ಕುಷ್ಟಗಿ: ಸರಿಯಾದ ಸಮಯಕ್ಕೆ ಕೆಲಸಕ್ಕೆ ಬಾರದ ಪೌರ ಕಾರ್ಮಿಕ ಸಿಬ್ಬಂದಿಗಳನ್ನು ರಾಷ್ಟ್ರಗೀತೆ ಹಾಡಿಸುವ ಪರಿಣಾಮ ಪೌರಕಾರ್ಮಿಕರು ಸರಿಯಾದ ಸಮಯಕ್ಕೆ ಹಾಜರಾಗುತ್ತಿದ್ದಾರೆ.
ಹೌದು… ಕುಷ್ಟಗಿಯ ಮುಖ್ಯಾದಿಕಾರಿ ಧರಣೇಂದ್ರ ಕುಮಾರ್ ಕಳೆದ ಮಾರ್ಚ್ 10 ರಂದು ಅಧಿಕಾರ ವಹಿಸಿಕೊಂಡಿದ್ದು, ಪುರಸಭೆ ಪೌರ ಕಾರ್ಮಿಕರಿಗೆ ರಾಷ್ಟ್ರಗೀತೆ ಹಾಡಿಸಲಾಗುತ್ತಿದೆ. ಹೀಗಾಗಿ ಪ್ರತಿದಿನ ಮುಂಜಾನೆ 5.30ಕ್ಕೆ ಪೌರ ಕಾರ್ಮಿಕರಿಂದ ರಾಷ್ಟ್ರಗೀತೆ ಮೊಳಗುತ್ತಿದ್ದು, ಬಳಿಕ ಅವರಿಗೆ ವಹಿಸಿದ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.
ರಾಷ್ಟ್ರಗೀತೆಯಲ್ಲಿ ಪಾಲ್ಗೊಳ್ಳದ ಸಿಬ್ಬಂದಿಗೆ ಹಾಜರಿ ಇಲ್ಲ ಎಂಬ ಬೆಳವಣಿಗೆ ಹಿನ್ನೆಲೆ ಪೌರಕಾರ್ಮಿಕರು ಪ್ರತಿನಿತ್ಯ ಕೆಲಸಕ್ಕೆ ನಿಗದಿತ ಸಮಯಕ್ಕೆ ಹಾಜರಾಗುತ್ತಿದ್ದಾರೆ. ಅದಲ್ಲದೇ ಪ್ರತಿದಿನ ಪೌರಕಾರ್ಮಿಕರು ರಾಷ್ಟ್ರಗೀತೆ ಹಾಡುವುದರಿಂದ ಅದರಲ್ಲಿಯೂ ದೇಶಭಕ್ತಿಯ ಭಕ್ತಿ ಜಾಗೃತಿಯನ್ನು ಸದ್ದಿಲ್ಲದೇ ಮೂಡಿಸುತ್ತಿದ್ದಾರೆ. ಧರಣೇಂದ್ರ ಕುಮಾರ್ ಅವರ ದಾವಣಗೇರಾ ಜಿಲ್ಲೆ ಮಲೆಬೆನ್ನೂರರಲ್ಲಿ ರಾಷ್ಟ್ರಗೀತೆಯ ಪ್ರಯೋಗ ಯಶಸ್ವಿಯಾಗಿದ್ದರಿಂದ ಅದೇ ಪ್ರಯೋಗ ಇಲ್ಲಿಯೂ ಮುಂದುವರೆಸಿದ್ದಾರೆ.
ಪೌರ ಕಾರ್ಮಿಕರನ್ನು ಪ್ರತಿದಿನ ಪುರಸಭೆ ಆವರಣದಲ್ಲಿ ಶಾಲಾ ಮಕ್ಕಳಂತೆ ಸಾಲಾಗಿ ನಿಲ್ಲಿಸಿ, ಮೊದಲು ಹಾಜರಿ ತೆಗೆದುಕೊಳ್ಳಲಾಗುತ್ತದೆ. ನಂತರ ಸ್ಪೀಕರ್ ಮೂಲಕ ರಾಷ್ಟ್ರಗೀತೆ ಪ್ರಸಾರವಾದ ಬಳಿಕ ಪೌರಕಾರ್ಮಿಕರು ಅದಕ್ಕೆ ಧ್ವನಿಗೂಡಿಸುತ್ತಾರೆ. ಈ ಬೆಳವಣಿಗೆಗಾಗಿ ಪುರಸಭೆ ಪೌರಕಾರ್ಮಿಕರು ತಪ್ಪದೇ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದಾರೆ.
ಈ ಕುರಿತು ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ದೇಶ ಮೊದಲು ಎನ್ನುವಂತೆ ಮೊದಲು ನಮ್ಮ ದೇಶಕ್ಕೆ ನಮನ ಸಲ್ಲಿಸಿ ನಂತರ ಕಾಯಕ ಆರಂಭಿಸಬೇಕು ಎಂದರು.
ನಮ್ಮ ಪೌರಕಾರ್ಮಿಕರಿಂದ ರಾಷ್ಟ್ರಗೀತೆ ಹಾಡಿಸುವುದರಿಂದ ಅವರಲ್ಲಿಯೂ ದೇಶ ಭಕ್ತಿ ಜಾಗೃತವಾಗುತ್ತದೆ. ರಾಷ್ಟ್ರೀಯ ಹಬ್ಬಗಳಲ್ಲಿ ಮಾತ್ರ ರಾಷ್ಟ್ರಗೀತೆ ಸೀಮಿತ ಅಲ್ಲ. ಪೌರಕಾರ್ಮಿಕರು ರಾಷ್ಟ್ರದ ಸೇವಕರೂ ಆಗಿದ್ದಾರೆ. ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಗೀತೆ ಸ್ಮರಿಸುವ ಬದಲಿಗೆ ಪ್ರತಿದಿನ ರಾಷ್ಟ್ರಗೀತೆ ಹಾಡಿಸಲಾಗುತ್ತಿದೆ ಎಂದು ಹೇಳಿದರು.
ಮೊದಲು ತುಮಕೂರು ಜಿಲ್ಲೆಯಲ್ಲಿ ಈ ಪ್ರಯೋಗ ನಡೆದಿತ್ತು. ಹರಿಹರ ತಾಲೂಕು ಮಲೆ ಬೆನ್ನೂರಿನಲ್ಲಿ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ನಾನು ಶುರು ಮಾಡಿದ್ದೆ. ಇದೀಗ ಕುಷ್ಟಗಿ ಪುರಸಭೆಯಲ್ಲಿ ಈ ರೀತಿಯ ಪದ್ಧತಿ ನಾನು ಆರಂಭಿಸಿದ್ದು, ಇದಕ್ಕೆ ಪೌರಕಾರ್ಮಿಕರು ಸಹಕರಿಸಿ ಸಮಯಕ್ಕೆ ಸರಿಯಾಗಿ ಬರುತ್ತಿದ್ದಾರೆ ಎಂದರು.