Advertisement

ಮಂಗಳೂರಿಗೆ ಹಿಂದಿರುಗಲು ಎಲ್ಲ ನೆರವು: ಶಾಸಕ ವೇದವ್ಯಾಸ ಕಾಮತ್‌

09:43 AM Jun 22, 2019 | Team Udayavani |

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ಆರು ತಿಂಗಳಿನಿಂದ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರ ಪೈಕಿ ಕರಾವಳಿ ಭಾಗದ 35 ಮಂದಿ ಸಂತ್ರಸ್ತರನ್ನು ತಾಯ್ನಾಡಿಗೆ ವಾಪಸ್‌ ಕರೆ ತರಲು ಟಿಕೆಟ್‌ ವ್ಯವಸ್ಥೆ ಮಾಡಲಾಗಿದ್ದು, ಶೀಘ್ರ ಮಂಗಳೂರಿಗೆ ಮರಳಲಿದ್ದಾರೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

“ಸಂತ್ರಸ್ತ ಕರಾವಳಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ. ಇದೀಗ ಅವರ ಮರಳುವಿಕೆಗೆ ಹಾದಿ ಸುಗಮವಾಗಿದ್ದು, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಕರಾವಳಿಗರನ್ನು ಕುವೈಟ್‌ಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್‌ ಟ್ರಾವೆಲ್‌ ಏಜೆನ್ಸಿಯ ಪ್ರಸಾದ್‌ ಶೆಟ್ಟಿ ಅವರು ಎಲ್ಲ 35 ಮಂದಿ ಸಂತ್ರಸ್ತರಿಗೆ ವಿಮಾನದ ಟಿಕೆಟ್‌ ವೆಚ್ಚ ಭರಿಸುವ ಮೂಲಕ ಅಗತ್ಯ ವ್ಯವಸ್ಥೆ ಮಾಡಿಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

ಕರಾವಳಿಯ 35 ಮಂದಿ ಯುವಕರನ್ನು ಕುವೈಟ್‌ಗೆ ಕಳುಹಿಸುವ ಮುನ್ನ ಮಾಣಿಕ್ಯ ಟ್ರಾವೆಲ್‌ ಏಜೆನ್ಸಿಯು ಪ್ರತಿಯೊಬ್ಬರಿಂದ 65 ಸಾವಿರ ರೂ. ಪಡೆದುಕೊಂಡಿತ್ತು. ಅದರಲ್ಲಿ 55 ಸಾವಿರ ರೂ.ಗಳನ್ನು ಮುಂಬಯಿಯ ಏಜೆನ್ಸಿ ಯೊಂದಕ್ಕೆ ನೀಡಿತ್ತು. ಉಳಿದ 10 ಸಾವಿರ ರೂ.ಗಳನ್ನು ಕಮಿಷನ್‌ ಆಗಿ ಉಳಿಸಿಕೊಂಡಿತ್ತು. ಬಳಿಕ ಮುಂಬಯಿ ಏಜೆಂಟರು ಹಾಗೂ ಕುವೈಟ್‌ ಉದ್ಯೋಗ ಕಂಪೆನಿ ನಡುವೆ ವ್ಯವಹಾರ ನಡೆದಿದೆಯೇ ಹೊರತು ಮಾಣಿಕ್ಯ ಏಜೆನ್ಸಿಗೂ ಸಂತ್ರಸ್ತರಿಗೂ ಯಾವುದೇ ವ್ಯಾವಹಾರಿಕ ಸಂಬಂಧವಿರಲಿಲ್ಲ. ಆದಾಗ್ಯೂ ಮಾನವೀಯತೆ ನೆಲೆಯಲ್ಲಿ ಸಂತ್ರಸ್ತರಿಗೆ ವಿಮಾನಯಾನದ ಟಿಕೆಟ್‌ ವೆಚ್ಚ ಭರಿಸುತ್ತಿರುವುದಾಗಿ ಏಜೆನ್ಸಿಯ ಪ್ರಸಾದ್‌ ಶೆಟ್ಟಿ ತಮಗೆ ಭರವಸೆ ನೀಡಿರುವುದಾಗಿ ವೇದವ್ಯಾಸ ಕಾಮತ್‌ ಹೇಳಿದರು.

