Advertisement

ಕುಷ್ಟಗಿಯ 5 ತಾಪಂ ಕ್ಷೇತ್ರ ರದ್ದು

08:13 PM Mar 26, 2021 | Team Udayavani |

 ಕುಷ್ಟಗಿ: ತಾಲೂಕು ಪಂಚಾಯತ್‌ ಕ್ಷೇತ್ರಗಳ ಪುನರ್‌ ವಿಂಗಡಣೆ ಕನ್ನಡಿಯೊಳಗಿನ ಗಂಟಾಗಿದ್ದು, ರದ್ದಾಗಲಿರುವ 5 ತಾಲೂಕು ಪಂಚಾಯತ್‌ ಕ್ಷೇತ್ರಗಳ ವಿವರಣೆ ನಿಖರವಾಗಿ ತಿಳಿಯದ ಕಾರಣ ಆಂತರಿಕ ಗೊಂದಲ, ಕುತೂಹಲಕ್ಕೆ ಎಡೆಮಾಡಿದೆ. 25 ತಾಪಂ ಕ್ಷೇತ್ರಗಳು, 7 ಜಿಪಂ ಕ್ಷೇತ್ರಗಳಿರುವ ಕುಷ್ಟಗಿ ತಾಲೂಕಿನಲ್ಲಿ ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ 5 ತಾಪಂ ರದ್ದಾಗಲಿದ್ದು, ಜಿಪಂ ಕ್ಷೇತ್ರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

Advertisement

ಇದೀಗ ರದ್ದಾಗಲಿರುವ ತಾಪಂ ಕ್ಷೇತ್ರಗಳು ಯಾವವು ಎನ್ನುವುದು ಖಚಿತವಾಗಿಲ್ಲ. ಲಭ್ಯವಾದ ಮಾಹಿತಿಗಳ ಪ್ರಕಾರ ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆಯಾಗಿರುವ ಎರಡೂ¾ರು ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಮೂರು ಪ್ರಸ್ತಾವನೆಯಲ್ಲಿ ಅಂತಿಮ ಯಾವುದು ಎನ್ನುವುದು ಅಸ್ಪಷ್ಟ. ಸಂಬಂ ಧಿಸಿದ ಅ ಧಿಕಾರಿಗಳನ್ನು ವಿಚಾರಿಸಿದರೆಸರ್ಕಾರದತ್ತ ಬೆರಳು ಮಾಡುತ್ತಿದ್ದಾರೆ. ರದ್ದಾಗಲಿರುವ ತಾಪಂ ಕ್ಷೇತ್ರಗಳ ಮಾನದಂಡ ವಿಚಾರದಲ್ಲಿ ಸ್ಥಳೀಯ ಅ ಧಿಕಾರಿಗಳ ನಡೆ ಗೊಂದಲ ಮೂಡಿಸಿದೆ.

ಜಿಪಂ ಹಾಗೂ ತಾಪಂ ಕ್ಷೇತ್ರ ಪುನರ್‌ ವಿಂಗಡಣೆ 10 ವರ್ಷಕ್ಕೊಮ್ಮೆ ಆಗಿರುವ ಹಿನ್ನೆಲೆ ಇದೆ. 1999-2000ರಲ್ಲಿ 18 ತಾಪಂ ಕ್ಷೇತ್ರಗಳಿದ್ದವು. 2004-05ರ ಪುನರ್‌ ವಿಂಗಡಣೆಯಲ್ಲಿ ಹೊಸದಾಗಿ 4 ಪಂಚಾಯತ್‌ ಗಳು ಉದಯವಾಗಿ 22 ತಾಪಂ ಕ್ಷೇತ್ರಗಳಾಗಿದ್ದವು. ಆಗ ಹಿರೇಮನ್ನಾಪುರ ಜಿಪಂ ಕ್ಷೇತ್ರವಾಗಿ ಉದಯಿಸಿತ್ತು.

