Advertisement

ಪ್ರತಿಭಟನೆಗೆ ಬೇಸತ್ತು ಪೊಲೀಸರಿಗೆ ದೂರು

05:27 PM Oct 18, 2018 | |

ಕುಷ್ಟಗಿ: ಉದ್ಯೋಗ ಖಾತ್ರಿ ಯೋಜನೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರಾಂತ ರೈತ ಸಂಘ, ಕೂಲಿಕಾರರ ಸಂಘದ ಹೆಸರಿನಲ್ಲಿ ತಾಪಂ ಎದುರು ಪದೇ ಪದೇ ಧರಣಿ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ತಾಪಂ ಅಧಿಕಾರಿಗಳು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದರು.

Advertisement

ತಾಪಂ ಇಒ ಡಾ| ಡಿ. ಮೋಹನ್‌, ನರೇಗಾ ಸಹಾಯಕ ನಿರ್ದೇಶಕ ಅರುಣಕುಮಾರ ದಳವಾಯಿ, ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ ವಂದಾಲ, ಅಧ್ಯಕ್ಷ ಬಡಿಗೇರ ಅವರ ನೇತೃತ್ವದಲ್ಲಿ ಪಿಡಿಒಗಳು ಪಿಎಸ್‌ಐ ವಿಶ್ವನಾಥ ಹಿರೇಗೌಡ್ರು ಅವರಿಗೆ ದೂರು ಸಲ್ಲಿಸಿದರು. ತಾಲೂಕಿನಲ್ಲಿ ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಕೆಲ ಸಂಘಟನೆಗಳ ಸದಸ್ಯರು ಅಡ್ಡಿಯಾಗುತ್ತಿದ್ದಾರೆ. ಈ ಸಂಘದ ಮುಖಂಡರು ವಿವಿಧ ಗ್ರಾಮಗಳಿಗೆ ತೆರಳಿ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಆಮಿಷವೊಡ್ಡಿ ಜನರನ್ನು ಕರೆತಂದು ಪ್ರತಿಭಟನೆಗೆ ಬಳಸಿಕೊಳ್ಳುತಿದ್ದಾರೆ. 

ಸಂಘಟನೆ ಮುಖಂಡ ಆರ್‌.ಕೆ. ದೇಸಾಯಿ ಅವರು ಅಮಾಯಕರನ್ನು ಕರೆದುಕೊಂಡು ಬಂದು ಅಧಿಕಾರಿಗಳ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಅಮಾಯಕ ಮಹಿಳೆಯರು, ವೃದ್ಧರು, ರೋಗಿಗಳಿಗೆ ಏನೂ ಗೊತ್ತಿರದಿದ್ದರೂ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕೆಲಸಕ್ಕೂ ಅಡ್ಡಿಯಾಗುತ್ತಿದ್ದಾರೆ. ಹಲಗಿ ಬಾರಿಸುವುದು, ಘೋಷಣೆ ಕೂಗುವುದು, ಸಂಜೆ ವೇಳೆ ಪಾನಮತ್ತರಾಗಿ ಅಧಿಕಾರಿಗಳನ್ನು ಹೀಯಾಳಿಸುವುದು, ಅವಾಚ್ಯವಾಗಿ ನಿಂದಿಸಲಾಗುತ್ತಿದೆ. ತಿಂಗಳಲ್ಲಿ ಎರಡ್ಮೂರು ಬಾರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅ. 4ರಿಂದ ನರೇಗಾ ಯೋಜನೆಯ ಕಾಯಕ ಬಂಧುಗಳು (ಮೇಟಿ) ಅನಿರ್ಧಿಷ್ಟಾವಧಿ  ಧರಣಿ ಸತ್ಯಾಗ್ರಹದ ವೇಳೆಯಲ್ಲೂ ವಿನಾಕಾರಣ ತೊಂದರೆ ನೀಡಲಾಗಿದೆ. ಇದಕ್ಕೆಲ್ಲ ರೈತ ಮುಖಂಡ ಆರ್‌.ಕೆ. ದೇಸಾಯಿ ಕಾರಣೀಕರ್ತರು. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ವಿವರಿಸಿ 67 ಜನ ಅಧಿಕಾರಿಗಳು ಸಹಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next