ಕುಷ್ಟಗಿ: ತಾಲೂಕಿನ ಟೆಂಗುಂಟಿ ಹಳ್ಳದ ದಡದಲ್ಲಿ ವನ್ಯಜೀವಿ ನರಿ ಅನುಮಾನಸ್ಪದವಾಗಿ ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ.
ಗ್ರಾಮದ ಹೊರವಲಯದಲ್ಲಿರುವ ಚಕ್ ಡ್ಯಾಂ ಬಳಿ ಕಳೆದ ಬುಧವಾರ ನರಿ ಸತ್ತು ಬಿದ್ದಿದ್ದು, ಅರಣ್ಯ ಇಲಾಖೆಯವರು ಈವರೆಗೂ ಗಮನಿಸದೇ ನಿರ್ಲಕ್ಷಿಸಿರುವುದು ಕಂಡು ಬಂದಿದೆ.
ಹಳ್ಳದ ದಡದಲ್ಲಿ ನರಿ ಸತ್ತು ಬಿದ್ದಿರುವುದನ್ನು ಗಮನಿಸಿದ್ದ ಮುದೇನೂರು ಗ್ರಾಮ ಪಂಚಾಯತ್ ಸದಸ್ಯ ಹುಸೇನಪ್ಪ ಮುದೇನೂರು, ಮೊಬೈಲ್ ನಲ್ಲಿ ಫೋಟೋ ತೆಗೆದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಸಿಬ್ಬಂದಿಗಳ್ಯಾರು ಆಗಮಿಸಿ ಸತ್ತ ನರಿಯ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಹುಸೇನಪ್ಪ ಮುದೇನೂರು ಆರೋಪಿಸಿದ್ದಾರೆ.
ಹಳ್ಳದ ದಡದಲ್ಲಿ ಸತ್ತಿರುವ ನರಿಯ ಸ್ಥಿತಿ ಗಮನಿಸಿದರೆ ಬಿಸಿಲಿಗೆ ಬಾಯಾರಿದ ನರಿ ನೀರನ್ನು ಅರಸಿ ಹಳ್ಳದ ದಡಕ್ಕೆ ಬರುವಾಗ ಕೊರಕಲು ಮೇಲಿಂದ ಬಿದ್ದು ನಿತ್ರಾಣ ಕೊಂಡು ಸತ್ತಿರಬಹುದೇ ಇಲ್ಲ ನರಿಯ ಕಾಟ ತಾಳಲಾರದೇ ಸ್ಥಳೀಯರು ವಿಷ ಉಣಿಸಿ ಕೊಂದು ಹಳ್ಳಕ್ಕೆ ತಂದು ಹಾಕಿರಬಹುದೇ ಎಂದು ಶಂಕಿಸಲಾಗಿದೆ.
ಈ ಬಗ್ಗೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿಗೆ ಪ್ರಕರಣದ ಬಗ್ಗೆ ಮೊಬೈಲ್ ಮೂಲಕ ಮಾಹಿತಿ ನೀಡಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ.
ಅರಣ್ಯ ಇಲಾಖೆಯವರಿಗೆ ಗಮನಕ್ಕೆ ಬಂದ ಕೂಡಲೇ ಸತ್ತ ನರಿಯ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು. ಈ ಕುರಿತು ಸಂಬಂಧಿಸಿದ ಅಧಿಕಾರಿಗೆ ಸೂಚಿಸುವುದಾಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ತಿಳಿಸಿದರು.