Advertisement

ಸಾರಸ್ವತ ಲೋಕದ ದೈತ್ಯ ಪ್ರತಿಭೆ ಕುವೆಂಪು

08:23 PM Jan 25, 2020 | Lakshmi GovindaRaj |

ಪಿರಿಯಾಪಟ್ಟಣ: ಕನ್ನಡ ಸಾರಸ್ವತ ಲೋಕದ ದೈತ್ಯ ಪ್ರತಿಭೆ ರಾಷ್ಟ್ರಕವಿ ಕುವೆಂಪು ನೀಡಿದ ವಿಶ್ವಮಾನವ ಸಂದೇಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎನ್‌.ಆರ್‌.ಚಂದ್ರೇಗೌಡ ಮನವಿ ಮಾಡಿದರು. ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ವಿಶ್ವಮಾನವ ಕುವೆಂಪು ಜನ್ಮದಿನ ಆಚರಣೆ ಸಮಿತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು 117ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ವಿಶ್ವಮಾನವ: ಮನುಷ್ಯ ವಿಶ್ವಮಾನವನಾಗಿ ಹುಟ್ಟಿದರೂ ಆತ ಸಮಾಜದಲ್ಲಿ ಬೆಳೆಯುತ್ತಾ ಹೋದಂತೆ ಸಾಮಾಜಿಕ ಕಟ್ಟುಪಾಡಿಗೆ ಒಳಪಟ್ಟು ಅಲ್ಪ ಮಾನವನಾಗುತ್ತಾನೆ. ಅದಕ್ಕಾಗಿ ಆತ ತಾನು ಪಡೆಯುವ ಶಿಕ್ಷಣ, ಸಂಸ್ಕೃತಿಯಿಂದ ಮತ್ತೆ ಆತ ವಿಶ್ವಮಾನವನಾಗುವ ಅಗತ್ಯವಿದೆ ಎಂಬುದನ್ನು ಅರಿತಿದ್ದ ಕುವೆಂಪು ಅವರು ಸಾಮಾಜಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸಾಹಿತ್ಯವನ್ನು ರಚಿಸುವ ಮೂಲಕ ಆತನನ್ನು ಜಾಗೃತಗೊಳಿಸುವ ಕೆಲಸಕ್ಕೆ ಮುಂದಾದರು ಎಂದು ಶ್ಲಾ ಸಿದರು.

ಪ್ರಥಮ ಕನ್ನಡಿಗ: ಕರ್ನಾಟಕದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾದವರು ಕುವೆಂಪು. ಜ್ಞಾನಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದರು. ಕುವೆಂಪು ಮಹಾಕವಿ ಮತ್ತು ಮಹಾಸಂತರಿದ್ದಂತೆ. ಇವರ ಶ್ರೀರಾಮಾಯಣ ದರ್ಶನಂ ಸೇರಿದಂತೆ ಪ್ರತಿ ಕಾವ್ಯ ಮತ್ತು ನಾಟಕಗಳಲ್ಲೂ ಅವರು ಸೃಷ್ಟಿಸಿರುವ ಪಾತ್ರಗಳು ಮಹತ್ವದ್ದಾಗಿವೆ.

ಮಂಥರೆ, ಸೂರ್ಪನಖೀ, ರಾವಣ ಇನ್ನಿತರ ಕಳನಾಯಕ ಪಾತ್ರಗಳನ್ನು ಅತ್ಯಂತ ಶ್ರೇಷ್ಠ ಪದಗಳಲ್ಲಿ ಅಮೋಘವಾಗಿ ಚಿತ್ರಿಸಿದ್ದಾರೆ. ರಾಮಾಯಣದಲ್ಲಿ ಬರುವ ಕಿಷ್ಕಿಂಧಾ ಭಾಗದ ವಾಲಿ-ಸುಗ್ರೀವರ ಚಿತ್ರಣ ಮನಮೋಹಕವಾಗಿದ್ದು, ಪ್ರತಿಯೊಬ್ಬರೂ ಓದಲೇಬೇಕಾದ ಕೃತಿಗಳು. ಮಲೆಗಳಲ್ಲಿ ಮದುಮಗಳು, ಧನ್ವಂತರಿ ಚಿಕಿತ್ಸೆ, ಕಾನೂರು ಹೆಗ್ಗಡತಿ, ಜಲಗಾರ ಸೇರಿದಂತೆ ಅನೇಕ ಮೌಲಿಕ ಕೃತಿಗಳಲ್ಲಿ ಮುಖ್ಯವಾಗಿ ವಿಶ್ವಮಾನವ ಸಂದೇಶ ಸಿಗುತ್ತದೆ.

