Advertisement

Kundapura: ರಾಷ್ಟ್ರೀಯ ಹೆದ್ದಾರಿ ಬದಿ ವಿದ್ಯಾರ್ಥಿಗಳು ರಸ್ತೆಯಲ್ಲೇ ಬಾಕಿ!

01:28 PM Oct 01, 2024 | Team Udayavani |

ಕುಂದಾಪುರ: ಬೈಂದೂರು ಭಾಗದಿಂದ ಕುಂದಾಪುರಕ್ಕೆ ಬರುವ ಬಸ್‌ಗಳು ಆರಂಭದಲ್ಲಿಯೇ ಭರ್ತಿಯಾಗಿಯೇ ಬರುವುದರಿಂದ ಹೆದ್ದಾರಿಯಲ್ಲಿ ಬರುವ ಕಂಬದಕೋಣೆ, ಕಿರಿಮಂಜೇಶ್ವರ, ನಾವುಂದ, ಮರವಂತೆ ಭಾಗದ ಮಕ್ಕಳಿಗೆ ಭಾರಿ ತೊಂದರೆಯಾಗುತ್ತಿದೆ. ಬೆಳಗ್ಗೆ ಬೇಗ ಬಂದು ರಸ್ತೆ ಬದಿ ನಿಂತರೂ, ಬರುವಂತಹ ಎಲ್ಲ ಬಸ್‌ಗಳು ತುಂಬಿಕೊಂಡೇ ಬರುವುದರಿಂದ ಶಾಲಾ- ಕಾಲೇಜು ತರಗತಿಗಳ ಅವಧಿ ಆರಂಭವಾದರೂ, ಬಸ್‌ ಸಿಗದೇ ನೂರಾರು ವಿದ್ಯಾರ್ಥಿಗಳು ಸಂಕಷ್ಟ ಪಡುವಂತಾಗಿದೆ.

Advertisement

ಭಟ್ಕಳ, ಬೈಂದೂರಿನಿಂದ ಕುಂದಾಪುರಕ್ಕೆ 6 ಗಂಟೆಯಿಂದಲೇ ಬಸ್‌ ಆರಂಭಗೊಂಡರೂ, ಪ್ರತೀ 15 ನಿಮಿಷಕ್ಕೊಮ್ಮೆ ಬಸ್‌ಗಳು ಸಂಚರಿಸುತ್ತಿದ್ದರೂ, ಅಲ್ಲಿಂದಲೇ ತುಂಬಿಕೊಂಡೇ ಬರುವುದರಿಂದ ಮಧ್ಯದ ಹಾದಿಯಲ್ಲಿರುವ ಕಂಬದಕೋಣೆಯಿಂದ ನಾವುಂದ, ಮರವಂತೆ, ತ್ರಾಸಿ, ತಲ್ಲೂರುವರೆಗಿನ ಮಕ್ಕಳು ಬಸ್‌ ಹತ್ತಲೂ ಆಗದೇ, ರಸ್ತೆ ಬದಿಯೇ ಗಂಟೆಗಟ್ಟಲೆ ಕಾಯುವಂತಾಗಿದೆ. ಹೆದ್ದಾರಿಯಲ್ಲೇ ಸಂಚರಿಸುವ ಮತ್ತು ಒಳ ಮಾರ್ಗಗಳಿಂದ ಬರುವ ಬಸ್‌ಗಳೆಲ್ಲ ಮೊದಲೇ ತುಂಬಿ ತುಳುಕುತ್ತವೆ. ಹೀಗಾಗಿ, ಹೆದ್ದಾರಿ ಬದಿ ನಿಂತ ಮಕ್ಕಳಿಗೆ ಯಾವ ಬಸ್‌ನಲ್ಲೂ ಜಾಗ ಇರುವುದಿಲ್ಲ. ಹೀಗಾಗಿ ಅವರೆಲ್ಲ ರಸ್ತೆಯಲ್ಲೇ ಬಾಕಿಯಾಗಬೇಕಾಗಿದೆ.

