Advertisement

Kushtagi: ಚಿಕೂನ್ ಗುನ್ಯಾಕ್ಕೆ ನೆರೆಬೆಂಚಿ ಗ್ರಾಮಸ್ಥರು ತತ್ತರ

06:06 PM Feb 08, 2024 | Team Udayavani |

ಕುಷ್ಟಗಿ: ಇಲ್ಲಿಗೆ ಸಮೀಪದ ನೆರೆಬೆಂಚಿ ಗ್ರಾಮದಲ್ಲಿ 130ಕ್ಕೂ ಅಧಿಕ ಜನರಲ್ಲಿ ಚಿಕೂನ್ ಗುನ್ಯಾ ರೋಗ ಲಕ್ಷಣ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲೆ ಹಾಗೂ ತಾಲೂಕು ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ ಕ್ರಮವಹಿಸಿದ್ದು ಸದ್ಯ ಪ್ರಕರಣ ನಿಯಂತ್ರಣಕ್ಕೆ ಬಂದಿದೆ.

Advertisement

ವೈರಲ್ ಜ್ವರ, ತಲೆ ಮತ್ತು ಕೀಲು ನೋವಿನ ಲಕ್ಷಣ ಕಳೆದೆರೆಡು ವಾರಗಳಿಂದ ಇತ್ತಾದರೂ, ಜನ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಸ್ಥಳೀಯವಾಗಿ ಹಾಗೂ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಾಗ್ಯೂ ಬಾಧಿತರ ಪ್ರಮಾಣ ಹೆಚ್ಚಿದ್ದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಸಾಮಾನ್ಯ ಜ್ವರವೋ? ವಿಷಮಶೀತ ಜ್ವರವೋ? , ಚಿಕೂನ್ ಗುನ್ಯಾ, ಡೆಂಘೀಯೋ ಎಂಬುದು ತಿಳಿಯದೇ ಗೊಂದಲಕ್ಕೀಡಾಗಿದ್ದರು. ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಆರೋಗ್ಯ ಇಲಾಖೆ ದೌಡಾಯಿಸಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ತಾತ್ಕಾಲಿಕ ಕ್ಲಿನಿಕ್ ಆರಂಭಿಸಲಾಗಿದೆ. ಗ್ರಾಮದಲ್ಲಿ ಆತಂಕದ ವಾತವರಣವಿದ್ದು, ವಿಪರೀತ ಜ್ವರ, ಮೈಕೈನೋವಿನ ಇರುವ ರೋಗಿಗಳನ್ನು ಆ್ಯಂಬ್ಯುಲೆನ್ಸ್‌ನಲ್ಲಿ ಕುಷ್ಟಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.

ಗಡ್ಡಕ್ಕೆ ಬೆಂಕಿ ಹಚ್ಚಿದಾಗ ಬಾವಿ ತೋಡಿದರು ಎನ್ನುವಂತೆ ನೆರೆಬೆಂಚಿ ಗ್ರಾಮದ ಮುಖ್ಯ ಚರಂಡಿಯಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಬೀರಲಿಂಗೇಶ್ವರ ದೇವಸ್ಥಾನ ಹಿಂಭಾಗದ ಪ್ರದೇಶದಲ್ಲಿ ಕೊಳಚೆ ನೀರಿನಲ್ಲಿ ಆಪು ಸಸ್ಯ ಬೆಳೆದಿದೆ. ಈ ಚರಂಡಿ ಹಳ್ಳಕ್ಕೆ ಸಂಪರ್ಕಿಸಲಾಗಿದ್ದರೂ ತ್ಯಾಜ್ಯ ಹಾಕುವುದು ನಿಂತಿಲ್ಲ. ಗ್ರಾಮ ಪಂಚಾಯತಿ ಸಕಾಲದಲ್ಲಿ ತ್ಯಾಜ್ಯದ ಹೂಳೆತ್ತದೇ ಇರುವುದು ಅಲ್ಲಲ್ಲಿ ಕೊಳಚೆ ನೀರು ಮಡುಗಟ್ಟಿ ನಿಂತಿದ್ದು, ಸೊಳ್ಳೆಗಳ ಸಂತತಿ ಹೆಚ್ಚಲು ಕಾರಣವಾಗಿದೆ. ಅವೈಜ್ಞಾನಿಕ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹಳ್ಳ ಸೇರುವುದು ವ್ಯವಸ್ಥಿತವಾಗಿಲ್ಲದಿರುವುದರಿಂದ ಅಲ್ಲಲ್ಲಿ ದುರ್ನಾತ ಬೀರುತ್ತಿರುವುದು ಪರಿಸರ ಮಾಲಿನ್ಯತೆಗೆ ಕಾರಣವಾಗಿದೆ.

Advertisement

ನೂರಕ್ಕೂ ಹೆಚ್ಚು ಜನರಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಳ್ಳುತ್ತಿದ್ದಂತೆ ಸ್ವಚ್ಚತೆಗೆ ಇನ್ನಿಲ್ಲದ ಕಾಳಜಿವಹಿಸಿದ್ದು, ಚರಂಡಿಯ ಅಕ್ಕಪಕ್ಕ ಬ್ಲೀಚಿಂಗ್ ಪೌಡರ್ ಹಾಕಿದ್ದು, ಚರಂಡಿಯಲ್ಲಿ ಮಡುಗಟ್ಟಿ ನಿಂತಿರುವ ಕೊಳಚೆ ನೀರನ್ನು ಸಕ್ಕಿಂಗ್ ಮಿಷನ್ ಮೂಲಕ ಹೊರ ಹಾಕಲು ಮುಂದಾಗಿದ್ದಾರೆ.

ಡಿಎಚ್‌ಓ ಡಾ. ಲಿಂಗರಾಜು, ತಹಶೀಲ್ದಾರ ರವಿ ಅಂಗಡಿ, ತಾ.ಪಂ. ಸಹಾಯಕ ನಿರ್ದೇಶಕ ನಿಂಗಪ್ಪ ಹಿರೇಹಾಳ ಪಿಎಸೈ ಮುದ್ದುರಂಗಸ್ವಾಮಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಕ್ರಮಕ್ಕೆ ಮುಂದಾದರು.

Advertisement

Udayavani is now on Telegram. Click here to join our channel and stay updated with the latest news.

Next