಾಣಕ್ಕೆ ಬರುವ ಬಸ್‌ ಕೂಡ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್‌ಗೆ ಹತ್ತಬೇಕಾದರೂ ಪ್ರಯಾಣಿಕರು ಪರದಾಡುವ ಸ್ಥಿತಿಯಿದೆ. ದಿನನಿತ್ಯ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ದೊಡ್ಡಬಳ್ಳಾಪುರ, ಹೊಸಕೋಟೆ, ಶಿಡ್ಲಘಟ್ಟ, ಚಿಂತಾಮಣಿ, ಧರ್ಮಸ್ಥಳ,ತಿರುಪತಿ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಪ್ರಯಾಣಿಕರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿಗೆ ಬರುವ ಪ್ರಯಾಣಿಕರಿಗೆ ಸುಸಜ್ಜಿತವಾದ ಆಸನ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ವ್ಯವಸ್ಥೆಯಾಗಲಿ, ಮಳೆ ಬಂದಾಗ ಸರಿಯಾಗಿ ನಿಲ್ಲಲು ತಂಗುದಾಣ ವ್ಯವಸ್ಥೆ ಇಲ್ಲದಾಗಿದೆ.

ಇದನ್ನೂ ಓದಿ:ಐಪಿಎಲ್ 2022ರ ಕೂಟಕ್ಕೆ ಎರಡು ಹೊಸ ತಂಡಗಳಿಗಾಗಿ ಅ.17ರಂದು ಹರಾಜು

ಉದ್ಘಾಟನೆ ಭಾಗ್ಯ ಕಂಡಿಲ್ಲ: ಬಿಎಂಟಿಸಿ ಡಿಪೋಗೆ ಶಂಕುಸ್ಥಾಪನೆ ಮಾಡಿ ಕಟ್ಟಡ ನಿರ್ಮಾಣವಾಗಿ ಏಳೆಂಟು ವರ್ಷವಾಗಿದ್ದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸರ್ಕಾರಕ್ಕೆ ಸಾರ್ವಜನಿಕರು ತೆರಿಗೆ ಹಣ ಕಟ್ಟುತ್ತಿದ್ದಾರೆ. ಆದರೆ, ಸರ್ಕಾರ ತಾಲೂಕಿಗೆ ಏನು ಕೊಡುಗೆ ನೀಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ತಾಲೂಕಿನ ಅಭಿವೃದ್ಧಿಗಾಗಿ ಸಿಎಂ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಸರ್ಕಾರ ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಕ್ಕೆ ಹೈಟೆಕ್‌ ಬಸ್‌ ನಿಲ್ದಾಣ ಹಾಗೂ ಈ ಹಿಂದೆ ಮಂಜೂರಾಗಿದ್ದ ಕೆಎಸ್‌ಆರ್‌ಟಿಸಿ ಡಿಪೋ ಸೇರಿದಂತೆ ವಿವಿಧ ಸೌಕರ್ಯಕ್ಕೆ ವಿಶೇಷ ಅನುದಾನವನ್ನು ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದೇವನಹಳ್ಳಿ, ವಿಜಯಪುರ ಪಟ್ಟಣಕ್ಕೆ ಹೈಟೆಕ್‌ ಬಸ್‌ ನಿಲ್ದಾಣ ಮಂಜೂರು ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸ ಲಾಗಿದೆ. ಹೊಸ್‌ ಬಸ್‌ ನಿಲ್ದಾಣ ಬಳಿ ಪುರಸಭೆ ಜಾಗವಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಕುಡಿಯುವ ನೀರು, ಶೌಚಾಲಯ, ತಂಗುದಾಣನಿರ್ಮಾಣ ಮಾಡಲುಕ್ರಮ ಕೈಗೊಳ್ಳುತ್ತೇನೆ.
● ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ

Advertisement

ಸುಸಜ್ಜಿತವಾದ ಬಸ್‌ ನಿಲ್ದಾಣ ನಿರ್ಮಾಣವಾಗ ಬೇಕು. ಸರ್ಕಾರ ಪಟ್ಟಣದ ಅಭಿವೃದಿಗಾಗಿ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಜನಪ್ರತಿನಿಧಿಗಳು ಇನ್ನಾದರೂ ಸರ್ಕಾರದ ಮಟ್ಟದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಮಂಜೂರು ಮಾಡಿಸಿ, ಅನುದಾನ ಬಿಡುಗಡೆಗೊಳಿಸಿ ತ್ವರಿತವಾಗಿ ಬಸ್‌ ನಿಲ್ದಾಣ ನಿರ್ಮಾಣ ಮಾಡಲಿ.
● ಸತೀಶ್‌ ಗೋಕರೆ, ಕರವೇ(ಪ್ರವೀಣ್‌
ಶೆಟ್ಟಿ ಬಣ) ತಾ. ಪ್ರಧಾನ ಕಾರ್ಯದರ್ಶಿ

ಕಾಲೇಜಿಗೆ ಹೋಗಿಬರಲು ದಿನನಿತ್ಯ ಬಸ್‌ ನಿಲ್ದಾಣಕ್ಕೆ ಬರುತ್ತೇವೆ.ಊರಿಗೆ ವಾಪಸ್‌ ಹೋಗಬೇಕಾದರೆ ಗಂಟೆಗಟ್ಟಲೇ ಕಾಯಬೇಕು. ಕುಳಿತುಕೊಳ್ಳಲು ಇಲ್ಲಿ ನಿರ್ಮಿಸಿರುವ ಶೆಡ್ಡಿನಲ್ಲಿ ಹೆಚ್ಚು ಜನರು ಕುಳಿತುಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗಾಗಿ ತಂಗುದಾಣ ನಿರ್ಮಾಣ ಮಾಡಿದರೆ ವಿದ್ಯಾರ್ಥಿನಿಯರಿಗೆ ಅನುಕೂಲವಾಗುತ್ತದೆ.
● ದಿವ್ಯಾ, ಕಾಲೇಜು ವಿದ್ಯಾರ್ಥಿನಿ

● ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next