ಬೆಂಗಳೂರು: ಕಾವ್ಯ ಲೋಕಕ್ಕೆ ಹೆಜ್ಜೆ ಇರಿಸಲು ರಾಷ್ಟ್ರಕವಿ ಕುವೆಂಪು ಅವರ ಕವಿತೆ ಮತ್ತು ಕಾವ್ಯಗಳು ತನಗೆ ಪ್ರೇರಣೆ ನೀಡಿವೆ ಎಂದು ಹಿರಿಯ ಕವಯತ್ರಿ ಡಾ.ಲತಾ ರಾಜಶೇಖರ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ “ಸಾಧಕರೊಡನೆ ಸಂವಾದ’ದಲ್ಲಿ ತಾವು ಸಾಗಿ ಬಂದ ದಾರಿ ಬಗ್ಗೆ ಮೆಲಕು ಹಾಕಿದರು. “ಶಾಲಾ ದಿನಗಳಲ್ಲಿರುವಾಗಲೇ ಕವಿತೆಗಳನ್ನು ಓದುತ್ತಿದ್ದೆ. ಹದಿನಾಲ್ಕರ ಹರೆಯದಲ್ಲಿ ಕಾವ್ಯ ರಚನೆ ಮಾಡಿದೆ. ಕುವೆಂಪು ಅವರ ಸಾಹಿತ್ಯ ಎಂದರೆ ತನಗೆ ಅಚ್ಚುಮೆಚ್ಚು’ ಎಂದು ಹೇಳಿದರು.
ಪಿಯುಸಿ ಮುಗಿದ ನಂತರ ತನ್ನ ವಿವಾಹವಾಯಿತು. ಆದರೂ, ಪತಿಯ ಸಹಾಯದಿಂದ ಕನ್ನಡ ಎಂ.ಎ ಮುಗಿಸಿದೆ. ನಂತರ ಸಾಹಿತಿ ಹಾ.ಮಾ.ನಾಯಕ್ ಅವರ ಒತ್ತಾಸೆ ಮೇರೆಗೆ ಪಿಎಚ್‌ಡಿ ಮಾಡಿದೆ. ತನ್ನ ಬರವಣಿಗೆ ಬೆಳವಣಿಗೆಗೆ ಹಾ.ಮಾ.ನಾಯಕ್ ಅವರೂ ಪ್ರಭಾವ ಬೀರಿದ್ದಾರೆಂದರು.
ಪತಿಯ ಒತ್ತಾಸೆ: ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ವಿಶಿಷ್ಟವಾದ ಕೊಡುಗೆ ನೀಡಬೇಕು ಎಂಬ ಮಹದಾಸೆಯಿಂದ ಈ ಕ್ಷೇತ್ರವನ್ನು ಆರಿಸಿಕೊಂಡೆ. ಮೊದಲು ಕಾದಂಬರಿಗಳನ್ನು ಬರೆಯ ತೊಡಗಿದೆ. ನಂತರ ಪತಿಯ ಒತ್ತಾಸೆ ಮೇರೆಗೆ ಮಹಾಕಾವ್ಯ ಬರೆಯಲಾರಂಭಿಸಿದೆ ಎಂದರು.
5 ಮಹಾ ಕಾವ್ಯ ಬರೆದಿರುವೆ: ಸಾಮಾನ್ಯವಾಗಿ 2 ಮಹಾಕಾವ್ಯಗಳನ್ನು ಬರೆದ ಮಹಿಳೆಯರಿದ್ದಾರೆ. ಆದರೆ, ಈಗಾಗಲೇ ತಾನು 5 ಮಹಾ ಕಾವ್ಯಗಳನ್ನು ಬರೆದಿದ್ದೇನೆ. ಇನ್ನೂ ಎರಡು ಮಹಾಕಾವ್ಯಗಳು ಪ್ರಕಟಿತ ಹಂತದಲ್ಲಿವೆ. ಬುದ್ಧ, ಯೇಸು, ಬಸವ ಹೀಗೆ ಸರ್ವಧರ್ಮದ ಕುರಿತಾದ ಮಹಾಕಾವ್ಯಗಳನ್ನು ಲೋಕ ಸುತ್ತಿ, ಅಧ್ಯಯನ ಮಾಡಿ ಬರೆದಿದ್ದೇನೆ.
ಈ ಮಹಾಕಾವ್ಯಗಳು ಬೇರೆ ಬೇರೆ ಭಾಷೆಗಳಿಗೂ ತರ್ಜುಮೆಗೊಂಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಡಾ.ರಾಜಶೇಖರ ಹತಗುಂದಿ, ಗೌರವಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.