Advertisement
ಪ್ರತಿ ಸಾಮಾನ್ಯ ಸಭೆಯಲ್ಲಿ ಒಳಾಂಗಣ ಕ್ರೀಡಾಂಗಣ ಉದ್ಘಾಟನೆ ಆಗದಿರುವ ಬಗ್ಗೆ ಚರ್ಚೆ ಆಗುತಿತ್ತು. ಅಕ್ಟೋಬರ್ ತಿಂಗಳಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಳು ಬಿದ್ದ ಸ್ಥಿತಿಯಲಿದ್ದ ಕ್ರೀಡಾಂಗಣ ತತ್‌ಕ್ಷಣ ದುರಸ್ತಿ ಮಾಡಿ ಹಸ್ತಾಂತರಿಸುವಂತೆ ಗುತ್ತಿಗೆ ಸಂಸ್ಥೆಗೆ ನ.ಪಂ. ಸೂಚಿಸಿತ್ತು. ಕಾಮಗಾರಿ ಮುಗಿದ ಮೇಲೆ ನ.ಪಂ. ವತಿಯಿಂದ ಪರಿಶೀಲನೆ ನಡೆಸಿ, ಗುತ್ತಿಗೆ ಸಂಸ್ಥೆಗೆ ಬಾಕಿ ಮೊತ್ತದ ಪಾವತಿಸಿ ಉದ್ಘಾಟಿಸಲು ತೀರ್ಮಾನಿಸಲಾಗಿತ್ತು.
ಕುರುಂಜಿಗುಡ್ಡೆಯ ಎತ್ತರದ ಪ್ರದೇಶದಲ್ಲಿ ಸಿ.ಎಂ.ಎಸ್.ಎಂ.ಟಿ.ಡಿ.ಪಿ. ಯೋಜನೆಯಡಿ 50 ಲಕ್ಷ ರೂ. ಅಂದಾಜಿನ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ 2010 ಜೂ. 29ರಂದು ಅಂದಿನ ರಾಜ್ಯ ಸರಕಾರದ ದಿಲ್ಲಿ ಪ್ರತಿನಿಧಿ, ಮಾಜಿ ಸಂಸದ ಧನಂಜಯ ಕುಮಾರ್ ಶಿಲಾನ್ಯಾಸ ನೆರವೇರಿಸಿದ್ದರು. ಆ ಅನುದಾನದಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ ನಿರ್ಮಿತಿ ಕೇಂದ್ರದ ನಿರ್ವಹಣೆಯಡಿ ಎರಡು ಬಾರಿ 15.57 ಲಕ್ಷ ರೂ. ಮತ್ತು 9.40 ಲಕ್ಷ ರೂ. ಅನ್ನು ಮಂಜೂರು ಮಾಡಲಾಗಿತ್ತು. ಇದರಿಂದ ಉದ್ದೇಶಿತ ಒಳಾಂಗಣ ಕ್ರೀಡಾಂಗಣದ ವೆಚ್ಚ 50 ಲಕ್ಷದಿಂದ 74.97 ಲಕ್ಷ ರೂ.ಗೆ ಏರಿಕೆ ಕಂಡಿತ್ತು. ಅದಾಗ್ಯೂ ಕ್ರೀಡಾಂಗಣ ಅಂತಿಮಗೊಳ್ಳದೆ ಉದ್ಘಾಟನೆ ಹಂತಕ್ಕೆ ಬಂದಿರಲಿಲ್ಲ. ಮೂರನೇ ಹಂತದಲ್ಲಿ 2016-17ನೇ ಸಾಲಿನ ಯೋಜನೆಯಡಿ 9.40 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಿದ ಎ.ಸಿ. ಶೀಟು ತೆಗೆಯುವುದು, ಹೆಚ್ಚುವರಿ ಜಿ.ಐ. ರಿಪೀಸು ಒದಗಿಸುವುದು, ಗ್ಯಾಲೋಲಿಯಂ ಶೀಟು ಅಳವಡಿಕೆ, ದುರಸ್ತಿ ಕಾಮಗಾರಿಗೆ ಅಂದಾಜು ಪಟ್ಟಿ ತಯಾರಿಸಿ ಕೈಗೆತ್ತಿಕೊಳ್ಳಲಾಗಿತ್ತು.
Related Articles
ಒಳಾಂಗಣ ಕ್ರೀಡಾಂಗಣದ ಬಾಕಿ ಉಳಿದಿರುವ ಕಾಮಗಾರಿ ಹಾಗೂ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಶಾಸಕರು ಡಿ. 22ರ ತನಕ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅನಂತರ ಅವರ ಉಪಸ್ಥಿತಿಯಲ್ಲಿ ಡಿ. 25ರ ಒಳಗೆ ಉದ್ಘಾಟಿಸಲಾಗುವುದು.
-ಶೀಲಾವತಿ ಮಾಧವ,
ಅಧ್ಯಕ್ಷರು, ಸುಳ್ಯ ನ.ಪಂ.
Advertisement
ಕಿರಣ್ ಪ್ರಸಾದ್ ಕುಂಡಡ್ಕ