Advertisement

ಕುಷ್ಟಗಿ: ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ

11:38 AM Mar 09, 2023 | Team Udayavani |

ಕುಷ್ಟಗಿ: ತಾಲೂಕಿನ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜರಗುವ ಭಾವೈಕ್ಯತೆ ಬೆಸೆಯುವ ಬೆಳದಿಂಗಳ ಬುತ್ತಿ ಜಾತ್ರೆಯಲ್ಲಿ ಬುತ್ತಿಯ ನೆಪದಲ್ಲಿ ಹಲವು ಮನಸ್ಸುಗಳು ಸಂಗಮವಾಯಿತು.

Advertisement

ಅನ್ನದಾಸೋಹಿ ತಳವಗೇರಾ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ವಿಶೇಷತೆಯೇ ಬೆಳದಿಂಗಳ ಬುತ್ತಿ ಜಾತ್ರೆ. ಈ ಜಾತ್ರೆಯಲ್ಲಿ ಬಡವ, ಬಲ್ಲಿದ, ಮೇಲ್ಜಾತಿ, ಕೆಳಜಾತಿ ಅಂತರ ಇಲ್ಲದೇ ಒಂದೆಡೆ ಕುಳಿತು, ಹಂಚಿ ತಿನ್ನುವ ಭೋಜನವೇ ಈ ಬೆಳದಿಂಗಳ ಬುತ್ತಿ ಜಾತ್ರೆಯಾಗಿದೆ.

ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಮಾರನೇ ದಿನದ ಬೆಳಕಲ್ಲಿ ನಡೆಯುವ ಈ ಜಾತ್ರೆಗೆ ಗ್ರಾಮದ ಸುತ್ತಮುತ್ತಲಿನ ಜನರು, ತಮ್ಮ ಮನೆಯಲ್ಲಿ ತಯಾರಿಸಿದ ಬಿಳಿಜೋಳ, ಸಜ್ಜೆಯ ಖಡಕ್ ರೊಟ್ಟಿ, ತರಹೇವಾರಿ ಪಲ್ಲೆ, ಮೊಸರು, ಕಡಲೆ, ಗುರೆಳ್ಳು ಒಂದೆ ಎರಡೇ ವಿವಿಧ ಐಟಂಗಳು ರೊಟ್ಟಿ ಕಾಣದಷ್ಟು ತುಂಬಿರುತ್ತವೆ.

ಈ ಬುತ್ತಿ ಜಾತ್ರೆಗೆ ವನಕಾಂಡ, ಬೆಳದಿಂಗಳ ಬುತ್ತಿ ಜಾತ್ರೆ ಎಂದು ಕರೆಯಲಾಗುತ್ತಿದ್ದು, ಈ ಬೆಳದಿಂಗಳ ಬುತ್ತಿ ಜಾತ್ರೆಯ ಐದು ದಿನಗಳಲ್ಲಿ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಸಜ್ಜಾಗುವ ಸಂಬಂಧ ಈ ಬುತ್ತಿ ಜಾತ್ರೆ ಜಾತ್ರೋತ್ಸವ ಬುತ್ತಿ ಜಾತ್ರೆಯಾಗಿದೆ.

ಈ ಬುತ್ತಿ ಜಾತ್ರೆ ಸಂಧರ್ಭದಲ್ಲಿ ತೋಪಲಕಟ್ಟಿ, ಬ್ಯಾಲಿಹಾಳ, ಬೆಂಚಮಟ್ಟಿ, ಕೊರಡಕೇರಾ, ಕವಲ ಬೋದೂರು, ವಣಗೇರಾ, ನಿಡಶೇಸಿ, ಚಳಗೇರಾದಿಂದ ಸಾವಿರಾರು ಬುತ್ತಿಯನ್ನು ಎತ್ತಿನ ಬಂಡಿಯಲ್ಲಿ ತಂದು ತಳವಗೇರಾ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಇಡುತ್ತಾರೆ.

Advertisement

ನಂತರ ತಳವಗೇರಾ ಜನರ ಬುತ್ತಿಗಳು ಸೇರಿದಂತೆ ಸಾವಿರಾರು ಬುತ್ತಿಗಳು ಕರಡಿ ಮಜಲು ಮೆರವಣಿಗೆಯೊಂದಿಗೆ ಆದರ್ಶ ಶಾಲೆಯ ಮೈದಾನದಲ್ಲಿ ಕುಳಿತು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆದ್ಮಾತ್ಮಿಕ ಪ್ರವಚನ ನೀಡಿದರು.

ಬಳಿಕ ಬೆಳದಿಂಗ ಬುತ್ತಿ ಜಾತ್ರೆಯಲ್ಲಿ ಪರಸ್ಪರ ಹಂಚಿಕೊಂಡು ಭೋಜನ ಸವಿಯುತ್ತಾರೆ. ಈ ಜಾತ್ರೆಗೆ ಬಂದವರು ಯಾರೂ ಹಾಗೆಯೇ ಹೋಗುವುದಿಲ್ಲ ಇಲ್ಲಿ ಊಟ ಮಾಡಿ ಹೋಗಬೇಕು. ದೇವಸ್ಥಾನ ಸಮಿತಿಯಿಂದ ಬಾನ ಸಂಗಟಿ ಮಾಡಿಸುತ್ತಿದ್ದು ಈ ಬಾನ, ಸಂಗಟಿ ಸಾರು ಕೊರತೆಯಾಗಬಾರದು, ಉಳಿದರೆ ಸಮೃದ್ದಿ ಹೆಚ್ಚಲಿದೆ ಎಂಬ ವಾಡಿಕೆ ಜನಮಾನಸದಲ್ಲಿದೆ.

ಈ ಬಾರಿಯ ಬುತ್ತಿ ಜಾತ್ರೆಗೆ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಅವರಿಗೆ ನಾಮಾಂಜಲಿಯ ಮೂಲಕ ಶ್ರಧ್ಧಾಂಜಲಿ ಸಲ್ಲಿಸಲಾಯಿತು.

ಇದೇ ವೇಳೆ ತಾವರಗೇರಾದ ಯುವ ಕಲಾವಿದ ಆನಂದ ಪತ್ರಿಮಠ ಅವರು, ಸಂತನೆಂದರೆ ಯಾರು.. ಎಂಬ ಹಾಡಿಗೆ, ಕ್ಯಾನವಾಸನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಚಿತ್ರ ಬಿಡಿಸಿ ಸೈ ಎನಿಸಿಕೊಂಡರು.

ಈ ಬುತ್ತಿ ಜಾತ್ರೆಯ ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಮಾಜಿ ಸಾಸಕರಾದ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ದೇವೇಂದ್ರಪ್ಪ ಬಳೂಟಗಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಿ.ಎಂ. ಹಿರೇಮಠ, ಬೆಂಗಳೂರಿನ ಉದ್ಯಮಿ ಸಂಗಯ್ಯ ಹಿರೇಮಠ. ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ಮುಖಂಡ ಪ್ರಭಾಕಾರ ಚಿಣಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next