ನಂಜನಗೂಡು: ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿರುವ ಇಲ್ಲಿನ ಕಾರ್ಮಿಕರಿಗಾಗಿ ನಿರ್ಮಿಸುತ್ತಿರುವ ಆಸ್ಪತ್ರೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಅತೀ ಶೀಘ್ರದಲ್ಲಿ ಲೋಕಾರ್ಪಣೆ ಗೊಳಿಸುವುದಾಗಿ ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.
ಪಟ್ಟಣದಲ್ಲಿ ನಿರ್ಮಸುತ್ತಿರುವ ಕಾರ್ಮಿಕ ಆಸ್ಪತ್ರೆಯ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಆಸ್ಪತ್ರೆಯಲ್ಲಿ ಈ ಭಾಗದ ಕೈಗಾರಿಕೆಗಳ ಕಾರ್ಮಿಕರ ಅನುಕೂಲಕ್ಕೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಅಳವಡಿಸಿ, ಸುಸಜ್ಜಿತ ಕಾರ್ಮಿಕ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಈ ಭಾಗದಲ್ಲಿ ಸುಮಾರು 20 ಸಾವಿರ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.
ಪ್ರಯೋಜನ ಪಡೆಯಿರಿ: ಆಸ್ಪತ್ರೆಯಲ್ಲಿ ಐವರು ನುರಿತ ವೈದ್ಯಕೀಯ ತಜ್ಞರು ಕಾರ್ಯ ನಿರ್ವಹಿಸಲಿದ್ದಾರೆ. ಎಲ್ಲ ಬಗೆಯ ರೋಗಗಳಿಗೂ ಇಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು. ಇನ್ನು ಮುಂದೆ ಕಾರ್ಮಿಕರು ಚಿಕಿತ್ಸೆಗಾಗಿ ಮೈಸೂರು ನಗರಕ್ಕೆ ಅಲೆದಾಡಬೇಕಿಲ್ಲ. ಕಾರ್ಮಿಕರು ಆಸ್ಪತ್ರೆಯನ್ನು ಬಳಸಿಕೊಳ್ಳಬೇಕು ಎಂದು ಧ್ರುವನಾರಾಯಣ ಹೇಳಿದರು.
ಕಟ್ಟಡದ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಯಂತ್ರೋಪಕರಣಗಳ ಖರೀದಿ ಹಾಗೂ ಅಳವಡಿಕೆ ಕಾರ್ಯ ಬಾಕಿ ಇದೆ. ಈ ಕೆಲಸಗಳು ಮುಗಿದ ಕೂಡಲೇ ಆಯಾ ಭಾಗದ ವೈದ್ಯಕೀಯ ಸಿಬ್ಬಂದಿ, ವೈದ್ಯರನ್ನು ನೇಮಿಸಲಾಗುವುದು. ಅತಿ ಹೆಚ್ಚು ವೈದ್ಯಕೀಯ ಕಾಲೇಜು ಹೊಂದಿರುವ ನಮ್ಮ ರಾಜ್ಯವೇ ವೈದ್ಯರ ಕೊರತೆ ಎದುರಿಸುವಂತಾಗಿರುವುದು ನಮ್ಮ ದುರಂತ ಎಂದು ವಿಷಾದಿಸಿದರು.
ಖರ್ಗೆ ಕೊಡುಗೆ: ಕಾರ್ಮಿಕ ಆಸ್ಪತ್ರೆ ನಿರ್ಮಾಣಕ್ಕೆ 9.72 ಲಕ್ಷ ರೂ. ಹೊರ ರೋಗಿಗಳ ಕಾರ್ಮಿಕರ ಆಸ್ಪತ್ರೆ 2014ರಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಈ ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿದರು ಎಂದು ಸ್ಮರಿಸಿದ ಸಂಸದರು, ಗ್ರಾಮೀಣ ಭಾಗದ ವೈದ್ಯಕೀಯ ಸೇವೆ ಸಲ್ಲಿಸಲು ವೈದ್ಯರು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು.
ಸರ್ಕಾರ ಓರ್ವ ವಿದ್ಯಾರ್ಥಿಗೆ ಲಕ್ಷಾಂತರ ರೂ. ವೆಚ್ಚ ಮಾಡುತ್ತದೆ. ಆದರೂ, ಸರ್ಕಾರಿ ಖೋಟಾದಲ್ಲಿ ವೈದ್ಯಕೀಯ ಪದವಿ ಮುಗಿಸಿ ವಿದೇಶದಲ್ಲಿ ಹೆಚ್ಚಿನ ಹಣ ಗಳಿಕೆಗೆ ಆದ್ಯತೆ ನೀಡುವವರ ಸಂಖ್ಯೆಯೇ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾಧ್ಯಕ್ಷೆ ಪುಷ್ಪಲತಾ ಮತ್ತಿತರರಿದ್ದರು.