ಕುಷ್ಟಗಿ: ತಾಲೂಕಿನ ಚಿಕ್ಕ ನಂದಿಹಾಳ ಶಿಕ್ಷಕ ಶಾಲೆಗೆ ಅನಧಿಕೃತ ಗೈರು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕುಡಿದು ತೂರಾಡಿಕೊಂಡು ಅಸಭ್ಯ ವರ್ತನೆ ಪ್ರಕರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ಐ) ರಾಜ್ಯಾಧ್ಯಕ್ಷ ಅಮರೇಶ ಕಡಗದ ಆರೋಪಿಸಿದ್ದಾರೆ.
ಇತ್ತೀಚೆಗೆ ಲಿಂಗಸೂಗೂರು ತಾಲೂಕಿನಲ್ಲಿ ಶಾಲಾ ಅವಧಿಯಲ್ಲಿ ನಾಲ್ವರು ಶಿಕ್ಷಕರು ಬಾರ್ ನಲ್ಲಿ ಕುಡಿಯುತ್ತಾ ಕುಳಿಯುತ್ತಿದ್ದ ಪ್ರಕರಣ ಮಾಧ್ಯಮದಿಂದ ಬಹಿರಂಗವಾಗುತ್ತಿದ್ದಂತೆ ಶಿಕ್ಷಣ ಇಲಾಖೆ ತಡ ಮಾಡದೇ ನಾಲ್ವರು ಶಿಕ್ಷಕರನ್ನು ಅಮಾನತು ಮಾಡಿತ್ತು.
ಅದೇ ರೀತಿ ಶಾಲಾ ಅವಧಿಯಲ್ಲಿ ಕುಷ್ಟಗಿಯ ಚಿಕ್ಕನಂದಿಹಾಳ ಶಾಲೆಯ ಶಿಕ್ಷಕ ಕೃಷ್ಣೇಗೌಡ ಕುಷ್ಟಗಿ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಕುಡಿದು ತೂರಾಡಿಕೊಂಡಿದ್ದ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳದೇ ಶಿಕ್ಷಕನ ವಿರುದ್ದ ಕ್ರಮಕ್ಕೆ ಡಿಡಿಪಿಐ ಗೆ ಶಿಫಾರಸು ಮಾಡದೇ ಶಿಕ್ಷಕನ ಪ್ರಕರಣ ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕ್ಷಕ ಕೃಷ್ಣೇಗೌಡ ಶಾಲೆಗೆ ಪದೇ ಪದೇ ಗೈರು ಹಾಜರಾಗುತ್ತಿದ್ದರೂ, ಶಾಲಾ ಮಕ್ಕಳ ವಿದ್ಯಾಭ್ಯಾಸ ವಂಚಿತರಾಗುತ್ತಿದ್ದರೂ, ಸಾರ್ವಜನಿಕ ಸ್ಥಳದಲ್ಲಿ ಕುಡಿದು ತೂರಾಡಿಕೊಂಡಿರುವ ವಿಷಯ ಗಮನದಲ್ಲಿದ್ದರೂ ಕ್ಷೇತ್ರ ಶಿಕ್ಷಣಾಧಿಕಾರಿಯ ನಡೆ ಅನುಮಾನ ಹುಟ್ಟಿಸಿದೆ ಎಂದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಶುಕ್ರವಾರ ಶಿಕ್ಷಕ ಕೃಷ್ಣೇಗೌಡ ವಿರುದ್ದ ಶಿಸ್ತು ಕ್ರಮಕ್ಕೆ ಡಿಡಿಪಿಐ, ಬಿಇಓ ಅವರಿಗೆ ಮನವಿ ಸಲ್ಲಿಸಲಾಗುವುದಾಗಿ ಅಮರೇಶ ಕಡಗದ ತಿಳಿಸಿದ್ದಾರೆ.