ಬೆಳಗಾವಿ: ಆರೋಗ್ಯಪೂರ್ಣ ಬದುಕಿಗಾಗಿ ತಾರಸಿ ತೋಟ ಹಾಗೂ ಮಳೆ ಕೊಯ್ಲು ಕೈಗೊಳ್ಳಲು ಸಾಲ ಸೌಲಭ್ಯ ನೀಡುವ
ಮೂಲಕ ಸ್ವಾವಲಂಬನೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಎಂದು ಕರ್ನಾಟಕ ವಿಕಾಸ ಗ್ರಾಮೀಣ (ಕೆವಿಜಿ) ಬ್ಯಾಂಕ್ ಚೇರಮನ್ ಎಸ್. ರವೀಂದ್ರನ್ ಹೇಳಿದರು.
ಜಾಧವ ನಗರದ ಹನುಮಂತ ಪಾಟೀಲ ಅವರ ಮನೆಯ ಮೇಲೆ ಬ್ಯಾಂಕ್ ಸಾಲ ಪಡೆದು ನಿರ್ಮಿಸಿದ ಮಳೆ ಕೊಯ್ಲು ಮತ್ತು ತಾರಸಿ (ಟೆರೇಸ್) ತೋಟವನ್ನು ಮಂಗಳವಾರ ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನಿಂದ ಈ ಹೊಸ ಯೋಜನೆ ಕೈಗೊಳ್ಳಲಾಗಿದೆ. ಕನಿಷ್ಠ 50 ಸಾವಿರ ರೂ.ದಿಂದ 1 ಲಕ್ಷ ರೂ. ವರೆಗೆ ಸಾಲ ನೀಡಲಾಗುತ್ತಿದೆ. ಮನೆ ಕ್ಷೇತ್ರಕ್ಕೆ ತಕ್ಕಂತೆ ಕೋಟಿ ರೂ.ವರೆಗೂ ಸಾಲ ಪಡೆಯಬಹುದಾಗಿದೆ. ಈಗಾಗಲೇ 9 ಜಿಲ್ಲೆಗಳಲ್ಲಿ 750 ಜನರಿಗೆ 5 ಕೋಟಿ ರೂ.ವರೆಗೆ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಬ್ಯಾಂಕಿಂಗ್ ವಲಯದಲ್ಲಿ ಮೊದಲ ಬಾರಿಗೆ ತಾರಸಿ ತೋಟ ಹಾಗೂ ಮಳೆ ಕೊಯ್ಲು ಅಳವಡಿಕೆಗೆ ಸಾಲ ಸೌಲಭ್ಯ ಯೋಜನೆ ರೂಪಿಸಲಾಗಿದೆ. ಸಾಲ ಕಲ್ಪಿಸಿ ಮನೆ ಮಹಡಿ ಮೇಲೆ ಮಳೆ ನೀರು ಸಂಗ್ರಹಿಸಿ ಅದನ್ನೇ ಪುನರ್ ಬಳಕೆ ಮಾಡುವ ನಿಟ್ಟಿನಲ್ಲಿ ಆರ್ಥಿಕ ಸಹಾಯದ ಜತೆಗೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ತಾಂತ್ರಿಕ ಸಲಹೆ ನೀಡಲಾಗುತ್ತಿದೆ. ತಾರಸಿ ತೋಟಗಳಲ್ಲಿ ಕೋತಂಬರಿ, ಬದನೇಕಾಯಿ, ಪಾಲಕ, ಟೋಮೆಟೋ, ಹಸಿ ಮೆಣಸು, ಮೆಂತೆ ಸೇರಿದಂತೆ ವಿವಿಧ ತರಕಾರಿ ಬೆಳೆ ಬೆಳೆಯಬಹುದಾಗಿದೆ. ಜತೆಗೆ ವಿವಿಧ ಮಾದರಿಯ ಹೂಗಳನ್ನು ಬೆಳೆಯಬಹುದು. ಯಾಂತ್ರಿಕ ಜೀವನದಲ್ಲಿ ಆರೋಗ್ಯಪೂರ್ಣ ಬದುಕು ಸಾಗಿಸಲು ಇದೊಂದು ಉತ್ತಮ ಕಾರ್ಯವಾಗಿದೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ತಾರಸಿ ತೋಟಕ್ಕಾಗಿ 150ಜನ ಸಾಲ ಪಡೆದಿದ್ದಾರೆ. ಕೆವಿಜಿ ಬ್ಯಾಂಕಿಂಗ್‌ನಲ್ಲಿ ಇದೊಂದು ಮಹತ್ವಪೂರ್ಣ ಯೋಜನೆಯಾಗಿದೆ. ಸರಕಾರದ ಕೃಷಿ ಹೊಂಡ ಸೌಲಭ್ಯ ಹೊರತಾಗಿಯೂ ಹೊಂಡ ನಿರ್ಮಿಸಿಕೊಳ್ಳಲು ಇಚ್ಛಿಸುವ ರೈತರಿಗೂ ಸಾಲ ನೀಡಲಾಗುತ್ತಿದೆ.
ಈವರೆಗೆ 500 ಕೃಷಿ ಹೊಂಡ ನಿರ್ಮಾಣಕ್ಕೆ 9ಕೋಟಿ ರೂ. ಸಾಲ ನೀಡಲಾಗಿದೆ. ಸಾರ್ವಜನಿಕರಲ್ಲಿ ಹಸಿರು ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಹಸಿರು ಸಾಲ ನೀಡಲಾಗುತ್ತಿದೆ ಎಂದು ಹೇಳಿದರು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ. ನಾಗರಾಜ ಹಾಗೂ ಶೇಖರ ಶೆಟ್ಟಿ ಇದ್ದರು.