ಬೆಂಗಳೂರು: ಸೋಲಾರ್ ಪಂಪ್‌ಸೆಟ್‌ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ “ಕುಸುಮ್ ಬಿ’ ಯೋಜನೆಗೆ ಒತ್ತು ನೀಡುತ್ತಿರುವ ಸರಕಾರ, ಈ ಸಂಬಂಧ ರೈತರ ಅನುಕೂಲಕ್ಕಾಗಿ ಅಧಿಕೃತ ವಿತರಕರ ನಿಯೋಜನೆಗೆ ಶೀಘ್ರ ಟೆಂಡರ್ ಕರೆಯಲಿದೆ.
ಮಹಾರಾಷ್ಟ್ರ ಮಾದರಿಯಲ್ಲಿ “ಕುಸುಮ್ ಬಿ’ ಅನುಷ್ಠಾನಕ್ಕಾಗಿ ರಾಜ್ಯಾದ್ಯಂತ 20ರಿಂದ 30 ವಿತರಕರನ್ನು ಗುರುತಿಸಿ, ಆಯಾ ಜಿಲ್ಲೆಗಳಿಗೆ ನಿಯೋಜಿಸಲಾಗುತ್ತದೆ. ಸೋಲಾರ್ ಪಂಪ್‌ಸೆಟ್ ಅಳವಡಿಕೆ, ನಿರ್ವಹಣೆ ಮತ್ತಿತರ ಜವಾಬ್ದಾರಿಗಳನ್ನು ಈ ವಿತರಕರು ನಿರ್ವಹಿಸಲಿದ್ದಾರೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದರು.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಕಚೇರಿಯಲ್ಲಿ ಗುರುವಾರ ಹಮ್ಮಿ ಕೊಂಡಿದ್ದ ಇಂಧನ ಇಲಾಖೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾ ಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದಲ್ಲಿ “ಕುಸುಮ್ ಬಿ’ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲಾಗಿದೆ. ರಾಜ್ಯದ ಅಧಿಕಾರಿಗಳು ಅಲ್ಲಿಗೆ ತೆರಳಿ ಅಧ್ಯಯನ ಮಾಡಿದ್ದಾರೆ. ಉದ್ದೇಶಿತ ಕಾರ್ಯಾಗಾರದಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ತರಬೇತಿ ನೀಡಿದ್ದಾರೆ. ಪೂರ್ಣ ತರಬೇತಿ ಪಡೆದ “ಮಾಸ್ಟರ್ ಟ್ರೈನರ್’ಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗುತ್ತದೆ. ಸೌರಯಂತ್ರದ ಸುಲಭ ಸ್ಥಾಪನೆ ಮತ್ತು ದೀರ್ಘಕಾಲ ಬಾಳಿಕೆ ಬರುವ ಕಾರಣದಿಂದ ಗ್ರಾಮೀಣ ಪ್ರದೇಶಗಳಲ್ಲೂ ಸೌರ ತಂತ್ರಜ್ಞಾನ ಹೆಚ್ಚು ಜನಪ್ರಿವಾಗುತ್ತಿದೆ. ಈ ಹಿಂದೆ ಯೋಜನೆಗೆ ರಾಜ್ಯದಿಂದ ಶೇ. 30 ಮತ್ತು ಕೇಂದ್ರದಿಂದ ಶೇ. 30 ಸಬ್ಸಿಡಿ ನೀಡಲಾಗುತ್ತಿತ್ತು. ರಾಜ್ಯ ಸರಕಾರದ ಸಬ್ಸಿಡಿಯನ್ನು ಶೇ. 50ಕ್ಕೆ ಹೆಚ್ಚಿಸಿದೆ. ಯೋಜನೆಯಡಿ ಪಂಪ್, ಮೀಟರ್, ಪೈಪ್ ಒದಗಿಸಲಾಗುತ್ತದೆ ಎಂದು ಹೇಳಿದರು.
ಸಾಂಪ್ರದಾಯಿಕ ಗ್ರಿಡ್-ಆಧಾರಿತ ವಿದ್ಯುತ್ ಅವಲಂಬನೆಯನ್ನು ತಗ್ಗಿಸಲು, ಸೌರಚಾಲಿತ ಪಂಪ್‌ಸೆಟ್‌ಗಳ ಬಳಕೆಗೆ ಒತ್ತು ನೀಡಲು ಸರಕಾರ ರೈತರಿಗೆ ಸಬ್ಸಿಡಿ ನೀಡುತ್ತದೆ. ಯೋಜನೆ ಅಡಿ 7.5 ಎಚ್‌ಪಿ ಸಾಮರ್ಥ್ಯದ ಸೌರ ಪಂಪ್‌ಸೆಟ್‌ಗೆ ಶೇ. 30 ಕೇಂದ್ರ ಸರಕಾರದಿಂದ ಸಹಾಯಧನ ಒದಗಿಸುತ್ತದೆ.
ಇಂಧನ ಮತ್ತು ಮೂಲಸೌಕರ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಸಹಿತ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.