2018ರ ವಿಶ್ವಕಪ್‌ನಲ್ಲಿ ಕಿಲಿಯನ್ ಎಂಬಪ್ಪೆ ಫ್ರಾನ್ಸ್ ಪರ ಆಡುವ ಅವಕಾಶ ಪಡೆದರು. ಆಗಿನ್ನೂ ಅವರಿಗೆ 19 ವರ್ಷ. ಅಷ್ಟರಲ್ಲಾಗಲೇ ಅವರು ಫ್ರಾನ್ಸ್ ನಲ್ಲಿ ದೊಡ್ಡ ಸದ್ದು ಮಾಡಿದ್ದರು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವರೊಬ್ಬ ಅಪರಿಚಿತ ಆಟಗಾರ. ಅವರು ಪೆರು ಎದುರಿನ ಪಂದ್ಯದಲ್ಲಿ ಗೋಲು ಬಾರಿಸಿಯೇ ಬಿಟ್ಟರು. ಫ್ರಾನ್ಸ್ ಪರ ಗೋಲು ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡೂ ಬಿಟ್ಟರು. ಆದರೆ ಈ ಹುಡುಗನ ಬಗ್ಗೆ ನಿಜವಾಗಿಯೂ ಸುದ್ದಿಯಾಗಿದ್ದು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ. ಅಲ್ಲಿ ಅರ್ಜೆಂಟೀನವನ್ನೇ ಎದುರಿಸಿದ್ದ ಫ್ರಾನ್ಸ್ 4-3 ರಿಂದ ಗೆಲುವು ಸಾಧಿಸಿತು. ಇಲ್ಲಿ ಎಂಬಪ್ಪೆ 2 ಗೋಲು ಬಾರಿಸಿ ಪಂದ್ಯಶ್ರೇಷ್ಠರಾದರು. ಮುಂದೆ ಫೈನಲ್‌ನಲ್ಲೂ ಗೋಲು ಬಾರಿಸಿದಾಗ ನವ ತಾರೆಯೊಂದು ಹುಟ್ಟಿಕೊಂಡಿದೆ ಎನ್ನುವುದು ಖಚಿತವಾಗಿತ್ತು. ಆಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಹುಡುಗ ಯಾರು ಎಂಬ ಪ್ರಶ್ನೆಗಳು ಹುಟ್ಟಿಕೊಂಡವು.
ಎಂಬಪ್ಪೆಯ ತಂದೆ ಮೂಲತಃ ಕ್ಯಾಮೆರೂನ್ ದೇಶದವರು. ಹೆಸರು ವಿಲ್‌ಫ್ರೆಡ್, ಫುಟ್‌ಬಾಲ್ ಆಟಗಾರ ಮಾತ್ರವಲ್ಲ ಕೋಚ್ ಕೂಡ. ತಾಯಿ ಫಾಯ್ಜಾ ಲಮಾರಿ ಅಲ್ಜೀರಿಯ ದೇಶದವರು, ಹ್ಯಾಂಡ್‌ಬಾಲ್ ಆಟಗಾರ್ತಿ. ಅಂದರೆ ತಂದೆ ತಾಯಿ ಇಬ್ಬರೂ ಕ್ರೀಡಾ ಹಿನ್ನೆಲೆಯವರೇ. ಇಂತಹ ಪೋಷಕರಿಗೆ 1998 ಡಿ.20ರಂದು ಎಂಬಪ್ಪೆ ಜನಿಸಿದರು. ವಿಶೇಷವೇನು ಗೊತ್ತಾ? ಅದೇ ವರ್ಷ ಜು.13ರಂದು ಫ್ರಾನ್ಸ್ ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಈ ಹುಡುಗ ಹುಟ್ಟಿದ ವರ್ಷದಲ್ಲಿ ಫ್ರಾನ್ಸ್‌ಗೆ ಅಂತಹದ್ದೊಂದು ಯೋಗ!