ಸಹಸ್ರಾರು ವಿದ್ಯಾರ್ಥಿಗಳು
ಬೈಂದೂರು, ಉಪ್ಪುಂದ, ನಾಗೂರು, ನಾವುಂದ ಭಾಗದ ಸಹಸ್ರಾರು ಮಂದಿ ವಿದ್ಯಾರ್ಥಿಗಳು ಕುಂದಾಪುರದ ಶಾಲಾ – ಕಾಲೇಜುಗಳಿಗೆ ಬರುತ್ತಾರೆ. ಹೀಗಾಗಿ ಹೆದ್ದಾರಿಯಲ್ಲಿ ಎಷ್ಟು ಬಸ್‌ಗಳು ಸಂಚರಿಸಿದರೂ, ಸಾಲದು ಅನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅದರಲ್ಲೂ ಕಂಬದಕೋಣೆ, ನಾವುಂದ, ಅರೆಹೊಳೆ ಕ್ರಾಸ್‌, ಮರವಂತೆ, ಮಾರಸ್ವಾಮಿ ದೇಗುಲ ಬಳಿ, ತ್ರಾಸಿ, ಮುಳ್ಳಿಕಟ್ಟೆ, ಹೆಮ್ಮಾಡಿ, ತಲ್ಲೂರು ಬಳಿ ನೂರಾರು ಮಕ್ಕಳು ಬಸ್ಸಿಗಾಗಿ ಕಾದರೂ, ಕೆಎಸ್‌ಆರ್‌ಟಿಸಿ ಬಸ್‌ ಸಿಗದೇ, ಕೊನೆಗೆ ಖಾಸಗಿ ಬಸ್‌ಗಳಲ್ಲಿ ಬರುವಂತಾಗಿದೆ. ಅದರಲ್ಲೂ ಬೆಳಗ್ಗಿನ ಅವಧಿಯಲ್ಲಿ ಜಾಗ ಸಿಗುವುದಿಲ್ಲ.

ಪಾಸ್‌ ಇದ್ದರೂ ಪ್ರಯೋಜನವಿಲ್ಲ
ವಿದ್ಯಾರ್ಥಿಗಳು ಕೆಎಸ್‌ಆರ್‌ಟಿಸಿಯ ರಿಯಾಯಿತಿ ದರದ ವಾರ್ಷಿಕ ಪಾಸ್‌ ಮಾಡಿಸಿಕೊಂಡಿದ್ದಾರೆ. ಆದರೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜಾಗ ಸಿಗದೇ, ಕೊನೆಗೆ ತರ ಗತಿಗೆ ತಡವಾಯಿತೆಂದು, ಪಾಸ್‌ ಇದ್ದರೂ, ದುಡ್ಡು ಕೊಟ್ಟು ಖಾಸಗಿ ಬಸ್‌, ಇತರ ವಾಹನಗಳಲ್ಲಿ ಪ್ರಯಾಣಿಸುವ ಸ್ಥಿತಿ ಇದೆ.

Advertisement

ಕಂಬದಕೋಣೆಯಿಂದ ಕುಂದಾಪುರಕ್ಕೆ ಬಸ್‌ ಬಿಡಿ
ಬೈಂದೂರಿನಿಂದ ಬರುವ ಬಸ್‌ಗಳು ಭರ್ತಿಯಾಗಿ ರುವುದರಿಂದ ಕಂಬದಕೋಣೆಯಿಂದ ಕುಂದಾಪುರಕ್ಕೆ ಹೊಸದಾಗಿ ಹೆಚ್ಚುವರಿ ಬಸ್‌ ಬಿಟ್ಟರೆ, ಈ ಹೆದ್ದಾರಿ ಯುದ್ದಕ್ಕೂ ಕಾಯುತ್ತಿರುವ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆದಷ್ಟು ಬೇಗ ಕಂಬದಕೋಣೆ- ಕುಂದಾಪುರ ಹೊಸ ಬಸ್‌ ಆರಂಭಿಸಿ ಎಂದು ಬಸ್‌ ಸಿಗದೇ, ದಿನ ಸಂಕಷ್ಟಪಡುತ್ತಿರುವ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಹೆಚ್ಚಿನ ಬಸ್‌ ಬೇಕಿದೆ..
ಸಾಕಷ್ಟು ಸಂಖ್ಯೆಯ ಮಕ್ಕಳಿದ್ದರೂ, ಅಷ್ಟೊಂದು ಬಸ್‌ಗಳು ಇಲ್ಲದೇ ಇರುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ನಾವುಂದ ಒಂದೇ ಕಡೆ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಬಸ್‌ ಸಿಗದ ಸ್ಥಿತಿಯಿದೆ. ಬೇರೆ ಕಡೆಗಳ ಮಕ್ಕಳದು ಇದೇ ಸ್ಥಿತಿ. ಪರೀಕ್ಷೆ ಸಮಯದಲ್ಲಂತೂ ಮಕ್ಕಳು ತುಂಬಾ ಆತಂಕ ಎದುರಾಗುತ್ತದೆ.
-ರಾಜೇಶ್‌ ಸಾಲ್ಬುಡ, ನಾವುಂದ ಗ್ರಾ.ಪಂ. ಸದಸ್ಯ

