Advertisement

15 ವರ್ಷಗಳಿಂದ ಡಾಮರು ಭಾಗ್ಯ ಕಾಣದ ಕುರ್ಪಾಡಿ ರಸ್ತೆ

06:00 AM Aug 19, 2018 | |

ಅಜೆಕಾರು: ಸುಮಾರು 15 ವರ್ಷಗಳ ಹಿಂದೆ ನಿರ್ಮಾಣಗೊಂಡ ಅಜೆಕಾರು ಕುರ್ಪಾಡಿ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳಿಂದ ಆವೃತವಾಗಿದ್ದು, ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.

Advertisement

ಮರ್ಣೆ ಗ್ರಾಮ ಪಂಚಾಯತದ ಅಜೆಕಾರು ಪೇಟೆಯಿಂದ ಕುರ್ಪಾಡಿ ಸಂಪರ್ಕಿಸುವ ಈ ರಸ್ತೆಯು ಕಳೆದ 15 ವರ್ಷಗಳಿಂದ ಡಾಮರು ಭಾಗ್ಯ ಕಂಡಿಲ್ಲ. ಕಳೆದ ಕೆಲವು ವರ್ಷಗಳಿಂದ ತೇಪೆ ಕಾರ್ಯವು ನಡೆದಿಲ್ಲ ಎಂಬುದು ಸ್ಥಳೀಯರ ಅಳಲು.

ಸುಮಾರು 1.5 ಕಿ.ಮೀ. ಉದ್ದದ ರಸ್ತೆ ಇದಾಗಿದ್ದು, ರಸ್ತೆಯಲ್ಲಿ ಬೃಹತ್‌ ಗಾತ್ರದ ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರ ಅಸಾಧ್ಯವಾದರೆ ಪಾದಾಚಾರಿಗಳಿಗೆ ನಿತ್ಯ ಕೆಸರಿನ ಅಭಿಷೇಕವಾಗುತ್ತಿದೆ. ಅಲ್ಲದೆ ಈ ರಸ್ತೆಯ ಮೂಲಕವೇ ಅಜೆಕಾರು ಗ್ರಾಮದ ಕೊಡಮಣಿತ್ತಾಯ ದೈವಸ್ಥಾದ ಭಂಡಾರವು ಗುತ್ತಿನ ಮನೆಯಿಂದ ಪ್ರತೀ ವರ್ಷ ದೈವಸ್ಥಾನಕ್ಕೆ ತೆರಳುತ್ತದೆ. ಈ ರಸ್ತೆ ಅಭಿವೃಧಿಗೊಂಡಲ್ಲಿ ಸ್ಥಳೀಯರಿಗೆ ಹೆರ್ಮುಂಡೆ ಸಂಪರ್ಕ ರಸ್ತೆಯನ್ನು ಸಂಪರ್ಕಿಸಲು ಬಹಳಷ್ಟು ಹತ್ತಿರದ ರಸ್ತೆಯಾಗಲಿದೆ.
ಅಲ್ಲದೆ ಅಜೆಕಾರು ಪೊಲೀಸ್‌ ಠಾಣಾ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ ರಿಂಗ್‌ ರೋಡ್‌ ನಿರ್ಮಾಣ ಮಾಡಲು ಅವಕಾಶವಿದೆ.

ಈ ಭಾಗದಲ್ಲಿ ಸುಮಾರು 100 ಮನೆಗಳಿದ್ದು ಸಂಪರ್ಕಕ್ಕೆ ಇದೇ ಪ್ರಮುಖ ರಸ್ತೆಯಾಗಿದ್ದು ಪ್ರತಿ ನಿತ್ಯ ನೂರಾರು ವಾಹನಗಳು ಶಾಲಾ ವಿದ್ಯಾರ್ಥಿಗಳು ಸಂಚಾರಿಸುತ್ತಾರೆ.

ರಸ್ತೆಯಲ್ಲೇ  ಮಳೆ ನೀರು 
ಅಗಲ ಕಿರಿದಾದ ರಸ್ತೆ ಇದಾಗಿದ್ದು ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದೆ ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಇದರಿಂದಾಗಿ ರಸ್ತೆ ಮತ್ತಷ್ಟು ಹದಗೆಡುವಂತಾಗಿದೆ.

Advertisement

ದುರಸ್ತಿಗೆ ಮನವಿ 
ಅಭಿವೃದ್ಧಿಗೊಳ್ಳುತ್ತಿರುವ ಅಜೆಕಾರು ಪೇಟೆ ಭಾಗದಲ್ಲಿಯೇ ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಿಂದಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈಗಾಗಲೇ ಹಲವು ಬಾರಿ ರಸ್ತೆ ದುರಸ್ತಿಗೆ ಮನವಿ ಮಾಡಲಾಗಿದೆ. ಆದರೆ ರಸ್ತೆ ಹೊಂಡ ಗುಂಡಿಗಳಿಂದ ಮುಕ್ತಿ ಕಂಡಿಲ್ಲ.
– ಶಿವಕುಮಾರ್‌ ಕುರ್ಪಾಡಿ ಗುತ್ತು, ಸ್ಥಳೀಯರು

ಸರ್ವಋತು ಸಂಪರ್ಕ ರಸ್ತೆಗೆ ಪ್ರಯತ್ನ
ಅತ್ಯವಶ್ಯಕವಾಗಿರುವ ಈ ರಸ್ತೆ ಅಭಿವೃದ್ಧಿಗೆ ಕ್ರಿಯಾ ಯೋಜನೆಯಲ್ಲಿ ತೆಗೆದುಕೊಂಡು ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಅನುದಾನಗಳನ್ನು ಬಳಸಿಕೊಂಡು ಸರ್ವಋತು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.
– ದಿನೇಶ್‌ ಕುಮಾರ್‌, ಅಧ್ಯಕ್ಷರು, ಮರ್ಣೆ ಗ್ರಾ.ಪಂ. 

Advertisement

Udayavani is now on Telegram. Click here to join our channel and stay updated with the latest news.

Next