Advertisement
ಸರ್ವೋದಯವೆಂಬ ಯುಗದ ಮಂತ್ರದ ಆಶಯವನ್ನು ಕುವೆಂಪು ಅವರು ತಮ್ಮ ಕಾವ್ಯದಲ್ಲಿ ಮಾತ್ರವಲ್ಲದೆ ಹೆಚ್ಚು ಸ್ಪುಟವಾಗಿ, ವಿಚಾರಪೂರ್ಣವಾಗಿ ತಮ್ಮ ಗದ್ಯ ಸಾಹಿತ್ಯದಲ್ಲೂ ಮಂಡಿಸಿದ್ದಾರೆ. ಅವರು ಬರೆದ ನಾಟಕಗಳು-ಕಾದಂಬರಿಗಳು-ಚಿಂತನೆಯ ಬರಹಗಳೆಲ್ಲವೂ ಎಚ್ಚರಗೊಳ್ಳುತ್ತಿದ್ದ ಶ್ರೀಸಾಮಾನ್ಯನ ಪ್ರಜ್ಞೆಗೆ ಸಾಣೆ ಹಿಡಿದಿವೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶೂದ್ರ ಪ್ರಜ್ಞೆಯನ್ನು, ಕನ್ನಡ ಸಾಹಿತ್ಯ ಲೋಕದ ಮುಂಚೂಣಿಗೆ ತಂದು ನಿಲ್ಲಿಸಿದ್ದ ಕುವೆಂಪು ಅವರ ಗದ್ಯ ಬರಹಗಳ ಪಾತ್ರ ಬಹಳ ದೊಡ್ಡದು. ಇದೆಲ್ಲವನ್ನು ಕುವೆಂಪು ಸಮಗ್ರ ಸಾಹಿತ್ಯ ಸಂಪುಟ ಒಳಗೊಂಡಿದೆ.
ಕುವೆಂಪು ಅವರ ಆತ್ಮಚರಿತ್ರೆ-ನೆನಪಿನದೋಣಿಯಲ್ಲಿ(ಒಂದು ಸಂಪುಟ), ಜೀವನ ಚರಿತ್ರೆ: ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ (ಒಂದು ಸಂಪುಟ), ನಾಟಕಗಳು: ಯಮನ ಸೋಲು, ಜಲಗಾರ, ಬಿರುಗಾಳಿ, ಸ್ಮಶಾನ ಕುರುಕ್ಷೇತ್ರಂ, ರಕ್ತಾಕ್ಷಿ, ಬೆರಳ್‌ಗೆ ಕೊರಳ್, ಬಲಿದಾನ, ಚಂದ್ರಹಾಸ, ಮಹಾರಾತ್ರಿ, ಶೂದ್ರ ತಪಸ್ವಿ, ಕಾನೀನ, ವಾಲ್ಮೀಕಿಯ ಭಾಗ್ಯ ಸೇರಿ 12 ನಾಟಕಗಳು (ಒಂದು ಸಂಪುಟ), ಕಾದಂಬರಿ: ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ (ಎರಡು ಸಂಪುಟ), ರಾಮಾಯಣ ದರ್ಶನಂ (ಒಂದು ಸಂಪುಟ), 23 ಕವನ ಸಂಕಲನಗಳನ್ನು ಒಳಗೊಂಡ ಕಾವ್ಯ ಸಂಪುಟ (ಎರಡು ಸಂಪುಟ), ಗದ್ಯ (ಎರಡು ಸಂಪುಟ ), ಸಣ್ಣ ಕತೆಗಳು (ಒಂದು ಸಂಪುಟ) ಹೀಗೆ ಒಟ್ಟು 11 ಸಂಪುಟಗಳನ್ನು ಮರು ಮುದ್ರಣ ಮಾಡಲಾಗಿದೆ. 30 ಲಕ್ಷ ರೂ.ವೆಚ್ಚ:
2013-14ರಲ್ಲಿ ಕುವೆಂಪು ಸಮಗ್ರ ಸಾಹಿತ್ಯ ಸಂಪುಟಗಳನ್ನು ಮುದ್ರಿಸಲಾಗಿತ್ತು. ಅಂದು ಕೇವಲ ಮೂರು ಸಾವಿರಕ್ಕೆ ಎಲ್ಲ ಸಂಪುಟಗಳನ್ನು ಒಂದು ಕಿಟ್‌ನಲ್ಲಿ ಮಾರಾಟ ಮಾಡಲಾಗಿತ್ತು. ಸಂಪುಟಗಳ ಮುದ್ರಣಕ್ಕೆ ಸರ್ಕಾರ ಅನುದಾನ ನೀಡಿತ್ತು. ಆದರೆ, 2ನೇ ಮುದ್ರಣಕ್ಕೆ ಸರ್ಕಾರದ ನೆರವನ್ನು ಪ್ರತಿಷ್ಠಾನ ಪಡೆದಿಲ್ಲ. ಬದಲಿಗೆ ಈ ಹಿಂದೆ ಮುದ್ರಣಗೊಂಡು ಮಾರಾಟವಾದ ಸಂಪುಟಗಳಿಂದ ಬಂದ ಹಣವನ್ನೇ ತೆಗೆದಿಟ್ಟು, ಎರಡನೇ ಮುದ್ರಣಕ್ಕೆ ಬಳಕೆ ಮಾಡಿಕೊಂಡಿದೆ. ಪ್ರಸ್ತುತ ಎರಡನೇ ಮುದ್ರಣಕ್ಕೆಂದು ಅಂದಾಜು 30 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಲಾಗಿದೆ.