ಈ ಕಾರಣದಿಂದಲೇ ಅವರ ಅನೇಕ ಪದ್ಯಗಳು ಸಿನಿಮಾ ಹಾಡುಗಳಾಗಿವೆ ಎಂದು ತಿಳಿಸಿದರು. ಶಾಸಕ ಕೆ. ಮಹದೇವ್‌ ಮಾತನಾಡಿ, ಕುವೆಂಪು ವ್ಯಕ್ತಿಯಲ್ಲ, ಅವರು ಒಂದು ಶಕ್ತಿ ಇದ್ದಂತೆ. ಮನುಜಮತವಾಗಬೇಕು. ವಿಶ್ವಪಥವಾಗಬೇಕು. ಮನುಷ್ಯ ವಿಶ್ವಮಾನವನಾಗಬೇಕು ಎನ್ನುವ ಅವರ ಸಂದೇಶ ನಿಜಕ್ಕೂ ಮಹತ್ವದ್ದು. ಇದನ್ನು ಪ್ರತಿಯೊಬ್ಬರೂ ಅರಿಯ‌ಬೇಕು ಎಂದರು.

Advertisement

ರೈತರಿಗೆ ಸನ್ಮಾನ: ಕಾರ್ಯಕ್ರಮದಲ್ಲಿ ತಾಲೂಕಿನ ಪ್ರಗತಿಪರ ರೈತರಿಗೆ ಕುವೆಂಪು ಹೆಸರಿನಲ್ಲಿ ಪ್ರಶಸ್ತಿ ನೀಡಲಾಯಿತು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಜಿಪಂ ಮಾಜಿ ಸದಸ್ಯೆ ಮಂಜುಳಾ ರಾಜ್‌, ತಹಶೀಲ್ದಾರ್‌ ಶ್ವೇತಾ, ತಾಪಂ ಇಒ ಶ್ರುತಿ, ಜಿಪಂ ಸದಸ್ಯರಾದ ಪಿ.ರಾಜೇಂದ್ರ, ಕೆ.ಸಿ.ಜಯಕುಮಾರ್‌, ಕೆ.ಎಸ್‌.ಮಂಜುನಾಥ್‌, ರುದ್ರಮ್ಮ, ತಾಪಂ ಅಧ್ಯಕ್ಷೆ ಕೆ.ಆರ್‌.ನಿರೂಪಾ, ಸದಸ್ಯರಾದ ಶ್ರೀನಿವಾಸ್‌, ರಂಗಸ್ವಾಮಿ, ಮಲ್ಲಿಕಾರ್ಜುನ, ಮಹದೇವ್‌, ಜಯಂತಿ, ಸುಮಿತ್ರಾ, ಪುಷ್ಪಲತಾ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಸಿ.ಎನ್‌.ರವಿ, ಮೈಮುಲ್‌ ನಿರ್ದೇಶಕ ಪಿ.ಎಂ.ಪ್ರಸನ್ನ, ಎಪಿಎಂಸಿ ಉಪಾಧ್ಯಕ್ಷ ಮೋಹನ್‌ ಕುಮಾರ್‌ ಇತರರರಿದ್ದರು.

ಮಕ್ಕಳಿಗೆ ಕುವೆಂಪು ಕೃತಿ ಓದಲು ಹೇಳಿ: ಕುವೆಂಪು ಅವರಲ್ಲಿ ಬುದ್ಧ, ಬಸವ, ಅಂಬೇಡ್ಕ ಹೊಂದಿದ್ದ ಆದರ್ಶ ಗುಣಗಳನ್ನು ಕಾಣಬಹುದು. ಮನುಷ್ಯ ಜಾತಿಯಿಂದ ದೊಡ್ಡವನಾಗುವುದಿಲ್ಲ, ಆತನ ನಡೆ-ನುಡಿಯಿಂದ ದೊಡ್ಡವನಾಗುತ್ತಾನೆ ಎಂಬುದಕ್ಕೆ ಕುವೆಂಪು ಶ್ರೇಷ್ಠ ಉದಾಹರಣೆ. ಮನುಷ್ಯನಿಗೆ ಸಮಷ್ಠಿ ಪ್ರಜ್ಞೆ, ಸಂಸ್ಕಾರ ಹಾಗೂ ಸಂಪನ್ನತೆ ಬಹಳ ಮುಖ್ಯ. ಮನುಷ್ಯನು ತನ್ನ ನಡತೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು ಎನ್ನುವಂತಹ ಅನೇಕ ಸಂದೇಶ ನೀಡಿದ್ದಾರೆ. ಇಂತಹ ಮಹಾನ್‌ ಮಾನವತಾವಾದಿ ಕುವೆಂಪು ಅವರ ಕೃತಿಗಳನ್ನು ಮಕ್ಕಳಿಗೆ ಓದಲು ಹೇಳಬೇಕಿದೆ ಎಂದು ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next