ಕುಷ್ಟಗಿ: ಬಾಳೆ ಬೆಳೆದು ಹಣ ಕಳೆದುಕೊಂಡಿದ್ದ ತಾಲೂಕಿನ ಗುಮಗೇರಾದ ರೈತ ಸಂಗನಗೌಡ ಪಾಟೀಲ ಅವರಿಗೆ ದಾಳಿಂಬೆ ಹಾಗೂ ಪಪ್ಪಾಯಿ ಸಮ್ಮಿಶ್ರ ಬೆಳೆ ಆದಾಯದ ಭರವಸೆ ಮೂಡಿಸಿವೆ.
ತಾಲೂಕಿನ ಗುಮಗೇರಾ ಗ್ರಾಮದ ರೈತ ಸಂಗನಗೌಡ ಪಾಟೀಲ ತಮ್ಮ 4 ಎಕರೆ ಜಮೀನಿನಲ್ಲಿ ಸಮ್ಮಿಶ್ರ ಬೆಳೆ ಪದ್ಧತಿಯಲ್ಲಿ 3 ಸಾವಿರ ಪಪ್ಪಾಯಿ, 1600 ದಾಳಿಂಬೆ ಸಸಿ ನಾಟಿ ಮಾಡಿದ್ದಾರೆ. ನರೇಗಾ ಯೋಜನೆಯಲ್ಲಿ ದಾಳಿಂಬೆ ಹಾಗೂ ಪಪ್ಪಾಯಿ ಅಗಿ ನಾಟಿ ಮಾಡಲು ಗುಂಡಿ, ತಿಪ್ಪೆ ಗೊಬ್ಬರ ನಿರ್ವಹಣೆ ಕೂಲಿಯಾಳುಗಳ ಬಳಕೆ ಖರ್ಚು 27 ಸಾವಿರ ರೂ. ಧನ ಸಹಾಯವಾಗಿದೆ.
ಸಮ್ಮಿಶ್ರ ಬೆಳೆ ಪದ್ಧತಿಯಲ್ಲಿ ದಾಳಿಂಬೆ ಗಿಡಗಳ ಮಧ್ಯೆ ಪಪ್ಪಾಯಿ ಬೆಳೆಯುವುದರಿಂದ ಲಾಭವೂ ಇದೆ. ಪಪ್ಪಾಯಿಯಿಂದ ದಾಳಿಂಬೆ ಬೆಳೆಗೆ ನೆರಳು ಸಿಗುತ್ತದೆ. ಅಲ್ಲದೇ ರೋಗಗಳಿಂದ ಮುಕ್ತಿಯೂ ದೊರೆಯುತ್ತದೆ. ಪಪ್ಪಾಯಿ ಹಾಗೂ ದಾಳಿಂಬೆ ಉತ್ತಮ ಬೆಳೆ ಇದ್ದು, ಪ್ರತಿ ಗಿಡಕ್ಕೆ 80ರಿಂದ 100 ಕಾಯಿ ಹಿಡಿದಿದೆ. ಕಳೆದ ವಾರದಿಂದ ಪಪ್ಪಾಯಿ ಕಟಾವು ಶುರುವಾಗಿದೆ.
ಈಗಾಗಲೇ ಕೆಜಿಗೆ 13 ರೂ. ನಂತೆ 11 ಟನ್ ಮಾರಾಟ ಆಗಿದ್ದು 1.10 ಲಕ್ಷ ರೂ. ಆದಾಯ ಸಿಕ್ಕಿದೆ. ಆದರೆ ನಿರಂತರ ಮಳೆ ಹಿನ್ನೆಲೆಯಲ್ಲಿ ಪಪ್ಪಾಯಿ ಬೆಲೆ ಕೆಜಿಗೆ 3 ರೂ. ಕುಸಿದಿದೆ. ಆದರೂ ಸದ್ಯ ಕೆಜಿಗೆ 10 ರೂ. ಆಗಿರುವುದು ಆದಾಯಕ್ಕೆ ಕೊಂಚ ಹಿನ್ನಡೆಯಾಗಿದೆ. ಆದಾಗ್ಯೂ ಈ ಬೆಳೆಯಲ್ಲಿ ಇನ್ನೂ 40 ಟನ್ ಇಳುವರಿ ನಿರೀಕ್ಷೆ ಇದ್ದು, ಒಟ್ಟಾರೆಯಾಗಿ ಪಪ್ಪಾಯಿ ಬೆಳೆಯಿಂದ 50 ಟನ್ ಇಳುವರಿಗೆ ನಾಲ್ಕೈದು ಲಕ್ಷ ರೂ. ಆದಾಯಕ್ಕೆ ಮೋಸ ಇಲ್ಲ ಎನ್ನುವ ಲೆಕ್ಕಾಚಾರ ಅವರದ್ದು.