ಎಂಬಪ್ಪೆ ಬೆಳೆಯುತ್ತಲೇ ಫ್ರಾನ್ಸ್‌ನ ಮಾಜಿ ದಂತಕಥೆ ಜಿನೇದಿನ್ ಜಿದಾನೆಯ ಅಭಿಮಾನಿಯಾದರು. ಜಿದಾನಿ 1998ರ ಫ್ರಾನ್ಸ್ ವಿಜಯದ ರೂವಾರಿ. ಮುಂದೆ ಪೋರ್ಚುಗಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಟ್ಟಾ ಅಭಿಮಾನಿಯಾಗಿ ಪರಿವರ್ತನೆಗೊಂಡರು. ಅವರ ಕೊಠಡಿ ತುಂಬೆಲ್ಲ ರೊನಾಲ್ಡೊ ಅವರ ಭಾವಚಿತ್ರಗಳೇ. ಈಗಲೂ ಅವರಿಗೆ ರೊನಾಲ್ಡೊ ಆರಾಧ್ಯ ದೈವ.
ಎಂಬಪ್ಪೆ ಬೆಳೆದದ್ದೆಲ್ಲ ಪ್ಯಾರಿಸ್ ನ ಈಶಾನ್ಯ ಭಾಗದಲ್ಲಿರುವ ಬಾಂಡಿ ಎಂಬ ಉಪನಗರದಲ್ಲಿ. ಈ ಭಾಗಕ್ಕೆ ಅಪರಾಧಿಗಳ ಕೇಂದ್ರ ಎಂಬ ಹೆಸರಿದೆ. ಅಲ್ಲಿ ವಿದೇಶಿ ವಲಸಿಗರೇ ತುಂಬಿಕೊಂಡಿದ್ದಾರೆ. ಫ್ರಾನ್ಸ್, ಆಫ್ರಿಕಾ, ಏಷ್ಯಾ, ಅರಬ್ ಸೇರಿದಂತೆ ಹೊರದೇಶದ ಬಹುತೇಕ ಬಡವರು ಇಲ್ಲಿ ಆಶ್ರಯ ಕಂಡುಕೊಂಡಿದ್ದಾರೆ. ಹಾಗಾಗಿ ಇದೊಂತರಾ ಭಿನ್ನಭಿನ್ನ ಸಂಸ್ಕೃತಿಗಳ ಸಮ್ಮಿಶ್ರ ಪಾಕ. ಹೊರಗಿನವರು ಇದನ್ನು ವಿಚಿತ್ರವಾಗಿ ನೋಡುತ್ತಾರೆ, ಕಳ್ಳರೇ ತುಂಬಿಕೊಂಡಿದ್ದಾರೆ ಎಂಬಂತೆ ವರ್ಣಿಸುತ್ತಾರೆ. ಆದರೆ ಈ ಪ್ರದೇಶ ವಸ್ತುಸ್ಥಿತಿಯಲ್ಲಿ ಇನ್ನೊಂದು ಮುಖವನ್ನೂ ಹೊಂದಿದೆ. ಇಡೀ ಪ್ರದೇಶದಲ್ಲಿ ಗೂಂಡಾಗಳಂತೆ ಬಿಂಬಿಸಲ್ಪಿಟ್ಟದ್ದ ವ್ಯಕ್ತಿಗಳು, ಎಂಬಪ್ಪೆ ಅಜ್ಜಿಗೆ ಧವಸವನ್ನೂ ತಂದುಕೊಟ್ಟಿದ್ದಾರೆ. ಜನರು ಈ ಭಾಗವನ್ನು ತಿಳಿದೇ ಇರುವುದಿಲ್ಲ, ಕೇವಲ ಕೆಟ್ಟಸುದ್ದಿಗಳನ್ನು ಮಾತ್ರ ಕೇಳಿರುತ್ತಾರೆ… ಹೀಗೆಂದು ಕಿಲಿಯನ್ ಎಂಬಪ್ಪೆ ಸ್ವತಃ ಬರೆದುಕೊಂಡಿದ್ದಾರೆ.