ಹಲವರ ಸಹಕಾರ
ನ್ಯಾಯವಾದಿ ಪುರಂದರ ಶೆಟ್ಟಿ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಪ್ರಸಾದ್‌ ಶೆಟ್ಟಿ ಜತೆ ಮಾತನಾಡಿ ಸಮಸ್ಯೆಗೆ ಸ್ಪಂದಿಸುವುದಕ್ಕೆ ನೆರವಾಗಿದ್ದಾರೆ. ಜತೆಗೆ ಸುರತ್ಕಲ್‌  ಮೂಲದ ಅನಿವಾಸಿ ಭಾರತೀಯ ರಾಜ್‌ ಭಂಡಾರಿ, ಮಂಗಳೂರು ಮೂಲದ ಮೋಹನ್‌ದಾಸ್‌ ಕಾಮತ್‌ ಮತ್ತಿತರರು ಕೂಡ ಸಹಕಾರ ನೀಡಿದ್ದಾರೆ. ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆಗೂ ಮಾತುಕತೆ ನಡೆಸಲಾಗಿದ್ದು, ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಸಹಕಾರದೊಂದಿಗೆ ಕರಾವಳಿಯ ಸಂತ್ರಸ್ತರನ್ನು ಮರಳಿ ಕರೆತರಲು ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. ಇವರಲ್ಲದೆ ಕರಾವಳಿ ಮೂಲದ ಅನಿವಾಸಿ ಭಾರತೀಯರು, ಅನಿವಾಸಿ ಸಂಘಟನೆಗಳು ಸಂತ್ರಸ್ತರ ದೈನಂದಿನ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಸಹಕಾರ ಅಭಿನಂದನೀಯ ಎಂದವರು ತಿಳಿಸಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್‌, ಮುಖಂಡರಾದ ನಿತಿನ್‌ ಕುಮಾರ್‌, ಪ್ರೇಮಾನಂದ ಶೆಟ್ಟಿ, ಪ್ರಭಾ ಮಾಲಿನಿ, ಸಂಜಯ ಪ್ರಭು, ರಮೇಶ್‌ ಕಂಡೆಟ್ಟು, ಭಾಸ್ಕರಚಂದ್ರ ಉಪಸ್ಥಿತರಿದ್ದರು.

Advertisement

ಉತ್ತಮ ಬಾಂಧವ್ಯದಲ್ಲಿರಿ: ಮನವಿ
ಈಗಾಗಲೇ ಏಜೆನ್ಸಿ ವಿರುದ್ಧ ವಂಚನೆ ಕೇಸು ದಾಖಲಾಗಿದ್ದರೂ ಸಂತ್ರಸ್ತರ ವಿಮಾನಯಾನದ ಟಿಕೆಟ್‌ ಭರಿಸುವುದಕ್ಕೆ ಪ್ರಸಾದ್‌ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಮುಂದೆ ಕುವೈಟ್‌ನಲ್ಲಿರುವ ಕರಾವಳಿಗರು ತಾಯ್ನಾಡಿಗೆ ಆಗಮಿಸಿದ ಬಳಿಕ ಏಜೆನ್ಸಿಯೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು ಎಂದು ಶಾಸಕರು ಇದೇ ವೇಳೆ ಮನವಿ ಮಾಡಿದರು. ಸಂತ್ರಸ್ತರಿಗೆ ಪಾಸ್‌ಪೋರ್ಟ್‌ ಹಸ್ತಾಂತರಿಸಬೇಕಾದರೆ ಜಿಪಿ (ಸರಕಾರಿ ಯೋಜನೆ) ಕಾಗದ ಪತ್ರವನ್ನು ಟ್ರಾವೆಲ್‌ ಏಜೆನ್ಸಿ ನೀಡಬೇಕು. ಇದಕ್ಕೆ ಹೆಚ್ಚುವರಿಯಾಗಿ 1 ಲಕ್ಷ ರೂ. ಬೇಕಾಗುತ್ತದೆ. ಈ ಮೊತ್ತವನ್ನು ಸಂತ್ರಸ್ತರ ಪರವಾಗಿ ಭರಿಸಲು ಅನಿವಾಸಿ ಭಾರತೀಯ, ಉಜಿರೆ ಮೂಲದ ಗೋಕುಲ್‌ದಾಸ್‌ ಭಟ್‌ ಒಪ್ಪಿಕೊಂಡಿದ್ದಾರೆ ಎಂದು ಕಾಮತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next