ಕುಣಿಗಲ್: ಹೆಸರಿಗೆ ಮಾತ್ರ ಕುಣಿಗಲ್ ಖಾಸಗಿ ಬಸ್ ನಿಲ್ದಾಣ ಇಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮೂಲ ಸೌಲಭ್ಯಗಳು ಮರಿಚಿಕೆಯಾಗಿದೆ. ಶಿಥಿಲ ಗೊಂಡಿರುವ ತಂಗುದಾಣ, ಸಮರ್ಪಕವಾಗಿ ಇಲ್ಲದೆ ರಸ್ತೆ, ಬಸ್ ನಿಲ್ದಾಣ ತುಂಬೆಲ್ಲಾ ಗುಂಡಿ, ಕುಡಿವ ನೀರಿನ ವ್ಯವಸ್ಥೆ ಇಲ್ಲದಿರುವುದು ಇವೆಲ್ಲಾ ಬಸ್ ನಿಲ್ದಾಣದ ಅವ್ಯವಸ್ಥೆ ಸಾಕ್ಷಿಯಾಗಿದೆ.
ಕುಣಿಗಲ್ ಪುರಸಭೆಯು ಖಾಸಗಿ ಬಸ್ ನಿಲ್ದಾಣ ವನ್ನು, ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಿಲ್ದಾಣ ದಲ್ಲಿ ಇದ್ದ ಅಂಗಡಿ ಮಳಿಗೆ, ಹೋಟೆಲ್‌ಗಳನ್ನು ತೆರವುಗೊಳಿಸಿ ಹೀಗೆ 18 ವರ್ಷಗಳು ಕಳೆದಿವೆ. ಆದರೆ, ಈವರೆಗೂ ಬಸ್ ನಿಲ್ದಾಣ ಮಾತ್ರ ಅಭಿವೃದ್ಧಿ ಆಗಿಲ್ಲ.
ಶಿಥಿಲಗೊಂಡ ತಂಗುದಾಣ: ಪ್ರಯಾಣಿಕರ ಮಳೆ ಹಾಗೂ ಬಿಸಿಲಿನಿಂದ ರಕ್ಷಣೆಗಾಗಿ ಕಳೆದ 44 ವರ್ಷಗಳ ಹಿಂದೆ ರೋಟರಿ ಕ್ಲಬ್ ಹಾಗೂ ವರ್ತಕರ ಸಂಘದಿಂದ ಬಸ್ ನಿಲ್ದಾಣದಲ್ಲಿ ಎರಡು ತಂಗುದಾಣಗಳನ್ನು ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ, ತಂಗುದಾಣಗಳು ಸಂಪೂರ್ಣ ಹಾಳಾಗಿದ್ದು ಚಾವಣಿ ಭಾಗ ಕಿತ್ತು ಹೋಗಿದೆ. ಪ್ರಯಾಣಿಕರು ಕುಳಿತುಕೊಳ್ಳುವ ಸಿಮೆಂಟ್ ಆಸನ ಹಾಳಾಗಿದೆ. ತಂಗುದಾಣದ ಕಂಬಗಳು ಈಗಲು ಆಗಲು ಬೀಳುವ ಸ್ಥಿತಿಯಲ್ಲಿವೆ. ಆದರೆ, ಇದರ ಪುನರ್ ನಿರ್ಮಾಣಕ್ಕೆ ಪುರಸಭೆ ಈವರೆಗೂ ಕ್ರಮವಹಿಸದೆ ಇರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಗುಂಡಿ ರಸ್ತೆ: ಬಸ್ ನಿಲ್ದಾಣದಲ್ಲಿ ರಸ್ತೆಗೆ ಹಾಕಿದ ಡಾಂಬರೀಕರಣ ಕಿತ್ತು ಹೋಗಿ ಸುಮಾರು ವರ್ಷ ಕಳೆದರೂ ರಸ್ತೆಗೆ ಡಾಂಬರೀಕರಣ ಮಾಡಿಲ್ಲ. ಪೆಟ್ರೋ ಲ್ ಬಂಕ್ ಮುಂಭಾಗ, ಸಾರಿಗೆ ಸಂಸ್ಥೆ ಡಿಪೋಗೆ ಹೋಗುವ ರಸ್ತೆ ಸೇರಿದಂತೆ ಇತರೆ ರಸ್ತೆಗಳ ಜಲ್ಲಿ ಕಲ್ಲು ಮೇಲೆದ್ದು, ರಸ್ತೆಗಳು ಗುಂಡಿ ಬಿದ್ದು, ವಾಹನಗಳ ಸಂಚಾರಕ್ಕೆ ಹಾಗೂ ಪ್ರಯಾಣಿಕರ ತಿರುಗಾಡಲು ತುಂಬ ತೊಂದರೆಯಾಗಿದೆ. ಆನೇಕ ಬಸ್‌ಗಳ ಟೈರ್ ಗುಂಡಿಗೆ ಇಳಿದು ಬಸ್‌ನ ಆಕ್ಸೆಲ್ ಬ್ಲೇಡ್ ತುಂಡಾಗಿವೆ ಎಂದು ಚಾಲಕರ ಆರೋಪವಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ರೂ. ಖರ್ಚು ಮಾಡಿತ್ತಿದ್ದೇವೆ ಎಂದು ಹೇಳುವ ಪುರಸಭೆ ಆಡಳಿತವು ಖಾಸಗಿ ಬಸ್ ನಿಲ್ದಾಣದಲ್ಲಿ ಕನಿಷ್ಠ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ದುರಾದೃಷ್ಟಕರವಾಗಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ತುಮಕೂರು, ಬೆಂಗಳೂರು, ಮದ್ದೂರು, ಮೈಸೂರು, ರಾಮನಗರ, ಚನ್ನಪಟ್ಟಣಕ್ಕೆ ಪ್ರಯಾಣಿಸುತ್ತಾರೆ ಆದರೆ ಕುಡಿವ ನೀರಿನ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.