2009-10ರಲ್ಲಿ ಯಾವುದೇ ಪುನರ್‌ ವಿಂಗಡನೆಯಾಗದೇ ಕುಷ್ಟಗಿ ತಾಲೂಕಿನಲ್ಲಿ 22 ತಾಪಂ ಹಾಗೂ 6 ಜಿಪಂ ಕ್ಷೇತ್ರಗಳಾಗಿದ್ದವು. 2015ರ ಮಧ್ಯಂತರದಲ್ಲಿ ಮತ್ತೆ ಕಳಮಳ್ಳಿ, ಕುಂಬಳಾವತಿ, ಬಿಜಕಲ್‌ ತಾಪಂ ಕ್ಷೇತ್ರಗಳು ಹಾಗೂ ಯರಗೇರಾ ಜಿಪಂ ಕ್ಷೇತ್ರ ಉದಯಿಸಿದ್ದವು. 2015ರಿಂದ ಇಲ್ಲಿಯವರೆಗೂ ಕುಷ್ಟಗಿ ತಾಲೂಕಿನಲ್ಲಿ 25 ತಾಪಂ ಕ್ಷೇತ್ರಗಳು, 7 ಜಿಪಂ ಕ್ಷೇತ್ರಗಳಿವೆ. ಇದೀಗ 2021ರ ಪುನರ್‌ ವಿಂಗಡಣೆ ಸಂದರ್ಭದಲ್ಲಿ 5 ತಾಪಂ ಕ್ಷೇತ್ರಗಳು ರದ್ದಾಗಿದ್ದು, ಜಿಪಂ ಕ್ಷೇತ್ರಗಳು ಯಥಾಸ್ಥಿತಿಯಲ್ಲಿವೆ. ಇದೀಗ ರದ್ದಾಗಲಿರುವ ತಾಪಂ ಕ್ಷೇತ್ರಗಳನ್ನು ಪ್ರಕಟಿಸಿದರೆ ಅಸಮಾಧಾನ ಸ್ಫೋಟವಾಗುವ ಸಾಧ್ಯತೆ ಇದೆ.

ಈಗಾಗಲೇ ಮಾಲಗಿತ್ತಿ, ಮುದೇನೂರು ತಾಪಂ ಕ್ಷೇತ್ರಗಳು ರದ್ದಾಗದಂತೆ ಸ್ಥಳೀಯರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಕೇಸೂರು ಗ್ರಾಪಂನ್ನು ಅಡವಿಬಾವಿ ತಾಪಂ ಕ್ಷೇತ್ರದಲ್ಲಿ ಸೇರ್ಪಡೆ ಮಾಡದಂತೆ ಮನವಿ ಸಲ್ಲಿಸಲಾಗಿದೆ. ಈ ಗೊಂದಲದ ನಡುವೆಯೂ ತಾಪಂ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದ್ದು, ಅಂತಿಮ ನಿರ್ಧಾರ ಏನಾಗುತ್ತದೋ ಎಂಬ ಕುತೂಹಲ ಹೆಚ್ಚಿಸಿದೆ.

Advertisement

2011ರ ಜನಸಂಖ್ಯೆ ಪ್ರಕಾರ ಪ್ರತಿ ತಾಪಂ ಕ್ಷೇತ್ರಕ್ಕೆ 10 ಸಾವಿರ ಜನಸಂಖ್ಯೆಯ ಮಾನದಂಡ ಬದಲಿಗೆ ಶೇ. 2ರಷ್ಟು ಹೆಚ್ಚಿಸಿ 12 ಸಾವಿರ ಜನಸಂಖ್ಯೆಯಿಂದ 18 ಸಾವಿರ ಜನಸಂಖ್ಯೆ ಮಿತಿಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 20 ತಾಪಂ ಕ್ಷೇತ್ರಗಳನ್ನು ಸರಿಹೊಂದಿಸುವ ಪ್ರಯತ್ನ ನಡೆಸಲಾಗಿದೆ.

 

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next