ಅದೇನೇ ಇರಲಿ… ಇಂತಹ ಜಾಗದಲ್ಲಿ ಹುಟ್ಟಿದ ಎಂಬಪ್ಪೆ 4ನೇ ವರ್ಷಕ್ಕೆ ಫುಟ್ಬಾಲ್ ಮೇಲೆ ಆಸಕ್ತಿ ಬೆಳೆಸಿಕೊಂಡರು. ಆರಂಭದಲ್ಲಿ ತಂದೆಯಿಂದಲೇ ತರಬೇತಿ ಪಡೆದುಕೊಂಡರು. ಮುಂದೆ ಅವರು 2015ರಲ್ಲಿ ಮೊನಾಕೊ ಎಂಬ ಪ್ರತಿಷ್ಠಿತ ಕ್ಲಬ್‌ಗ ಸೇರಿಕೊಂಡರು. ಆಗವರಿಗೆ ಕೇವಲ 16 ವರ್ಷ. ಆರಂಭದಲ್ಲಿ ಮೊನಾಕೊ ಬಿ ತಂಡಕ್ಕೆ ಆಡುತ್ತಿದ್ದರು. ಅವರ ಕಾಲ್ಚಳಕ ಗಮನಿಸಿ, ಕೆಲವೇ ದಿನಗಳಲ್ಲಿ ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಇವರ ಅದ್ಭುತ ಆಟ ಮುಂದುವರಿಯುತ್ತಲೇ ಹೋಯಿತು. 2017ರಲ್ಲಿ ವಿಶ್ವವಿಖ್ಯಾತ ಪ್ಯಾರಿಸ್ ಸೇಂಟ್ ಜರ್ಮನ್ ತಂಡ ಇವರನ್ನು ಮೊನಾಕೊದಿಂದ ಖರೀದಿಸಿತು. ಇಲ್ಲಿ ಅವರು ಪಡೆದ ಮೊತ್ತ ದಾಖಲೆಯನ್ನೇ ಸೃಷ್ಟಿಸಿತು. ಸಾರ್ವಕಾಲಿಕ 2ನೇ ಗರಿಷ್ಠ ಮೊತ್ತಕ್ಕೆ ಮಾರಾಟವಾದ ಆಟಗಾರ ಎನಿಸಿಕೊಂಡರು. ಗರಿಷ್ಠ ಮೊತ್ತ ಪಡೆದ ದಾಖಲೆ ನೇಮಾರ್ ಹೆಸರಿನಲ್ಲಿದೆ. ಹಾಗೆಯೇ ಒಂದೇ ಲೀಗ್‌ನ ಇನ್ನೊಂದು ತಂಡಕ್ಕೆ ವರ್ಗಾವಣೆಗೊಂಡು ಗರಿಷ್ಠ ಮೊತ್ತ ಪಡೆದ ಆಟಗಾರನೂ ಹೌದು.
ಈಗ ಎಂಬಪ್ಪೆ ದಂತಕಥೆಯಾಗಿದ್ದಾರೆ. ಹಾಗಂತ ಅವರಿಗೆ ಅಹಂಕಾರ ಬಂದಿಲ್ಲ, ಸಿನಿಕತನಗಳೂ ಅವರನ್ನು ಕಾಡಿಲ್ಲ. ಅದೇ ಎಂದಿನ ವಿನಯವಂತಿಕೆಯೇ ಅವರೊಂದಿಗಿದೆ. ತಾವು ಪ್ರತೀಪಂದ್ಯಕ್ಕೂ ಪಡೆಯುವ ಸಂಭಾವನೆಯಲ್ಲಿ ದೊಡ್ಡ ಮೊತ್ತವನ್ನು ದಿವ್ಯಾಂಗ ಮಕ್ಕಳಿಗಾಗಿ ಕ್ರೀಡಾಕೂಟ ನಡೆಸುವ ಸಂಘಟನೆಯೊಂದಕ್ಕೆ ನೀಡುತ್ತಾರೆ. ಬೀಗುವ ಹೊತ್ತಲ್ಲೂ, ಬಾಗಿಯೇ ಇದ್ದಾರೆ.
ವಿಶೇಷವೇನು ಗೊತ್ತಾ? ಆರಂಭದಲ್ಲಿ ತಮ್ಮನ್ನು ಪ್ರಭಾವಿಸಿದ್ದ ಜಿದಾನೆ ಎಂಬ ದಂತಕಥೆ ಎಂಬಪ್ಪೆಗೆ 14ನೇ ವರ್ಷದಲ್ಲಿದ್ದಾಗಲೇ ಸಿಕ್ಕಿದ್ದರು. ಆಗ ಜಿದಾನೆ ತಾವೇ ಕಾರಿನಲ್ಲಿ ತರಬೇತಿ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ. ಅದನ್ನು ತನಗೆ ನಂಬಲೇ ಆಗುತ್ತಿರಲಿಲ್ಲ ಎನ್ನುತ್ತಾರೆ ಎಂಬಪ್ಪೆ