ಮುಂಬಯಿ: ಕುರ್ಲಾ ಪಶ್ಚಿಮದ ಸೋನಾಪುರ ಲೇನ್‌ನಲ್ಲಿರುವ ನಾರಾಯಣ ಬಿ. ಮೂಲ್ಯ ಇವರಿಂದ ಸ್ಥಾಪಿಸಲ್ಪಟ್ಟ ಶ್ರೀ ಮಹಮ್ಮಾಯಿ ಮಂದಿರದಲ್ಲಿ 47ನೇ
ವಾರ್ಷಿಕ ಮಹೋತ್ಸವು ಮಾ. 26ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ದಿನಪೂರ್ತಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಆದ್ಯ ಗಣಪತಿ ಯಾಗ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಅಲಂಕಾರ ಪೂಜೆ, ಪ್ರಸನ್ನ ಪೂಜೆಯು ವಿದ್ಯಾವಿಹಾರ್ ಶ್ರೀ ಅಂಬಿಕಾ ಮಂದಿರದ ವಿದ್ವಾನ್ ಪೆರ್ಣಂಕಿಲ ಹರಿದಾಸ್ ಭಟ್ ಇವರ ಪೌರೋಹಿತ್ಯದಲ್ಲಿ ಜರಗಿತು.
ರಾತ್ರಿ ದೇವಿಗೆ ವಿಶೇಷ ಪೂಜೆಯು ಮಂದಿರದ ಪ್ರಧಾನ ಅರ್ಚಕ ಕೃಷ್ಣಾನಂದ ಭಟ್ ಇವರಿಂದ ನಡೆಯಿತು. ಬಳಿಕ ನಾರಾಯಣ ಮೂಲ್ಯ ಅವರಿಂದ ದೇವಿ ಆವೇಶ, ಅಭಯದ ನುಡಿ ಜರಗಿತು. ವಾಲಗ ಸೇವೆಯನ್ನು ಜರಿಮೆರಿಯ ದಿನೇಶ್ ಕೋಟ್ಯಾನ್ ಮತ್ತು ಬಳಗದವರಿಂದ ಆಯೋಜಿಸಲಾಗಿತ್ತು.
ಪೂಜೆಯಲ್ಲಿ ನಾರಾಯಣ ಮೂಲ್ಯ ಪರಿವಾರ, ಸ್ಥಳೀಯ ರಾಜಕೀಯ ಧುರೀಣರು, ಸಮಾಜ ಸೇವಕರಾದ ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್. ಕುಲಾಲ್, ಕುಲಾಲ ಸಂಘ ಸಂಚಾಲಕತ್ವದ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಮತ್ತಿತರ ಪದಾಧಿಕಾರಿಗಳು, ಸಮಾಜ ಸೇವಕ ಬಾಲಕೃಷ್ಣ ಬೆಳ್ಳಂಪಳ್ಳಿ ಹಾಗೂ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರತಿನಿಧಿಗಳು, ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.