Related Articles
ಕುಪ್ಪಳ್ಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಮಗ್ರ ಸಾಹಿತ್ಯ ಸಂಪುಟ ಪ್ರಕಟಿಸಿದ್ದು, ಮುದ್ರಣ ವೆಚ್ಚ ಸೇರಿ ಪುಸ್ತಕಗಳನ್ನು ಗ್ರಾಹಕರಿಗೆ ತಲುಪಿಸುವ ಶುಲ್ಕ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಬಾರಿ ಕೇವಲ ಮೂರು ಸಾವಿರ ರೂ.ಗಳಿಗೆ ಮಾರಾಟ ಮಾಡಿದ ಕೃತಿಗಳ ಬೆಲೆಯನ್ನು ಈ ಬಾರಿ ಸ್ವಲ್ಪ ಜಾಸ್ತಿ ಮಾಡಲಾಗಿದೆ. ಈ ಬಾರಿ ಶೇ.30ರಷ್ಟು ರಿಯಾಯಿತಿ ನೀಡಿ 5600 ರೂ.ಗಳಿಗೆ ಮಾರಾಟ ಮಾಡಲಾಗುವುದು. 2ನೇ ಮುದ್ರಣಗೊಂಡ 11 ಸಂಪುಟಗಳನ್ನು ಒಂದು ಕಿಟ್‌ನಲ್ಲಿಟ್ಟು ಕೇವಲ 4 ಸಾವಿರ ರೂ.ಗಳಿಗೆ ಗ್ರಾಹಕರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಪ್ರತಿಷ್ಠಾನ ಮಾಡಲಿದೆ. 11 ಸಂಪುಟಗಳನ್ನು ಒಳಗೊಂಡ ಕಿಟ್ ಬರೋಬರಿ 13 ಕೆ.ಜಿ ತೂಕವಿದೆ. ಗ್ರಾಹಕರು ವಾಹನಗಳಲ್ಲಿ ಬಂದು ಖರೀದಿಸಿದರೆ, ತೆಗೆದುಕೊಂಡು ಹೋಗಲು ಸಾಧ್ಯ. ಇಲ್ಲವಾದರೆ ಕಷ್ಟವಾಗುತ್ತದೆ ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಮಾಹಿತಿ ನೀಡಿದರು.
ಓದುಗರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಸುಲಭವಾಗಿ ತಮಗೆ ಬೇಕಾದ ಗದ್ಯ, ಕಾವ್ಯ, ನಾಟಕ ಇತ್ಯಾದಿ ಪ್ರಕಾರಗಳ ವಿಭಾಗವನ್ನು ಹುಡುಕಲು ಅನುಕೂಲವಾಗುವಂತೆ ಪರಿವಿಡಿ(ಇಂಡೆಕ್ಸ್)ಯನ್ನು ಈ ಸಂಪುಟಗಳಲ್ಲಿ ನೀಡಿರುವುದು ವಿಶೇಷ.
Advertisement
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದಲ್ಲಿ 11 ಸಂಪುಟಗಳನ್ನು ಖರೀದಿ ಮಾಡುವವರಿಗೆ ಮಾತ್ರ ಶೇ.30ರಷ್ಟು ರಿಯಾಯಿತಿ ಸಿಗಲಿದೆ. ಉಳಿದಂತೆ ವಿವಿಧ ಪುಸ್ತಕ ಮಳಿಗೆಗಳಲ್ಲಿ ಹೇಗೆ ದರ ನಿಗಧಿ ಮಾಡಿರುತ್ತಾರೋ ಗೊತ್ತಿಲ್ಲ. ಶೀಘ್ರವೇ 2ನೇ ಮುದ್ರಣದ ಸಂಪುಟಗಳನ್ನು ಎಲ್ಲಿ ಬಿಡುಗಡೆ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ. – ಕಡಿದಾಳ್ ಪ್ರಕಾಶ್, ಕಾರ್ಯದರ್ಶಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ – ಸಂಪತ್ ತರೀಕೆರೆ