Advertisement

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

10:04 AM Nov 06, 2024 | Team Udayavani |

ಬೆಳ್ತಂಗಡಿ: ಮಹಿಳೆಯೊಬ್ಬರು ಹೆಬ್ಟಾವು ಹಿಡಿಯುವ ವಿಡಿಯೋ ಕಳೆದ ಎರಡು ದಿನಗಳಿಂದ ಭಾರಿ ವೈರಲ್‌ ಆಗುತ್ತಿದೆ. ಹಾವು ಹಿಡಿದ ಈ ಸಾಹಸಿ ಮಹಿಳೆ ಯಾರು ಎನ್ನುವ ಚರ್ಚೆ ಎಲ್ಲೆಡೆ ಇತ್ತು. ಘಟನೆ ನಡೆದಿರುವುದು ಅಲ್ಲಂತೆ, ಇಲ್ಲಂತೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ಈ ಘಟನೆ ನಡೆದಿರುವುದು ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ಜಾರಿಗೆದಡಿಯಲ್ಲಿ. ಮತ್ತು ಆ ಸಾಹಸಿ ಮಹಿಳೆ ಕುಪ್ಪೆಟ್ಟಿಯ ಶೋಭಾ ಯಾನೆ ಆಶಾ.

Advertisement

ನೆಕ್ಕಿಲು ಜಾರಿಗೆದಡಿ ಬಾಬು ಮಾಸ್ಟರ್‌ ಎಂಬವರ ತೋಟದಲ್ಲಿ ನ. 3ರ ಸಂಜೆ 3 ಗಂಟೆ ಹೊತ್ತಿಗೆ ಹೆಬ್ಟಾವು ಕಂಡಿತ್ತು. ಈ ವಿಚಾರವನ್ನು ಸ್ಥಳೀಯ ಆಟೋ ಚಾಲಕ ಬಶೀರ್‌ ಅವರು ಶೋಭಾ ಯಾನೆ ಆಶಾ ಅವರ ಗಮನಕ್ಕೆ ತಂದರು. ಶೋಭಾ ಸ್ಥಳಕ್ಕೆ ಹೋಗಿ ಹಾವನ್ನು ಸಾಹಸಿಕವಾಗಿ ಹಿಡಿದು ಅರಣ್ಯ ಇಲಾಖೆ ಮೂಲಕ ಕೊಯ್ಯೂರು ಅರಣ್ಯಕ್ಕೆ ಬಿಟ್ಟಿದ್ದಾರೆ. ಆ ಕಾರ್ಯಾಚರಣೆಯ ವಿಡಿಯೋ ವೈರಲ್‌ ಆಗಿತ್ತು.

ಯಾರೀಕೆ ಉರಗ ಪ್ರೇಮಿ ಆಶಾ

ಶೋಭಾ ಯಾನೆ ಆಶಾ ಅವರು ಮೂಲತಃ ಮಾಣಿ ನಿವಾಸಿಯಾಗಿದ್ದು, ವೇಣೂರಿನ ಅಂಡಿಂಜೆಯ ಎಂ.ಪ್ರಶಾಂತ್‌ ಅವರೊಂದಿಗೆ ಮದುವೆಯಾಗಿದೆ. ಇವರ ತಂದೆ-ತಾಯಿ ಕುಪ್ಪೆಟ್ಟಿಯಲ್ಲಿ ನೆಲೆಸಿದ್ದು 5 ಮತ್ತು 3ನೇ ತರಗತಿಯಲ್ಲಿ ಕಲಿಯುತ್ತಿರುವ ಪುತ್ರ ಮತ್ತು ಪುತ್ರಿಯಿದ್ದಾರೆ.