ಸಾಮಾನ್ಯವಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಬೇಡಿಕೆ ಹೆಚ್ಚುವ ಪಪ್ಪಾಯಿಗೆ ನಿರಂತರ ಮಳೆ ಕಟಾವು, ಸಾಗಾಣಿಕೆ ಸಮಸ್ಯೆಗೆ ಧಾರಣೆ ಕಡಿಮೆಯಾಯಿತು. ಪ್ರತಿ ಕೆ.ಜಿ.ಗೆ 10 ರೂ. ಸಿಕ್ಕಿರುವ ಸಮಾದಾನವೂ ಇದೆ. ಈ ಇಳುವರಿಯಿಂದ ನಾಲ್ಕೈದು ಲಕ್ಷ ರೂ. ದಿಂದ ಎರಡು ಬೆಳೆಗಳ ಹನಿ ನೀರಾವರಿ ಖರ್ಚು ಹಾಗೂ ದಾಳಿಂಬೆಯ ಔಷಧೋಪಚಾರ ನಿರ್ವಹಣೆ ಖರ್ಚು ಹೊರ ಹಾಕಿದೆ. ದಾಳಿಂಬೆ ಇಳುವರಿ ಬರಲು ಇನ್ನೂ ಒಂದು ವರ್ಷದ ಕಾಲಾವಧಿ ಇದೆ. ಮುಂದೆ ಇಳುವರಿ ಬರುವುದೆಲ್ಲವೂ ಲಾಭವೇ ಆಗಿರುತ್ತದೆ ಎನ್ನುತ್ತಾರೆ ರೈತ ಸಂಗನಗೌಡ ಪಾಟೀಲ.
ಕಳೆದ ಕೋವಿಡ್ ಸಂದರ್ಭದಲ್ಲಿ ಬಾಳೆ ಉತ್ತಮ ಫಸಲು ಇದ್ದರೂ, ಕನಿಷ್ಟ ಧಾರಣಿಯಿಂದ ಫಸಲು ಸಮೇತ ನಾಶ ಮಾಡಿ ಸುಮಾರು 6 ಲಕ್ಷ ರೂ. ಹಾನಿ ಅನುಭವಿಸಿದ್ದೇವು. ಇದೀಗ ಪಪ್ಪಾಯಿ, ದಾಳಿಂಬೆ ಬೆಳೆಯಿಂದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ. –
ರವಿಕುಮಾರ್ ಪಾಟೀಲ, ರೈತ ಸಂಗನಗೌಡರ ಪುತ್ರ
ಎರಡು ವರ್ಷಗಳ ಹಿಂದೆ ಪಪ್ಪಾಯಿಗೆ ಮೊಸಾಯಿಕ್ ವೈರಸ್‌ನಿಂದ ತೀರ ಕಡಿಮೆ ಇಳುವರಿ ಹಿನ್ನೆಲೆಯಲ್ಲಿ ಬಹುತೇಕ ರೈತರು ಪಪ್ಪಾಯಿ ಬೆಳೆಯಲು ಹಿಂದೇಟು ಹಾಕಿದ್ದರಿಂದ ಕ್ಷೇತ್ರದ ಪ್ರಮಾಣ ತಗ್ಗಿದೆ. ಸದ್ಯ ತಾಲೂಕಿನಲ್ಲಿ 50 ಹೆಕ್ಟೇರ್‌ನಲ್ಲಿ ಈ ಬೆಳೆ ಇದ್ದು, ದರ ಉತ್ತಮವಾಗಿದೆ. ದಾಳಿಂಬೆ ಜೊತೆಯಲ್ಲಿ ಪಪ್ಪಾಯಿ ಬೆಳೆಯುವುದರಿಂದ ವರ್ಷದಲ್ಲೇ ಇದರ ಇಳುವರಿ ಸಿಗುತ್ತಿದ್ದು, ದಾಳಿಂಬೆಗೆ ಮಾಡಿರುವ ಖರ್ಚಿನ ಹೊರೆ ತಗ್ಗಿಸುತ್ತಿದೆ. –
ದುರ್ಗಾ ಪ್ರಸಾದ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
-ಮಂಜುನಾಥ ಮಹಾಲಿಂಗಪುರ