Advertisement

ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ ಪ್ರಾರಂಭ

09:44 PM Jan 18, 2020 | Lakshmi GovindaRaj |

ಕೊರಟಗೆರೆ: ಕಲಿಯುಗ ದೈವ ಎಂದು ಹೆಸರುವಾಸಿಯಾದ ಇತಿಹಾಸ ಪ್ರಸಿದ್ಧ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಯ ಸನ್ನಿಧಾನದಲ್ಲಿ ದನಗಳ ಜಾತ್ರೆ ಆರಂಭವಾಗಿದ್ದು, ರಾಸು ಖರೀದಿಸಲು ಹಾಗೂ ಮಾರಾಟ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ರೈತರು ಆಗಮಿಸಿದ್ದಾರೆ.

Advertisement

ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದನಗಳ ಜಾತ್ರೆ ಜ.15ರಿಂದ ಆರಂಭವಾಗಿದ್ದು, 8 ದಿನ ನಡೆಯಲಿದೆ. ರಾಜ್ಯ ಸೇರಿ ಹೊರ ರಾಜ್ಯಗಳಿಂದ ಖರೀದಿಸಲು ಮತ್ತು ಮಾರಾಟ ಮಾಡಲು ನೂರಾರು ರೈತರು ಆಗಮಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗ್ರಾಮಗಳಲ್ಲಿ ರಾಸುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಜಾತ್ರೆಗಳಲ್ಲಿ ರಾಸುಗಳ ಸಂಖ್ಯೆ ಕುಂಠಿತವಾಗಿದೆ. ಈ ಬಾರಿ ರಾಸುಗಳ ಸಂಖ್ಯೆ ಕಡಿಮೆಯಾದ ಕಾರಣ ಜಾತ್ರೆಯಲ್ಲಿ ಸುಮಾರು 50 ಸಾವಿರದಿಂದ 4ಲಕ್ಷ ರೂ.ವರೆಗೆ ಜಾನುವಾರುಗಳು ಮಾರಾಟವಾಗುತ್ತಿವೆ. ರೈತರು ಹಾಗೂ ದಲ್ಲಾಳಿಗಳು ನಡುವೆ ರಾಸುಗಳ ಮಾರಾಟ ಮತ್ತು ಖರೀದಿ ನೋಡುವುದೇ ಖುಷಿ.

ವಿವಿಧ ತಳಿಯ ರಾಸುಗಳು: ತುಮಕೂರು, ಮಂಡ್ಯ, ದೊಡ್ಡಬಳ್ಳಾಪುರ, ಕೋಲಾರ, ಚಿತ್ರದುರ್ಗ, ಬಳ್ಳಾರಿ, ಗದಗ, ದಾವಣಗೆರೆ, ಕೊಪ್ಪಳ ಸೇರಿ ಅನೇಕ ಜಿಲ್ಲೆಗಳಿಂದ ಹಲವಾರು ರೀತಿಯ ಹಳ್ಳಿಕಾರು ತಳಿ, ಅಮೃತ ಮಹಲ್‌, ಹಳ್ಳಿ, ರಾಣಿ, ಬಿಳಿ, ಕಪ್ಪು ಬಣ್ಣದ ಎತ್ತುಗಳು ಮಾರಾಟಕ್ಕೆ ಬಂದಿವೆ. ಅಪ್ಪಟ ನಾಟಿ ಹಸುಗಳು, ಹಾಲು ಕೊಡುವ ಹಸುಗಳು, ಹೊಲ ಉಳುವ ಎತ್ತುಗಳು ಜಾತ್ರೆಯಲ್ಲಿ ಗಮನ ಸೆಳೆಯುತ್ತಿವೆ.

