ಕುಷ್ಟಗಿ: ದಾಳಿಂಬೆ ತೋಟಕ್ಕೆ ನುಗ್ಗಿ ಹಣ್ಣು ಕದ್ದು, ಬೈಕ್ ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ಮದಲಗಟ್ಡಿ ಗ್ರಾಮದಲ್ಲಿ ಆ.3ರ ಶನಿವಾರ ನಡೆದಿದೆ.
ತಡರಾತ್ರಿ ಮದಲಗಟ್ಟಿ ಸೀಮಾದ ಜಗನ್ನಾಥ ಗೋತಗಿ ಅವರ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು, ಸುಮಾರು 7 ಚೀಲ ದಾಳಿಂಬೆ ಕೊಯ್ದು ಮೂಟೆ ಕಟ್ಟಿ ಹೊತ್ತೊಯ್ಯಬೇಕೆನ್ನುವಷ್ಟರಲ್ಲಿ ತೋಟದ ಕಾರ್ಮಿಕರಿಗೆ ಗೊತ್ತಾಗಿದೆ.
ಕೂಡಲೇ ಎಚ್ಚೆತ್ತ ಕಳ್ಳರು ಕದ್ದ ದಾಳಿಂಬೆ ಹಣ್ಣಿನ ಮೂಟೆ ಬಿಟ್ಟು ಪರಾರಿಯಾಗಿದ್ದು, ಪಕ್ಕದ ಸಜ್ಜೆಯ ಹೊಲದಲ್ಲಿ ಹಿರೋ ಸ್ಪ್ಲೆಂಡರ್ ಬೈಕ್ ಪತ್ತೆಯಾಗಿದೆ.
ಜಗನ್ನಾಥ ಗೋತಗಿ ಅವರ ತೋಟದಲ್ಲಿ ಕದ್ದ ದಾಳಿಂಬೆ ಹಣ್ಣು 70 ಸಾವಿರ ರೂ. ಮೌಲ್ಯ ಅಂದಾಜಿಸಲಾಗಿದೆ. ದಾಳಿಂಬೆ ಕಟಾವು ಸಂದರ್ಭ ಕಳ್ಳರ ಉಪಟಳವನ್ನು ಪೊಲೀಸರು ನಿಯಂತ್ರಿಸಿ ಕಳ್ಳರ ಪತ್ತೆಗೆ ದಾಳಿಂಬೆ ಬೆಳೆಗಾರ ಮಲ್ಲಣ್ಣ ತಾಳದ್ ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದೆ ನಿಡಶೇಸಿ ಹೊರವಲಯದ ತೋಟದಲ್ಲಿ ಕಳ್ಳರು, ಬೈಕ್, ದಾಳಿಂಬೆ ಹಣ್ಣು ಬಿಟ್ಟು ಹೋಗಿರುವ ಪ್ರಕರಣ ಮಾಸುವ ಮುನ್ನವೇ ಈ ಪ್ರಕರಣ ನಡೆದಿದೆ.
ದಾಳಿಂಬೆ ಹಣ್ಣಿಗೆ ಕೆ.ಜಿ.ಗೆ 150 ರೂ. ಬಂಪರ್ ಬೆಲೆ ಸಂದರ್ಭದಲ್ಲಿ ಕಳ್ಳರ ಕಾಟಕ್ಕೆ ದಾಳಿಂಬೆ ಬೆಳೆಗಾರರಲ್ಲಿ ಆತಂಕ ವ್ಯಕ್ತವಾಗಿದೆ.