Advertisement

ಕೆವಿಜಿ ಸುಳ್ಯ ಹಬ್ಬಾಚರಣೆ 

03:21 PM Dec 13, 2017 | Team Udayavani |

ಸುಳ್ಯ: ಆಧುನಿಕ ಸುಳ್ಯದ ನಿರ್ಮಾತೃ ಡಾ| ಕುರುಂಜಿ ವೆಂಕಟ್ರಮಣ ಗೌಡ ಅವರ 89 ನೇ ಜಯಂತ್ಯೋತ್ಸವ ಪ್ರಯುಕ್ತ ಕೆವಿಜಿ ಸುಳ್ಯ ಹಬ್ಬ ಆಚರಣೆ ಸುಳ್ಯ ಶ್ರೀ ಚೆನ್ನಕೇಶ್ವ ದೇವಸ್ಥಾನದ ವಠಾರದಲ್ಲಿ ಡಿ. 24ರಿಂದ 26ರ ವರೆಗೆ ಅದ್ದೂರಿಯಾಗಿ ಜರಗಲಿದೆ.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಚರಣೆ ಸಮಿತಿಯ ಅಧ್ಯಕ್ಷ ಕೆ.ಆರ್‌. ಗಂಗಾಧರ ಮಾಹಿತಿ ನೀಡಿದರು. ಹಬ್ಬದ ಅಂಗವಾಗಿ ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ನ ಆಶ್ರಯದಲ್ಲಿ ಜರಗುವ ಸ್ವತ್ಛತಾ ಆಂದೋಲನಕ್ಕೆ ಸುಳ್ಯ ಶಾಸ್ತ್ರಿಸರ್ಕಲ್‌ನಲ್ಲಿ ಬೆಳಗ್ಗೆ 9 ಗಂಟೆಗೆ ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ ಅವರು ಚಾಲನೆ ನೀಡುವರು. ಡಾ| ಕೆ.ವಿ. ಚಿದಾನಂದ ಅವರು ಉಪಸ್ಥಿತರಿರುವರು.

ಡಿ. 25: ಸಾಧಕರಿಗೆ ಅಭಿನಂದನೆ
ಬೆಳಗ್ಗೆ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ| ಹರಪ್ರಸಾದ್‌ ತುದಿಯಡ್ಕ ಉದ್ಘಾಟಿಸುವರು. ಬೆಳಗ್ಗೆ 10 ಗಂಟೆಗೆ 16 ತಂಡಗಳ ಪುರುಷರ ಕಬಡ್ಡಿ ಪಂದ್ಯಾಟ, ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಷನ್‌ ಅಧ್ಯಕ್ಷ ಎನ್‌.ಎ. ರಾಮಚಂದ್ರ ಉದ್ಘಾಟಿಸುವರು. ಸಂಜೆ 6.30ಕ್ಕೆ ಮನೋರಂಜನ ಕಾರ್ಯಕ್ರಮ, 7ಕ್ಕೆ ಶಾಸಕ ಅಂಗಾರ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಲಿದೆ. ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಜಿ.ಪಂ. ಸದಸ್ಯ ಹರೀಶ್‌ ಕಂಜಿಪಿಲಿ, ಶ್ರೀ ತೊಡಿಕಾನ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ಅತಿಥಿಗಳಾಗಿರುವರು. ನಾಗರಿಕ ಸೇವೆ ಪೂರೈಸಿದ ಅಜಿತ್‌ ರೈ ಮಾಲೆಂಗ್ರಿ, ಕ್ರೀಡೆ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಸಾಧಕ ಕೆ.ಎಂ. ಸುಬ್ರಹ್ಮಣ್ಯ, ಲಲಿತಕಲೆಯ ಸಾಧಕಿ ಶ್ವೇತಾ ಮಡಪ್ಪಾಡಿ ಮತ್ತು ನಾಗರಿಕ ಸೇವಾ ತರಬೇತಿಗಾಗಿ ಮನೋಜ್‌ ಮಡ್ತಿಲ ಅವರಿಗೆ ಅಭಿನಂದನೆ ನಡೆಯಲಿದೆ. ಬಳಿಕ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯಿಂದ ‘ನೃತ್ಯ ಸಂಭ್ರಮ’, ಫ್ಯೂಶನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡ್ಯಾನ್ಸ್‌, ಮಂಜು ಬ್ರದರ್, ಶಶಿ ಬ್ರದರ್ ಬಳಗದಿಂದ ನೃತ್ಯವೈವಿಧ್ಯ ನಡೆಯಲಿದೆ.

