Advertisement
ಗ್ರಾ.ಪಂ. ವ್ಯಾಪ್ತಿಯ ಕಡಬ- ಸುಬ್ರಹ್ಮಣ್ಯ ರಾಜ್ಯಹೆದ್ದಾರಿಯ ಪಕ್ಕ ದಲ್ಲಿರುವ ಹಳೆಸ್ಟೇಶನ್‌ನ ಸುಮಾರು 5 ಎಕರೆ ವಿಸ್ತೀರ್ಣದ ಪೊಟ್ಟುಕೆರೆ ಹಾಗೂ ಅದರ ಹತ್ತಿರದಲ್ಲಿರುವ ಸುಮಾರು 7 ಎಕರೆ ವಿಸ್ತೀರ್ಣದ ಹೊಸಕೆರೆಯನ್ನು ಹೂಳೆತ್ತಲು ತೀರ್ಮಾನಿಸಲಾಗಿದ್ದು, ಗ್ರಾ.ಪಂ. ವ್ಯಾಪ್ತಿಯ ಪ್ರಮುಖರನ್ನು ಒಳಗೊಂಡ ಕೆರೆ ಅಭಿವೃದ್ಧಿ ಸಮಿತಿ ರಚಿಸಿ ಕೆರೆಗಳ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಲಾಗಿದೆ. ಕೆರೆಗಳ ಹೂಳೆತ್ತಿದ ಬಳಿಕ ಗ್ರಾ.ಪಂ.ನ ಆದಾಯ ಹೆಚ್ಚಿಸುವ ಸಲುವಾಗಿ ಆ ಕೆರೆಗಳಲ್ಲಿ ಮೀನು ಸಾಕಣೆ ಮಾಡುವ ಉದ್ದೇಶವೂ ಇದೆ.
ಹಳೆಸ್ಟೇಶನ್‌ನ ಪೊಟ್ಟುಕೆರೆಯ ಪರಂಬೋಕು ಪ್ರದೇಶವನ್ನು ಪಹಣಿ ಪತ್ರದಲ್ಲಿ ತಿದ್ದುಪಡಿ ಮಾಡಿ ಸರಕಾರಿ ಜಮೀನು ಎಂದು ನಮೂದಿಸಿ ಅತಿಕ್ರಮಣ ಮಾಡಲು ನಡೆದಿದ್ದ ಹುನ್ನಾರವನ್ನು ಗ್ರಾ.ಪಂ.ನ ನಿರಂತರ ಪ್ರಯತ್ನದಿಂದಾಗಿ ವಿಫಲಗೊಳಿಸಲಾಗಿದೆ. ಎರಡು ವರ್ಷಗಳ ಹಿಂದೆ ಕುಟ್ರಾಪ್ಪಾಡಿ ಗ್ರಾಮದ ಸರ್ವೆ ನಂ. 40ರಲ್ಲಿ ಇರುವ ಹಳೆಸ್ಟೇಶನ್‌ನ ಪೊಟ್ಟುಕೆರೆಯನ್ನು ಉದ್ಯೋಗ ಖಾತರಿ ಯೋಜನೆಯಡಿ ಹೂಳೆತ್ತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮಾಹಿತಿ ಪಡೆದಾಗ ಈ ಹಿಂದೆ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ಇರುವ ಜಾಗವನ್ನು ಸರಕಾರಿ ಜಾಗ ಎಂದು ದಾಖಲಿಸಿ, ಕೆರೆಯನ್ನು ಖಾಸಗಿ ಉದ್ದೇಶಕ್ಕೆ ಬಳಸುವ ಸಂಚು ಬೆಳಕಿಗೆ ಬಂದಿತ್ತು. ಹಳೆಯ ಕೈಬರಹದ ಪಹಣಿ ಪತ್ರದಲ್ಲಿ ಕೆರೆ ಪರಂಬೋಕು ಎಂದು ನಮೂದಾಗಿರುವುದನ್ನು ಅಕ್ರಮವಾಗಿ ತಿದ್ದಿ ಸರಕಾರಿ ಜಮೀನು ಎಂದು ತಿದ್ದುಪಡಿ ಮಾಡಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಗ್ರಾ.ಪಂ. ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಯ ಸತತ ಎರಡು ವರ್ಷಗಳ ಪ್ರಯತ್ನದ ಬಳಿಕ ಪಹಣಿ ಪತ್ರ ಸರಿಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದರು.
Related Articles
ಗ್ರಾಮದ ವ್ಯಾಪ್ತಿಯ ಕೆರೆಗಳ ಹೂಳೆತ್ತಿ ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಏರಿಕೆಯಾಗಲು ಪ್ರಯತ್ನಿಸಬೇಕೆನ್ನುವ ಸೂಚನೆ ಸರಕಾರದಿಂದ ಇದೆ. ಹೈಕೋರ್ಟ್ ಕೂಡ ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿದೆ. ನೀರಿನ ಬರ ಹೋಗಲಾಡಿಸಲು ಕೆರೆಗಳ ಪುನರುಜ್ಜೀವನ ಅತ್ಯಗತ್ಯ. ನಮ್ಮ ಗ್ರಾಮದ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಂರಕ್ಷಣೆ ಮಾಡಬೇಕೆನ್ನುವ ಉದ್ದೇಶದಿಂದ ಕಾರ್ಯಯೋಜನೆ ರೂಪಿಸಿ ದ್ದೇವೆ. ಸರಕಾರ, ಸಂಘ ಸಂಸ್ಥೆಗಳು ಹಾಗೂ ಸಮುದಾಯದ ಸಹಕಾರ ಯಾಚಿಸುತ್ತಿದ್ದೇವೆ.
-ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕುಟ್ರಾಪ್ಪಾಡಿ ಪಿಡಿಒ
Advertisement
ಕೆರೆ ಉಳಿಸುವ ಪ್ರಯತ್ನಕೆರೆಗಳೆಂದರೆ ಪ್ರಕೃತಿಯ ಹಸುರು ಸಿರಿಗೆ ಬಲುದೊಡ್ಡ ಕೊಡುಗೆಗಳು. ನಮ್ಮ ಜೀವ ವೈವಿಧ್ಯ ಮತ್ತು ಕೃಷಿ ಸಂಸ್ಕೃತಿಯ ಭಾಗಗಳಾಗಿದ್ದ ಸಾಕಷ್ಟು ಕೆರೆಗಳು ಇಂದು ಕಾಲಗರ್ಭದಲ್ಲಿ ಕಣ್ಮರೆಯಾಗಿವೆ. ಇರುವ ಕೆರೆಗಳನ್ನಾದರೂ ಉಳಿಸಿಕೊಳ್ಳಬೇಕೆಂಬ ಪ್ರಯತ್ನ ನಮ್ಮದು. ಎಲ್ಲರ ಸಕಾರಾತ್ಮಕ ಸ್ಪಂದನೆ ಲಭಿಸಿದರೆ ಇದೇನು ಕಷ್ಟದ ಕೆಲಸವಲ್ಲ.
-ವಿದ್ಯಾ ಕಿರಣ್ ಗೋಗಟೆ , ಅಧ್ಯಕ್ಷೆ, ಕುಟ್ರಾಪ್ಪಾಡಿ ಗ್ರಾ.ಪಂ. ನಾಗರಾಜ್ ಎನ್.ಕೆ. ಕಡಬ