ಯಾವುದೇ ಪರ್ಮಿಟ್‌ ಬಾಕಿಯಿಲ್ಲ
ಭಟ್ಕಳ, ಬೈಂದೂರಿನಿಂದ ಪ್ರತೀ 15 ನಿಮಿಷಕ್ಕೊಮ್ಮೆ ಬಸ್‌ಗಳು ಕುಂದಾಪುರಕ್ಕೆ ಬರುತ್ತಿವೆ. ನಮ್ಮಲ್ಲಿ ಯಾವುದೇ ಪರ್ಮಿಟ್‌ ಬಾಕಿಯಿಲ್ಲ. ಪರ್ಮಿಟ್‌ ಇರುವ ಎಲ್ಲ ಬಸ್‌ಗಳು ಸಂಚರಿಸುತ್ತಿವೆ. ಹೊಸ ಬಸ್‌ ಬೇಡಿಕೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಮ್ಮದು ಮಾತ್ರವಲ್ಲ ಖಾಸಗಿ ಬಸ್‌ಗಳು ಕುಂದಾಪುರಕ್ಕೆ ಭರ್ತಿಯಾಗಿಯೇ ಬರುತ್ತಿವೆ. ಶಾಲಾ- ಕಾಲೇಜುಗಳಲ್ಲಿಯೂ ಅಲ್ಲಿನ ತರಗತಿಗಳ ಸಮಯ ಬದಲಾವಣೆ ಮಾಡಿಕೊಂಡರೆ ಅನುಕೂಲ ಆಗಬಹುದು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಚಿಂತನೆ ನಡೆಸಲಿ.
-ಉದಯ ಕುಮಾರ್‌, ಡಿಪ್ಪೋ ಮ್ಯಾನೇಜರ್‌ ಕುಂದಾಪುರ

ವಿದ್ಯಾರ್ಥಿಗಳ ಬಸ್‌ ಬೇಡಿಕೆಗಾಗಿ ಸುದಿನ ಅಭಿಯಾನ
ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಬರಲು ಹೆಚ್ಚಿನ
ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದೇ, ಸಮಸ್ಯೆಯಾಗುತ್ತಿದೆ ಅನ್ನುವ ಬಗ್ಗೆ ಹೆಚ್ಚುವರಿ ಬಸ್‌ ಆರಂಭಿಸಬೇಕು ಅನ್ನುವ ಕುರಿತಂತೆ ‘ಉದಯವಾಣಿ ಸುದಿನ’ವು ‘ನಮಗೆ ಬಸ್‌ ಬೇಕೇ ಬೇಕು’ ಅನ್ನುವುದಾಗಿ ಅಭಿಯಾನ ಮಾಡಿತ್ತು. ಆ ಬಳಿಕ ಒಂದಷ್ಟು ಕಡೆಗಳಿಗೆ ಹೊಸದಾಗಿ ಬಸ್‌ ಸಂಚಾರವೂ ಆರಂಭಗೊಂಡಿದ್ದು, ಇನ್ನು ಒಂದಷ್ಟು ಕಡೆಗೆ ಆಗಬೇಕಾಗಿದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next