ಕುಷ್ಟಗಿ: ದಿವಂಗತ ಪತಿ ಡಾ.ಶ್ರೀಪತಿ ಕುಲಕರ್ಣಿ ಮಾಲಿಕತ್ವದ ಎರಡು ಎಕರೆ ಭೂಮಿಯನ್ನು ತುಮರಿಕೊಪ್ಪ ಗ್ರಾಮದ ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ಪತ್ನಿ ಜಾಹ್ನವಿ ಕುಲಕರ್ಣಿ ಹಾಗೂ ಅವರ ಪುತ್ರಿ ನಿಕಟಪೂರ್ವ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಮೇಘಾ ದೇಸಾಯಿ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೂದಾನ ಮಾಡಿದ್ದಾರೆ.
ಈ ಹಿನ್ನೆಲೆ ಗುರು ಭವನದಲ್ಲಿ ನಡೆದ ಕಾರ್ಯಕ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳಿ ಅವರು ಭೂದಾನಿ ತಾಯಿ-ಮಗಳನ್ನು ಇಲಾಖೆ ಪರವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಸಮಾಜಕ್ಕಾಗಿ ಕೊಟ್ಟಿದ್ದು ಸಾವಿರಪಟ್ಟು ಮರಳುತ್ತದೆ. ಶಾಲೆಗಾಗಿ ತಮ್ಮ ಸ್ವಂತ ಭೂಮಿ ದಾನ ಮಾಡುವ ಮೂಲಕ, ಗ್ರಾಮದ ಮಕ್ಕಳ ಶಿಕ್ಷಣಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ್ದು, ಈ ಗ್ರಾಮದ ಮಕ್ಕಳು ನಿಜಕ್ಕೂ ಭಾಗ್ಯಶಾಲಿಗಳು ಎಂದರು.
ತುಮರಿಕೊಪ್ಪ ಗ್ರಾಮದ ಹಿರಿಯರಾದ ರಾಘವೇಂದ್ರ ರಾವ್ ಕುಲಕರ್ಣಿ, ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತ್ ಮುಗುನೂರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಯಮುನಪ್ಪ ಗಾಣದಾಳ್, ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶಪ್ಪ ಎಂ., ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಗೌರವಾಧ್ಯಕ್ಷ ಲಕ್ಷ್ಮಣ ಪೂಜಾರಿ, ಕಾರ್ಯದರ್ಶಿ ಹೈದರಾಲಿ ಜಾಲಿಹಾಳ, ಶಾರದಾ ಅಣ್ಣಿಗೇರಿ, ಡಾ.ಜೀವನಸಾಬ್ ವಾಲಿಕಾರ, ಎಸ್.ಎಸ್. ತೆಮ್ಮಿನಾಳ, ನೋಡಲ್ ಬಿ.ಆರ್.ಪಿ. ಶ್ರೀಕಾಂತ್ ಬೆಟಗೇರಿ, ಎಚ್ ಎಚ್ ಉಸ್ತಾದ್, ಶರಣಪ್ಪ ತುಮರಿಕೊಪ್ಪ ಶಿವಾನಂದ ಪಂಪಣ್ಣನವರ ಹಾಗೂ ಇತರರಿದ್ದರು
ಹಿನ್ನೆಲೆ: ಮೂಲತಃ ಹಿರೇಗೊಣ್ಣಾಗರ ಗ್ರಾಮದ ಡಾ. ಶ್ರೀಪತಿ ಕುಲಕರ್ಣಿ ಅವರು, ಹನುಮಸಾಗರದಲ್ಲಿ ವೈದ್ಯಕೀಯ ಸೇವೆಯಲ್ಲಿದ್ದರು. ಡಾ.ಶ್ರೀಪತಿರಾವ್ ಕುಲಕರ್ಣಿ “ಗೊಣ್ಣಾಗರ ಡಾಕ್ಟರ್” ಎಂದೇ ಜನಮಾನಸದಲ್ಲಿದ್ದರು. ಅವರು ಅಕಾಲಿಕ ನಿಧನದ ಬಳಿಕ ಅವರಿಗೆ ಸೇರಿದ ಎರಡು ಎಕರೆ ಜಮೀನು ಜಾಹ್ನವಿ ಕುಲಕರ್ಣಿ, ಮೇಘಾ ದೇಸಾಯಿ ತಾಯಿ- ಮಗಳು ಸೇರಿ ಸರ್ಕಾರಿ ಶಾಲೆಗೆ ದಾನ ಮಾಡಿರುವುದು ಸಾರ್ಥಕ ಸಂದರ್ಭವಾಗಿದೆ.
ಮಂಜುನಾಥ ಮಹಾಲಿಂಗಪುರ