ಶೋಭಾ ಯಾನೆ ಆಶಾ ಅವರು ಕಳೆದ 21 ವರ್ಷಗಳಿಂದ ಹಾವನ್ನು ರಕ್ಷಿಸುತ್ತಿದ್ದು ಈ ವರೆಗೆ 900ಕ್ಕೂ ಅಧಿಕ ಹಾವಿನ ರಕ್ಷಣೆ ಮಾಡಿದ್ದಾರೆ. ಇವರ ಉರಗ ಪ್ರೇಮವನ್ನು ಕಂಡು ಗುರುವಾಯನಕೆರೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ ವ್ಯಾಪ್ತಿಯ ತಣ್ಣೀರುಪಂತ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿಯಾಗಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾವುಗಳನ್ನು ರಕ್ಷಿಸುವ ಕಾರ್ಯದ ಜವಾಬ್ದಾರಿ ಇವರದು.

Advertisement

ಬಾಲ್ಯದಿಂದಲೇ ಉರಗಪ್ರೇಮಿ

ಶೋಭಾ ಎಳೆಯ ವಯಸ್ಸಿನಲ್ಲೇ ಸಣ್ಣಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದರು! ಇದನ್ನು ಗಮನಿಸಿದ ಮನೆಯವರು ಹಾವು ವಿಷಕಾರಿ, ಹಿಡಿಬಾರದು ಎಂದು ಬುದ್ದಿಮಾತು ಹೇಳಿ ಹಾವು ಹಿಡಿಯುವುದನ್ನು ನಿಲ್ಲಿಸಿದ್ದರು. 2014ರಲ್ಲಿ ವಿವಾಹವಾದ ಬಳಿಕ ಪತಿ ಪ್ರಶಾಂತ್‌ ಅವರು ಶೋಭಾರಿಗೆ ಹಾವು ಹಿಡಿಯಲು ಪ್ರೋತ್ಸಾಹ ನೀಡಿದರು ಮತ್ತು ಸಹಕಾರ ನೀಡುತ್ತಿದ್ದಾರೆ. ಪ್ರಶಾಂತ್‌ ಅವರು ಹುಲ್ಲು ಕಟಾವು ಯಂತ್ರದ ಕೆಲಸ ಮಾಡುತ್ತಾರೆ. ಶೋಭಾ ಅವರ ಉರಗ ಪ್ರೇಮ ತಿಳಿದ ಆಗಿನ ಗ್ರಾಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡರು ವಲಯ ಮೇಲ್ವಿಚಾರಕಿಯಾಗಿದ್ದ ವಿದ್ಯಾ ಬಿ.ಎಚ್‌. ಬಳಿ ತಿಳಿಸಿದರು. ಆಗ ಶೋಭಾರನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಸೇರಿಸಲಾಯಿತು. ಬಳಿಕ ಲಾೖಲದಲ್ಲಿ ನಡೆದ ಎನ್‌ಡಿಆರ್‌ಎಫ್‌ನ ತರಬೇತಿಯಲ್ಲಿ ಭಾಗವಹಿಸಿ ಸ್ನೇಕ್‌ ಜಾಯ್‌ರಿಂದ ಮಾರ್ಗದರ್ಶನವನ್ನೂ ಪಡೆದಿದ್ದಾರೆ. ಇವರಿಗೆ ಎಲ್ಲ ರಕ್ಷಣಾ ಸಾಮಗ್ರಿ ನೀಡಿದರೂ ಈಕೆ ಕೇವಲ ಕೈಯಿಂದಲೇ ಹಾವನ್ನು ಹಿಡಯುವುದು ವಿಶೇಷ.

ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಆಶೀರ್ವದಿಸಿ ಉದ್ಯೋಗ ನೀಡಿದ್ದಾರೆ. ಹಾವು ಕೂಡಾ ನಮ್ಮಂತೆ ಒಂದು ಜೀವಿ. ಹಾಗಾಗಿ ನಾನು ಅವುಗಳ ರಕ್ಷಣೆಗೆ ಮುಂದಾದೆ. ಇದುವರೆಗೆ 98 ಹೆಬ್ಟಾವು, 32 ನಾಗರಹಾವು, ಕನ್ನಡಿಹಾವು, ನಾಗರ ಹಾವು ಹಿಡಿದಿದ್ದೇನೆ. –ಶೋಭಾ ಯಾನೆ ಆಶಾ, ಉರಗ ರಕ್ಷಕಿ.

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next