ಫೆ.1ರಂದು ಬ್ರಹ್ಮರಥೋತ್ಸವ: ಸಂಕ್ರಾಂತಿ ಹಬ್ಬದಿಂದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದನಗಳ ಜಾತ್ರೆ ಪ್ರಾರಂಭವಾಗಿದ್ದು, ಮುಗಿದ ನಂತರ ಜ.30ರಿಂದ ಫೆ. 10ರವರೆಗೆ ವಿಶೇಷ ಪೂಜೆ ನಡೆಯುತ್ತದೆ. ಫೆ.1ರ ಶನಿವಾರ ಪ್ರತಿ ರಥಸಪ್ತಮಿಯಂದು ಆಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದ್ದು, ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಭಕ್ತರು ಬರುತ್ತಾರೆ. ಅಂದು ತಾಲೂಕಿನ ಪ್ರತಿ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಹೆಣ್ಣು ಮಕ್ಕಳು ತವರಿಗೆ ಬಂದು ಆಂಜನೇಯ ಸ್ವಾಮಿ ದರ್ಶನ ಪಡೆಯುವುದು ವಾಡಿಕೆ.

Advertisement

ಆಂಜನೇಯ ಸ್ವಾಮಿ ಇತಿಹಾಸ: ಪಾಂಡವ ವಂಶದ ಕೊನೆಯ ರಾಜ ಪರಮ ಧಾರ್ಮಿಕ ಭಕ್ತ ಜನವೇಜಯರಾಜರಿಂದ ಪ್ರತಿಷ್ಠಾಪಿತವಾದ ಶ್ರೀ ಅವತಾರತ್ರಯ ಆಂಜನೇಯ ಸ್ವಾಮಿ ದೇವಾಲಯ ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಸಾವಿರಾರು ವರ್ಷ ಇತಿಹಾಸ ಹೊಂದಿದ ದೇವಾಲಯಕ್ಕೆ ವರ್ಷಂಪ್ರತಿ ಲಕ್ಷಾಂತರ ಭಕ್ತರು ಬರುತ್ತಾರೆ. ಪ್ರತಿದಿನ ವಿಶೇಷ ಪೂಜೆಗಳು ನೆಡೆಯುತ್ತದೆ.

25 ವರ್ಷದಿಂದ ದನಗಳ ಜಾತ್ರೆಗೆ ಬರುತ್ತಿದ್ದೇನೆ. ಸುಮಾರು 15 ವರ್ಷದ ಹಿಂದೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ರಾಸುಗಳು ಬರುತ್ತಿದ್ದವು. ಅದರೆ ಈಗ ಅರ್ಧದಷ್ಟು ರಾಸುಗಳೂ ಬರುತ್ತಿಲ್ಲ. ರಾಸುಗಳ ಸಂಖ್ಯೆ ಕಡಿಮೆಯಾಗಿದ್ದು, ಉಳುಮೆ ಮಾಡುವವರ ಸಂಖ್ಯೆ ಕಡಿಮೆಯಾಗಿ ದನಗಳ ಬೆಲೆ ದುಬಾರಿಯಾಗಿದೆ.
-ನರಸೀಯಪ್ಪ, ಮಾಗಡಿ

ಹಳ್ಳಿಕಾರು ತಳಿ, ಅಮೃತಮಹಲ್‌, ಹಳ್ಳಿ, ರಾಣಿ, ಬಿಳಿ, ಕಪ್ಪು, ರೂಪಾಯಿ ಬಣ್ಣದ ಎತ್ತುಗಳಿಗೆ ಬೇಡಿಕೆ ಇದೆ. ಅಪ್ಪಟ ನಾಟಿ ಹಸುಗಳು, ಹಾಲು ಕೊಡುವ ಹಸುಗಳು, ಹೊಲ ಉಳುವ ಎತ್ತುಗಳು ಜಾತ್ರೆಗೆ ಬಂದಿವೆ. ನಾನು ಪ್ರತಿವರ್ಷ ಜಾತ್ರೆಗೆ ಬರುತ್ತೇನೆ. ಈ ಬಾರಿ ಬೇಕಾದ ರಾಸುಗಳು ಸಿಕ್ಕಿವೆ.
-ಶ್ರೀನಿವಾಸ್‌, ಗೋಪಿಂದಪಲ್ಲಿ ಆಂಧ್ರಪ್ರದೇಶ

Advertisement

Udayavani is now on Telegram. Click here to join our channel and stay updated with the latest news.

Next