ಡಿ. 26ರಂದು ಪ್ರಶಸ್ತಿ ಪ್ರದಾನ
ಸಂಜೆ 4 ಗಂಟೆಗೆ ಶಾಸ್ತ್ರಿ ಸರ್ಕಲ್‌ನಿಂದ ಕೆವಿಜಿ ಸಂಸ್ಮರಣ ಮೆರವಣಿಗೆ, 6.30ರಿಂದ ಮನೋರಂಜನ ಕಾರ್ಯಕ್ರಮ, ಬಾಲಚಂದ್ರ ಪೆರಾಜೆ ಮತ್ತು ಬಳಗದಿಂದ ಸ್ಯಾಕ್ಸೋಫೋನ್‌ ವಾದನ ನಡೆಯಲಿದೆ. ಬಳಿಕ 7 ಗಂಟೆಗೆ ಡಾ| ಕೆ.ವಿ. ಚಿದಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಭಾಗವಹಿಸುವರು.

ಶ್ರೀ ಆದಿಚುಂಚನಗಿರಿ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಚಂದ್ರಶೇಖರ ಪೇರಾಲ್‌ ಸಂಸ್ಮರಣಾ ಭಾಷಣ ಮಾಡುವರು. ಧಾರವಾಡದ ಕಾನೂನು ವಿವಿಯ ನಿವೃತ್ತ ಉಪಕುಲಪತಿ ಪ್ರೊ| ಡಾ| ಟಿ.ಆರ್‌. ಸುಬ್ರಹ್ಮಣ್ಯ ಹಾಗೂ ಖ್ಯಾತ ಅಂಕಣಕಾರ ಪ್ರೊ| ಡಾ| ವಂ| ಪ್ರಶಾಂತ್‌ ಮಾಡ್ತ ಅವರಿಗೆ ಕೆವಿಜಿ ಸಾಧನಾಶ್ರೀ ಪ್ರಶಸ್ತಿ ಪ್ರದಾನ ನಡೆಯಲಿದೆ.

Advertisement

ರಾತ್ರಿ 9.30ರಿಂದ ಶ್ವೇತಾ ಮಡಪ್ಪಾಡಿ ಅವರಿಂದ ಸುಗಮ ಸಂಗೀತ, ಗೀತಾ ಮೋಂಟಡ್ಕ ಅವರಿಂದ ಮಿಮಿಕ್ರಿ ಹಾಗೂ ಮಂಡ್ಯ ಗುರುದೇವ ಲಲಿತಾ ಕಲಾ ಅಕಾಡೆಮಿಯಿಂದ ನೃತ್ಯ ವೈವಿಧ್ಯ ಜರಗಲಿದೆ. ಡಿ. 16ರಂದು ಹೊನಲು ಬೆಳಕಿನ ಮುಕ್ತ ಡಬ್ಬಲ್ಸ್‌ ಬ್ಯಾಡ್‌ಮಿಂಟನ್‌ ಪಂದ್ಯಾವಳಿ ಜರಗಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಿರ್ಲಾಯ, ಸಂಚಾಲಕ ಸಂತೋಷ್‌ ಮಡ್ತಿಲ ಹಾಗೂ ಕೋಶಾಧಿಕಾರಿ ಕೆ.ವಿ. ಹೇಮನಾಥ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next