Advertisement

ಕೊನೇ ಕ್ಷಣದಲ್ಲಿ ವಿಮಾನ ದಿಢೀರ್‌ ರದ್ದು, ಕುವೈಟ್‌ನಲ್ಲಿ 164 ಪ್ರಯಾಣಿಕರ ಸಂಕಷ್ಟ

11:40 AM Jun 28, 2020 | sudhir |

ಮಂಗಳೂರು: ಶನಿವಾರ ಕುವೈಟ್‌ನಿಂದ ಮಂಗಳೂರಿಗೆ ಪ್ರಯಾಣಿಸ ಬೇಕಾಗಿದ್ದ ಖಾಸಗಿ ವಿಮಾನವೊಂದು ಕೊನೆಯ ಕ್ಷಣದಲ್ಲಿ ರದ್ದುಗೊಂಡ ಕಾರಣ ತಾಯ್ನಾಡಿಗೆ ಹೊರಟು ನಿಂತಿದ್ದ ಮಂಗಳೂರಿನ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು.

Advertisement

ಕುವೈಟ್‌ ಕೇರಳ ಮುಸ್ಲಿಂ ಅಸೋಸಿಯೇ ಶನಿನ ಕರ್ನಾಟಕ ಶಾಖೆಯು ಮಂಗಳೂರಿನ ಪ್ರಯಾಣಿಕಗಾಗಿ ಇಂಡಿಗೊ ವಿಮಾನವನ್ನು ಬುಕ್‌ ಮಾಡಿ ಭಾರತಕ್ಕೆ ಯಾನ ಬೆಳೆಸಲು ಕುವೈಟ್‌ ರಾಯಭಾರ ಕಚೇರಿಯಿಂದ ನಿರಾಕ್ಷೇಪಣಾ ಪತ್ರವನ್ನು ಕೂಡ ಪಡೆದಿತ್ತು.
8 ಮಂದಿ ಗರ್ಭಿಣಿಯರು, 34 ಮಂದಿ ವಿವಿಧ ರೋಗಿಗಳು, ವೀಸಾ ಮತ್ತಿತರ ದಾಖಲೆ ಪತ್ರ ಸರಿ ಇಲ್ಲದ (ಅಮ್ನೆಸ್ಟಿ) 8 ಮಂದಿ ಸೇರಿದಂತೆ ಒಟ್ಟು 164 ಮಂದಿ ಇದರಲ್ಲಿ ಪ್ರಯಾಣಿಸುವವರಿದ್ದು, ಕ್ವಾರಂಟೈನ್‌ಗೆ ಒಳಗಾಗ ಬೇಕಾದವರ ಪಟ್ಟಿಯನ್ನು ಕೂಡಾ ನೀಡಲಾಗಿತ್ತು. ಎಲ್ಲ 164 ಮಂದಿ ಪ್ರಯಾಣಿಕರು ಕುವೈಟ್‌ನಲ್ಲಿನ ತಮ್ಮ ಮನೆ/ ಫ್ಲಾಟ್‌/ ಬಾಡಿಗೆ ಕೊಠಡಿಗಳನ್ನು ಖಾಲಿ ಮಾಡಿ, ಖರ್ಚಿಗೆ ಬೇಕಾದ ಹಣವನ್ನು ಮಾತ್ರ ಕೈಯಲ್ಲಿ ಇಟ್ಟುಕೊಂಡು ಉಳಿದ ವಿದೇಶಿ ಕರೆನ್ಸಿಯನ್ನು ತಮ್ಮ ಭಾರತದ ಎನ್‌ಆರ್‌ಐ ಖಾತೆಗೆ ವರ್ಗಾಯಿಸಿ ಮಂಗಳೂರು ವಿಮಾನ ಏರಲು ಸಿದ್ಧವಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವಿಮಾನ ರದ್ದಾಗಿದೆ. ತಮ್ಮ ಮನೆ ಖಾಲಿ ಮಾಡಿ ಬಂದಿರುವ ಕಾರಣ ವಾಪಸ್‌ ರೂಮ್‌ಗೆ ಹೋಗು ವಂತೆಯೂ ಇಲ್ಲದೆ ಹಾಗೂ ಕೈಯಲ್ಲಿ ಹಣವೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯ ಸರಕಾರದ ಅನುಮತಿ ಲಭಿಸಿಲ್ಲ
ಈ ಬಗ್ಗೆ ಕುವೈಟ್‌ನಲ್ಲಿರುವ ಅನಿವಾಸಿ ಎಂಜಿನಿಯರ್‌ ಒಬ್ಬರು ಮಂಗಳೂರಿನಲ್ಲಿರುವ ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಕ್ಯಾ| ಕಾರ್ಣಿಕ್‌ ಅವರು ಕೂಡಲೇ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರನ್ನು ಸಂಪರ್ಕಿಸಿದಾಗ ಅವರಿಂದ ವಿಮಾನ ಇಳಿಯುವುದಕ್ಕೆ ಯಾವುದೇ ತಕರಾರು ಇಲ್ಲ ಎಂಬ ಮಾಹಿತಿ ಲಭಿಸಿದೆ. ಆದರೆ ಬಳಿಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದಾಗ ರಾಜ್ಯ ಸರಕಾರದ ಅನುಮತಿ ಲಭಿಸದ ಕಾರಣ ಈ ಸಮಸ್ಯೆ ಎದುರಾಗಿದೆ ಎಂಬ ವಿಷಯ ಗೊತ್ತಾಗಿದೆ.

“ವಿಮಾನ ಇಳಿಯ ಬೇಕಾದರೆ ರಾಜ್ಯ ಸರಕಾರದ ನೋಡಲ್‌ ಅಧಿಕಾರಿಯ ಅನುಮತಿ ಅಗತ್ಯ. ಇಲ್ಲಿ ಅನುಮತಿ ನೀಡದಿರುವುದು ಏಕೆಂದು ತಿಳಿದಿಲ್ಲ. ನೋಡಲ್‌ ಅಧಿಕಾರಿಯ ಅನುಮತಿ ದೊರಕಿಸಲು ಪ್ರಯತ್ನಿಸಲಾಗುವುದು’ ಎಂದು ಕ್ಯಾ| ಕಾರ್ಣಿಕ್‌ ಉದಯವಾಣಿಗೆ ತಿಳಿಸಿದ್ದಾರೆ.

ವಿಮಾನ ಯಾನದ ಮುಂದಿನ ದಿನಾಂಕ ನಿಗದಿ ರಾಜ್ಯ ಸರಕಾರದ ನೋಡಲ್‌ ಅಧಿಕಾರಿಯ ಅನುಮತಿಯನ್ನು ಅವಲಂಬಿಸಿದೆ. ಶನಿವಾರ ಮತ್ತು ರವಿವಾರ ಸರಕಾರಿ ರಜೆ ಇದ್ದು, ಇನ್ನು ಸೋಮವಾರದ ತನಕ ಕಾಯಬೇಕಾಗಿ ಬರಬಹುದು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next