ಬೆಂಗಳೂರು: ವಿಶ್ವ ಮಾನವ ಕುವೆಂಪು ವಿಚಾರಧಾರೆಗಳು ಮನುಷ್ಯನ ಮನಸ್ಸಿನಲ್ಲಿರುವ ಕ್ಲೇಶಗಳನ್ನು ತೊಳೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜನಶಕ್ತಿ ಕೇಂದ್ರದ ಸಹಯೋಗದಲ್ಲಿ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಬುಧವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಕುವೆಂಪು ಅವರ ಬಗ್ಗೆ ಪತ್ರಿಯೊಬ್ಬರು ಓದಿಕೊಂಡಿದ್ದರೆ ಬೆಳಗಾವಿ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಹೇಳಿದರು.
ವೈಚಾರಿಕ ಪ್ರಜ್ಞೆಯೊಂದಿಗೆ ಪೂರ್ಣ ಅರಳಿದ ಬದುಕು ಕುವೆಂಪು ಅವರದಾಗಿತ್ತು. ಅನುಭವದ ಆಳಕ್ಕೆ ಇಳಿದು ಕವಿಯಾಗಿ ಜಗತ್ತಿಗೆ ವಿಚಾರಧಾರೆಗಳನ್ನು ಹಂಚುವ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶಗಳನ್ನು ನೀಡಿ ಮನುಕುಲದಲ್ಲಿ ಅಜರಾಮರವಾಗಿ ಉಳಿದದರು. ವಿಶ್ವಮಾನವನಾಗಿ ಎಲ್ಲರ ಮನೆ ಮನದಲ್ಲಿ ಉಳಿದುಕೊಂಡಿರುವ ಕುವೆಂಪು ಅವರನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯ ಎಂದು ಸ್ಮರಿಸಿದರು.
ಇದನ್ನೂ ಓದಿ:ಕಲ್ಲಂಗಡಿ ತೋಟಕ್ಕೆ ಕರಡಿ ದಾಳಿ: ಅಧಿಕಾರಿಗಳಿಂದ ಪರಿಶೀಲನೆ
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರನ್ನು ಗೌರವಿಸಲಾಯಿತು. ಅಖಿಲ ಕರ್ನಾಟಕ ಡಾ. ರಾಜಕುಮರ್ ಅಭಿಮಾನಿ ಸಂಗದ ಅಧ್ಯಕ್ಷ ಸಾ.ರಾ. ಗೋವಿಂದು ಅಧ್ಯಕ್ಷತೆ ವಹಿಸಿದರು. ಮಾಜಿ ಮಹಾಪೌರರು ಜೆ.ಹುಚ್ಚಪ್ಪ, ಲಂಡನ್ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಎಸ್. ಮಹದೇವಯ್ಯ, ಕಸಾಪದ ಮಾಜಿ ಕೋಶಾದಿಕಾರಿ ಪಿ. ಮಲ್ಲಿಕಾರ್ಜುನಪ್ಪ, ಭಾರತಿ ವೃಂದ ಎಂ.ತಿಮ್ಮಯ್ಯ, ಕರಾಮಪಾ ನೌಕಕರ ಒಕ್ಕೂಟದ ಅಧ್ಯಕ್ಷ ಅಮೃತ್ ರಾಜ್, ಲೇಖಕ ಕೆ.ಎಸ್. ನಾಗರಾಜ್, ಕರ್ನಾಟಕ ವಿಚಾರ ವೇದಿಕೆ ಪಾಲನೇತ್ರ, ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ಕನ್ನಡ ಜನಶಕ್ತಿ ಕೇಂದ್ರದ ಸಿ.ಕೆ. ರಾಮೇಗೌಡ ಉಪಸ್ಥಿತರಿದ್ದರು.