ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರದಾಡಿದೆ. ಬೌಲರ್ ಗಳ ಮೇಲಾಟಕ್ಕೆ ಸಾಕ್ಷಿಯಾದ ದಿನದಾಟದ ಅಂತ್ಯದಲ್ಲಿ ವರುಣನೂ ಕಾಡಿದೆ.
ಇಲ್ಲಿನ ಬೇಸಿನ್ ಓವಲ್ ನಲ್ಲಿ ಆರಂಭಗೊಂಡ ಮೊದಲ ಟೆಸ್ಟ್ ನಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದರು. ಆರಂಭದಿಂದಲೂ ಕುಂಟುತ್ತಾ ಸಾಗಿದ ಭಾರತ ಐದು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.
ಟೆಸ್ಟ್ ಪುನರಾಗಮನ ಮಾಡಿದ ಪೃಥ್ವಿ ಶಾ ಕೇವಲ 16 ರನ್ ಗಳಿಸಿ ಸೌಥಿ ಎಸೆತಕ್ಕೆ ಬೌಲ್ಡ್ ಆದರು. ಮೊದಲ ಸೆಶನ್ ನಲ್ಲಿ ಕಿವೀಸ್ ದಾಳಿಯನ್ನು ಸಮರ್ಥವಾಘಿ ಎದುರಿಸಿದ ಮಯಾಂಕ್ ಅಗರ್ವಾಲ್ 34 ರನ್ ಗಳಿಸಿ ಬೌಲ್ಟ್ ಗೆ ಬಲಿಯಾದರು.
ಟೆಸ್ಟ್ ತಜ್ಞ ಪೂಜಾರ ಹೋರಾಟ 11 ರನ್ ಗೆ ಸೀಮಿತವಾದರೆ, ನಾಯಕ ವಿರಾಟ್ ಕೊಹ್ಲಿಯ ರನ್ ಬರ ಇಲ್ಲೂ ಮುಂದುವರಿದಿದೆ. ಕೊಹ್ಲಿ ಗಳಿಕೆ ಕೇವಲ ಎರಡು ರನ್. ಮತ್ತೆ ಅವಕಾಶ ಪಡೆದ ಹನುಮ ವಿಹಾರಿ ಏಳು ರನ್ ಗಳಿಸಿ ಔಟಾದರು.
ಉಪನಾಯಕ ಅಜಿಂಕ್ಯ ರಹಾನೆ 38 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ವೃದ್ದಿಮಾನ್ ಸಾಹ ಬದಲಿಗೆ ಅವಕಾಶ ಪಡೆದ ಪಂತ್ 10 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯವಾಡಿದ ಕಿವೀಸ್ ಬೌಲರ್ ಕೈಲ್ ಜ್ಯಾಮಿಸನ್ ಮೂರು ವಿಕೆಟ್ ಕಿತ್ತು ಮಿಂಚಿದರು.
ಇಂದಿನ ಪಂದ್ಯ ಕೇವಲ 55 ಓವರ್ ಆಟ ಮಾತ್ರ ನಡೆದಿದ್ದು, ಟೀ ವಿರಾಮದ ನಂತರ ಮಳೆ ಸುರಿದ ಕಾರಣ ನಾಳೆಗೆ ಮುಂದೂಡಲಾಗಿದೆ.