ಕರೆಯಾದ ಬಸ್ ನಿಲ್ದಾಣ: ಈ ಹಿಂದೆ ಪಟ್ಟಣದ ಮನೆ, ಹೋಟೆಲ್‌ಗಳ ಕಲುಷಿತ ನೀರು ಹಾಗೂ ಮಳೆ ನೀರು ಸರಾಗವಾಗಿ ಕಾಲುವೆಗೆ ಹರಿದು ಹೋಗಲು ರಾಜಕಾಲುವೆ ನಿರ್ಮಾಣ ಮಾಡಲಾಗಿತ್ತು. ಆದರೆ, ಕೆಲ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾಲುವೆ ಮುಚ್ಚಿರುವ ಕಾರಣ ಮಳೆಯ ನೀರು ಬೇರೆಡೆಗೆ ಹರಿಯಲು ಸಾಧ್ಯವಾಗದೇ ಖಾಸಗಿ ಬಸ್ ನಿಲ್ದಾಣಕ್ಕೆ ಹರಿದು ನಿಲ್ದಾಣದ ಕೆರೆಯಾಗಿ ಮಾರ್ಪಟ್ಟಿದೆ. ಈ ನೀರು ಕಾಲುವೆಗೆ ಹರಿದು ಹೋಗಲು ಲೋಕೋಪಯೋಗಿ ಇಲಾಖೆ ಕಲ್ಲುಬಿಲ್ಡಿಂಗ್ ಹಾಗೂ ಹಜರತ್ ಹಕೀಂ ಶಾವಲಿ ಕಾಂಪ್ಲೆಕ್ಸ್ ಮಳಿಗೆ ಮುಂಭಾಗ ಎರಡೂ ಕಡೆ ಚರಂಡಿ ಕಾಮಗಾರಿ ಕೈಗೆತ್ತುಕೊಂಡು ಕಲ್ಲು ಬಿಲ್ಡಿಂಗ್ ಮುಂಭಾಗ ಚರಂಡಿ ಕಾಮಗಾರಿ ಪೂರೈಸದೆ ಸ್ಥಳೀಯ ವ್ಯಾಪಾರಕ್ಕೆ ತೊಂದರೆಯಾಗಿದೆ.
10 ಕೋಟಿ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಅಭಿವೃದ್ಧಿಗೆ ಡಿಪಿಆರ್ ತಯಾರಿಸಿ ಅನುಮೋದನೆಗೆ ಸರ್ಕಾರಕ್ಕೆ ಕಳಿಸಿಕೊಡಲಾಗಿದೆ. ಹಣಕಾಸು ಇಲಾಖೆ ಯಿಂದ ಅನುಮತಿ ಸಿಕ್ಕಿದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.-
ಶಿವಪ್ರಸಾದ್, ಪುರಸಭೆ ಮುಖ್ಯಾಧಿಕಾರಿ
ಸಾಕಷ್ಟು ಸಮಸ್ಯೆಗಳಿಂದ ನಲುಗಿರುವ ಖಾಸಗಿ ಬಸ್ ನಿಲ್ದಾಣದ ಅಭಿವೃದ್ಧಿಗೆ ಪುರಸಭಾ ಆಡಳಿತ ಕ್ರಮಕೈಗೊಂಡಿಲ್ಲ, ಪ್ರಯಾಣಿಕರ ಪ್ರಯಾಣಕ್ಕೆ, ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿದೆ. ಬಸ್ ನಿಲ್ದಾಣದ ಅಭಿವೃದ್ಧಿಗೆ ಶಾಸಕರು, ಪುರಸಭಾ ಆಡಳಿತ ಕ್ರಮವಹಿಸಬೇಕು.
-ಕೆ.ಕೆ.ಕೇಶವ, ಸ್ಥಳೀಯ ನಾಗರಿಕ
-ಕೆ.ಎನ್.ಲೋಕೇಶ್