ಕುಷ್ಟಗಿ:ರಾಜ್ಯದ 123 ಪುರಸಭೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ನಿಗದಿಪಡಿಸಿದ್ದು, ಕುಷ್ಟಗಿ ಪುರಸಭೆಯ 23ನೇ ವಾರ್ಡಿನ ಬಿಜೆಪಿ ಸದಸ್ಯ ಮಹಾಂತೇಶ ಕಲ್ಲಭಾವಿಗೆ ಅಧ್ಯಕ್ಷರಾಗುವ ಯೋಗ ಕೂಡಿ ಬಂದಿದೆ.
ಅಧ್ಯಕ್ಷ ಸ್ಥಾನ ಎಸ್ಟಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಟಿ ಮೀಸಲಾತಿಯನ್ವಯ 23 ವಾರ್ಡಗಳ ಪೈಕಿ ಏಕೈಕ ಎಸ್ಟಿ ಮೀಸಲಾತಿಯಿಂದ ಆಯ್ಕೆಯಾದ ಬಿಜೆಪಿಯ 23ನೇ ವಾರ್ಡಿನ ಸದಸ್ಯ ಮಹಾಂತೇಶ ಕಲ್ಲಭಾವಿ ಅವರಿಗೆ ಅದೃಷ್ಟ ಒಲಿದು ಬಂದಿದೆ.
ಇನ್ನೂ 15 ತಿಂಗಳ ಉಳಿದಿರುವ ಅವಧಿಯಲ್ಲಿ ಮಹಾಂತೇಶ ಕಲ್ಲಭಾವಿ ಅವರಿಗೆ ಅನಿರೀಕ್ಷಿತವಾಗಿ ಒಲಿದು ಬಂದಿದ್ದು ಅವರು ಅಧ್ಯಕ್ಷರಾಗುವುದು ಪಕ್ಕಾ ಆಗಿದೆ. ಇನ್ನೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಯಾಗಿದ್ದು ಬಿಜೆಪಿ ಪಕ್ಷದ ವಿವೇಚನಕ್ಕೆ ಬಿಟ್ಟಿದೆ.
ಗಂಗಾಧರಸ್ವಾಮಿ ಹಿರೇಮಠ ಹಾಗೂ ಹನುಮವ್ವ ಕೋರಿ ಇವರಿಂದ 26ನೇ ಏಪ್ರಿಲ್ 2023ರಂದು ತೆರವಾದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಯಾಗಿರಲಿಲ್ಲ. ಹೀಗಾಗಿ ಸುದೀರ್ಘ 15 ತಿಂಗಳ ಬಳಿಕ ಇದೀಗ ಸಕರ್ಾರ ಮೀಸಲಾತಿ ಪ್ರಕಟಿಸಿದ್ದು, ಬಿಜೆಪಿ ಪುನಃ ಅಧಿಕಾರದ ಚುಕ್ಕಾಣಿ ಸಿಗುವುದು ನಿಚ್ಚಳವಾಗಿದೆ.
ಒಟ್ಟು 23 ಸದಸ್ಯ ಬಲದಲ್ಲಿ 10 ಕಾಂಗ್ರೆಸ್, 8 ಬಿಜೆಪಿ ಹಾಗೂ 3 ಪಕ್ಷೇತರ ಆಯ್ಕೆಯಾಗಿದ್ದರು. ಕಾಂಗ್ರೆಸ್ ಇಬ್ಬರು ಸದಸ್ಯರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರಿಂದ ಕಾಂಗ್ರೆಸ್ ಸದಸ್ಯ ಬಲ 8ಕ್ಕೆ ಕುಸಿದಿತ್ತು. 16ನೇ ವಾರ್ಡ ಪಕ್ಷೇತರಳಾಗಿ ಪ್ರತಿನಿಧಿನಿಧಿಸಿದ್ದ ಉಪಾಧ್ಯಕ್ಷೆ ರಾಜೇಶ್ವರಿ ಅಡೂರು ಅಕಾಲಿಕ ಮರಣದಿಂದ ತೆರವಾದ ಸ್ಥಾನದಲ್ಲಿ ಅಕ್ಕಮಹಾದೇವಿ ನಾಯಕವಾಡಿ ಬಿಜೆಪಿಯಿಂದ ಆಯ್ಕೆಯಾಗಿದ್ದರಿಂದ ಸದಸ್ಯ ಬಲ 11ಕ್ಕೆ ಹೆಚ್ಚಿಸಿಕೊಂಡಿದ್ದು, ಪಕ್ಷೇತರ ಇಬ್ಬರು ಸದಸ್ಯರು ಬಿಜೆಪಿಗೆ ಬೆಂಬಲಿಸಿದ್ದು ಸದಸ್ಯ ಬಲ 13ಕ್ಕೇ ಏರಿದೆ. ಸದ್ಯ ಪ್ರಕಟವಾಗಿರುವ ಎಸ್ಟಿ ಮೀಸಲು ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಸದಸ್ಯರಲ್ಲಿ ಯಾರೂ ಇಲ್ಲ. ಹೀಗಾಗಿ ಬಿಜೆಪಿಯಲ್ಲಿರುವ ಮಹಾಂತೇಶ ಕಲ್ಲಭಾವಿ ಎಸ್ಟಿ ಮೀಸಲಾತಿ ಅಡಿಯಲ್ಲಿ ಅಧ್ಯಕ್ಷರಾಗುವ ಸುಯೋಗ ಕೂಡಿ ಬಂದಿದ್ದು, ಅವರಿಗೆ ಇದು ಅನಿರೀಕ್ಷಿತವಾಗಿದೆ.
ಅಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ ಇದು ನನಗೆ ಬಯಸದೇ ಬಂದ ಭಾಗ್ಯವಾಗಿದೆ. ವಾರ್ಡ ಜನತೆಗೆ ಕೃತಜ್ಞತೆ ಸಲ್ಲಿಸುವೆ. ಸಿಕ್ಕಿರುವ ಅಧ್ಯಕ್ಷ ಸ್ಥಾನವನ್ನು ಉತ್ತಮವಾಗಿ ಜವಾಬ್ದಾರಿಯಿಂದ ನಿರ್ವಹಿಸುವೆ.
-ಮಹಾಂತೇಶ ಕಲ್ಲಭಾವಿ