Advertisement
ಮೂರು ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆ ಅಂದಾಜು 2,500 ಜನಸಂಖ್ಯೆಯ ಗ್ರಾಮದ ಜನತೆಯ ಜೀವಾಳ. ಕುಡಿಯಲು, ದನಕರುಗಳಿಗೆ, ಇತರೆ ಬಳಕೆಗೆ ಕೆರೆಯೇ ಜಲಮೂಲ. ಕೆರೆ ಸುತ್ತಮುತ್ತ ಸ್ವತ್ಛತೆ ಮರೀಚಿಕೆಯಾಗಿದೆ. ಗಿಡಗಂಟಿ ಬೆಳೆದು ಪಾಚಿಗಟ್ಟಿದೆ. ಮದ್ಯದ ಪಾಕೀಟುಗಳು ಸೇರಿದಂತೆ ತ್ಯಾಜ್ಯದಿಂದ ಮಲಿನಗೊಂಡು ನೀರು ಹಸಿರುಗಟ್ಟಿದಂತೆ ಕಾಣುತ್ತಿದೆ. ವಾಸನೆಯೂ ರಾಚುತ್ತಿದೆ.
Related Articles
Advertisement
ಇದ್ದೂ ಇಲ್ಲದಂತೆ: ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಪಾಳುಬಿದ್ದಿದ್ದು, ಇದ್ದೂ ಇಲ್ಲದಂತಾಗಿದೆ. ದುರಸ್ತಿಗೂ ಕ್ರಮಕೈಗೊಂಡಿಲ್ಲ. ಕೆರೆಯ ಕಲುಷಿತ ನೀರನ್ನು ಉಪಯೋಗಿಸುತ್ತಿರುವುದರಿಂದ ಜನತೆಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿರುವ ಘಟನೆಗಳು ಸಹ ಜರುಗುತ್ತಿವೆ ಎಂಬುದು ಗ್ರಾಮಸ್ಥರಾದ ಜಗದೀಶ ಶಿವಳ್ಳಿ, ಶಿವಪ್ಪ ಹರಕುಣಿ, ಲಕ್ಷ್ಮಣ ತಳವಾರ, ಮಾದೇವಪ್ಪ ಬೆಟಗೇರಿ ಅವರ ಅಹವಾಲು.
ಗ್ರಾಮದ ನೀರಿನ ತೊಂದರೆ ಕುರಿತು ಹಿರೇನೆರ್ತಿ ಪಿಡಿಒ ಹಾಗೂ ತಾಲೂಕಾಡಳಿತಕ್ಕೆ ಅನೇಕ ಬಾರಿ ಮೌಖೀಕವಾಗಿ ಹೇಳಿದರೂ, ಹಿಂದೆ ಮನವಿ ಕೊಟ್ಟಿದ್ದರೂ ಯಾರೂ ತಿರುಗಿ ನೋಡಿಲ್ಲ. ಗ್ರಾಮದ ಕೆರೆಯತ್ತ ತಾಲೂಕಾಡಳಿತ ಒಮ್ಮೆ ದೃಷ್ಟಿ ಹಾಯಿಸಿದರೆ ಇಲ್ಲಿನ ವಾಸ್ತವ ಅವರಿಗೂ ತಿಳಿಯುತ್ತದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಎಲ್ಲ ಕೆಲಸ ಕಾರ್ಯಗಳಿಗೆ ಸೇರಿದಂತೆ ಕುಡಿಯಲು ಸಹ ಇದೇ ಕೆರೆ ನೀರನ್ನು ಉಪಯೋಗಿಸುತ್ತೇವೆ. ಹಲವು ದಿನಗಳಿಂದ ನೀರು ಕೆಟ್ಟು ವಾಸನೆ ಬರುತ್ತಿದೆ. ಈ ನೀರನ್ನು ಕುಡಿದು ಕೆಲವರು ಆಸ್ಪತ್ರೆ ಕದ ತಟ್ಟಿದ್ದಾರೆ. ಕೆರೆ ದಂಡೆಯಲ್ಲಿ ಕುಡುಕರ ಹಾವಳಿಯಿಂದ ಮದ್ಯದ ಪಾಕೀಟುಗಳು ಅಲ್ಲಿಯೇ ಬೀಳುತ್ತಿವೆ. ತಾಲೂಕು-ಗ್ರಾಮಾಡಳಿತಕ್ಕೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹೀಗೆ ಮುಂದುವರಿದರೆ ತಾಲೂಕು ಕಚೇರಿ ಮುಂದೆ ಧರಣಿ ಕೂರುತ್ತೇವೆ. ∙ಸಿದ್ದಪ್ಪ ಹುಣಸಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ
ಗ್ರಾಮದಲ್ಲಿ ರೈತಾಪಿ ವರ್ಗ ಹೆಚ್ಚಿದ್ದು ದನಕರುಗಳಿಗೆ ಎಲ್ಲದಕ್ಕೂ ಇದೇ ನೀರನ್ನು ಅವಲಂಬಿಸಿದ್ದೇವೆ. ನಮಗೆ ಈ ಕೆರೆ ಬಿಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲ. ನೀರು ಕೆಟ್ಟಿರುವ ವಾಸನೆ ಬರುತ್ತಿದೆ. ಸ್ಥಳೀಯ ಆಡಳಿತ ಹಾಗೂ ತಾಲೂಕು ಆಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು. ∙ಭೀಮಪ್ಪ ಎಚ್. ಬೆನಕನಹಳ್ಳಿ, ಗ್ರಾಮದ ರೈತ
■ ಗಿರೀಶ ಘಾಟಗೆ