ಕಾಪು: ಕಾಪು ತಾಲೂಕಿನ ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಮುಂಭಾಗದಲ್ಲಿ ಗೋಪುರದ ಇಕ್ಕೆಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಎರಡು ಶಾಸನಗಳನ್ನು ತುಳು ಲಿಪಿಯಲ್ಲಿ ಬರೆದ ತುಳು ಭಾಷೆಯ ಶಾಸನಗಳೆಂದು ಇತಿಹಾಸ ಸಂಶೋಧಕ ಸುಭಾಸ್ ನಾಯಕ್ ಬಂಟಕಲ್ಲು ಗುರುತಿಸಿದ್ದಾರೆ.
ಎರಡು ಶಾಸನಗಳಲ್ಲಿ ಒಂದು ಶಾಸ ನವು (ದೇವಳದ ಈಶಾನ್ಯದಲ್ಲಿರುವ) ಬಹುತೇಕ ಅಳಿಸಿ ಹೋಗಿದ್ದರೂ ಕೆಲವು ಅಕ್ಷರಗಳು ತ್ರುಟಿತಗೊಂಡಿದ್ದರೂ ಓದಲು ಸಾಧ್ಯವಾಗಿದೆ. ಶಾಸನದ ಕಲ್ಬರಹದ ಮೇಲೆ ಶಿವಲಿಂಗ ಮತ್ತು ಸೂರ್ಯ – ಚಂದ್ರರ ಉಬ್ಬು ಶಿಲ್ಪವಿದೆ. ಮತ್ತೂಂದು ಶಾಸನವು ಸಂಪೂರ್ಣ ತ್ರುಟಿತಗೊಂಡಿದ್ದು ಕಾಮಗಾರಿಯ ವೇಳೆ ಸಿಮೆಂಟ್ ಬಿದ್ದು ಲಭ್ಯ ಅಕ್ಷರಗಳೂ ಅಸ್ಪಷ್ಟವಾಗಿ ಓದಲಾಗದ ಸ್ಥಿತಿಯಲ್ಲಿದೆ. ಆದರೆ ಕಾಣುವ ಅಕ್ಷರಗಳನ್ನು ಗಮನಿಸಿದಾಗ ಅದು ತುಳು ಲಿಪಿಯ ಶಾಸನದಂತೆ ಗೋಚರಿಸುತ್ತದೆ ಎಂದು ಸುಭಾಸ್ ನಾಯಕ್ ತಿಳಿಸಿದ್ದಾರೆ.
ಪಳಂ ತುಳುವಾಗಿರುವುದರಿಂದ ಶಬ್ದ ಸಂಯೋಜನೆ ಕಷ್ಟ ಸಾಧ್ಯವಾಗಿದ್ದು ಅನಂ ತರದ ಒಂದು ಸಾಲಿನಲ್ಲಿ ‘ತುನರ ಪುರತ್ ನಯೆ’ ಮುಂದುವರಿದರೆ ‘ಮುದೆಲಾಯ’ ಮುಂತಾದ ಶಬ್ದಗಳು ಸಿಗುತ್ತವೆ. ಇನ್ನುಳಿದಂತೆ ಅಕ್ಷರಗಳು ಒಂದೋ ಸಿಮೆಂಟ್ ಬಿದ್ದು ಅಥವಾ ಸವೆದು ಹೋಗಿದೆ. ಆದರೆ ಇದು ತುಳು ಭಾಷೆಯ ತುಳು ಲಿಪಿಯಲ್ಲಿರುವ ಶಾಸನವಾದುದರಿಂದ ಮುಂದಿನ ಅಧ್ಯಯನ ಅಗತ್ಯವಿದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.
ಈ ಶಾಸನದಲ್ಲಿ ಉಲ್ಲೇಖವಾಗಿರುವ “ವಲ್ಲ ಮಹಾದೇವ’ನು ಆಳುಪರ ಅರಸ ವಲ್ಲಭ ದೇವನೇ ಆಗಿದ್ದರೆ ಈ ಶಾಸನದ ಕಾಲ ಕ್ರಿ.ಶ. 1230 – 1250. ಅಂದರೆ 13 ನೇ ಶತಮಾನದ್ದಾಗಿರಬಹುದು ಎಂದು ತುಳು ಶಾಸನ ಓದುವ ಬೆರಳೆಣಿಕೆಯ ವಿದ್ವಾಂಸರಲ್ಲಿ ಒಬ್ಬರಾಗಿರುವ ಬಂಟಕಲ್ಲು ಸುಭಾಸ್ ನಾಯಕ್ ಅವರು ತಿಳಿಸಿದ್ದಾರೆ. ತುಳು ಶಾಸನ ಗುರುತಿಸುವ ಕ್ಷೇತ್ರ ಕಾರ್ಯದಲ್ಲಿ ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಮತ್ತು ಗುರುಪ್ರಸಾದ ನಾಯಕ್ ಸಹಕರಿಸಿದ್ದಾರೆ. ಕುಂಜೂರು ದುರ್ಗಾ ದೇವಸ್ಥಾನದ ಮೆನೇ ಜರ್ ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕುಂಜೂರಿಗೆ ಬಹಳಷ್ಟು ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆ ಇದ್ದು, ಈ ಶಾಸನದ ಅಧ್ಯಯನಕ್ಕೆ ಬೇಕಾದ ಲಭ್ಯ ಮಾಹಿತಿಗಳನ್ನು ಸ್ಥಳೀಯರು ಒದಗಿಸಲು ಅಣಿಯಾಗಿದ್ದಾರೆ.