Advertisement
ಎಡವಟ್ಟಾಯ್ತು
Related Articles
Advertisement
ದಶಮಾನೋತ್ಸವ ಕಳೆದ ಕಾಮಗಾರಿ
ರಾ.ಹೆ. 66 ಮಹಾರಾಷ್ಟ್ರ, ಗೋವಾ, ಕರ್ನಾಟಕ ಹಾಗೂ ಕೇರಳದಲ್ಲಿ ಹಾದು ಹೋಗುತ್ತದೆ. ಕಾರವಾರ, ಉಡುಪಿ, ಮಂಗಳೂರು ಮೂರು ಜಿಲ್ಲಾ ಕೇಂದ್ರಗಳನ್ನು ಸಂಧಿಸುತ್ತದೆ. ಸುರತ್ಕಲ್ ನಿಂದ ಕುಂದಾಪುರದವರೆಗೆ 73 ಕಿ.ಮೀ. ದೂರ ನವಯುಗ ಉಡುಪಿ ಟೋಲ್‌ವೇಯ್ಸ ಸಂಸ್ಥೆ ಹೆದ್ದಾರಿ ಕಾಮಗಾರಿ ನಡೆಸಿದೆ. ಇದರಲ್ಲಿ 40 ಕಿ.ಮೀ.ನಷ್ಟು ಸರ್ವಿಸ್ ರಸ್ತೆಯೇ ಇದೆ. 2010 ಸೆಪ್ಟಂಬರ್‌ನಿಂದ ಆರಂಭವಾದ ಕಾಮಗಾರಿ 2013ರಲ್ಲಿ ಪೂರ್ಣವಾಗಬೇಕಿತ್ತು. 2021ರಲ್ಲಿ ಕಾಮಗಾರಿ ಮುಗಿದಿದೆ ಎಂದು ನಂಬಲಾಗಿದ್ದರೂ ಕೆಲಸಗಳು ಇನ್ನೂ ಬಾಕಿಯಿವೆ. ಸರ್ವಿಸ್ ರಸ್ತೆಯಂತೂ ಇನ್ನೂ ಆಗಲೇ ಇಲ್ಲ.
ಐಆರ್‌ಬಿಗೆ
ಕುಂದಾಪುರದ ಸಂಗಮ್‌ನಿಂದ ಗೋವಾ ಗಡಿವರೆಗೆ ಕಾಮಗಾರಿಯನ್ನು ಐಆರ್‌ಬಿ ಸಂಸ್ಥೆಗೆ 2014 ರಲ್ಲಿ 1,655 ಕೋ.ರೂ.ಗೆ ಗುತ್ತಿಗೆ ನೀಡಲಾಗಿದೆ. ಸಂಸ್ಥೆ 189 ಕಿ.ಮೀ. ಕಾಮಗಾರಿ ಆಗಿದೆ. ಶಿರೂರು ಟೋಲ್ ವಸೂಲಿ ನಡೆಯುತ್ತಿದೆ. ಐಆರ್‌ಬಿಯವರು ಎಪಿಎಂಸಿ ಬಳಿಯಿಂದ ಕಾಮಗಾರಿ ಆರಂಭಿಸಿದ್ದು ಕೆಎಸ್‌ಆರ್‌ಟಿಸಿ ಬಳಿಯ 50 ಮೀ. ಎರಡೂ ಸಂಸ್ಥೆಯವರಿಗೆ ಗುತ್ತಿಗೆಗೆ ಸಿಗದೇ ಬಾಕಿಯಾಗಿತ್ತು. ಟೆಂಡರ್ ಕರೆಯುವಾಗ ಕಿ.ಮೀ. ನಮೂದಿಸುವಾಗ ಆದ ಎಡವಟ್ಟಿ ನಿಂದಾಗಿ ಇಷ್ಟು ದೂರದ ಕಾಮಗಾರಿ ಬಾಕಿಯಾಗಿದೆ. ಅಲ್ಲಿ ಸರ್ವಿಸ್ ರಸ್ತೆ ಕಾಮಗಾರಿಗೆ ಯಾರೂ ಜವಾಬ್ದಾರರಾಗಿರಲಿಲ್ಲ. ಬಾಕಿ ರಸ್ತೆ ಕಾಮಗಾರಿ ಜವಾಬ್ದಾರಿ ಐಆರ್‌ಬಿ ಸಂಸ್ಥೆ ಮಾಡಿಮುಗಿಸಿದೆ. ತನ್ನ ತಪ್ಪಿಗೆ ತೇಪೆ ಹಾಕಲು ಹೆದ್ದಾರಿ ಪ್ರಾಧಿಕಾರ ಮುಂದಾಗಿ 2019ರ ಡಿಸೆಂಬರ್ ನಲ್ಲಿ ಗಜೆಟ್ ನೋಟಿಫಿಕೇಶನ್ ಮಾಡಿ ಜನವರಿಯ ದಿನಪತ್ರಿಕೆಯಲ್ಲಿ ಹೊಸದಾಗಿ ಭೂಸ್ವಾಧೀನ ಪ್ರಕ್ರಿಯೆ ಕುರಿತು ಮಾಹಿತಿ ಪ್ರಕಟಿಸಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಮೂವರ ಜಾಗದ ಸರ್ವೇ ನಂಬರ್ ಇದರಲ್ಲಿ ನಮೂದಾಗಿದೆ. 671 ಕೋ.ರೂ.ಗಳ ಯೋಜನೆ ತಯಾರಿಸಿದ ಕೇಂದ್ರ 221.43 ಕೋ.ರೂ. ಗಳನ್ನು ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರಕ್ಕೆ ನೀಡಿತ್ತು. ಉಳಿಕೆ ಮೊತ್ತವನ್ನು ಗುತ್ತಿಗೆ ಪಡೆದ ನವಯುಗ ಕಂಪೆನಿ ಭರಿಸಿ, ಹೆಜಮಾಡಿ, ಸಾಸ್ತಾನ ಟೋಲ್‌ಗೇಟ್ ಮೂಲಕ 20 ವರ್ಷಗಳಲ್ಲಿ ಹಿಂಪಡೆಯಬೇಕು ಎಂದಿತ್ತು. ಕಾಮಗಾರಿ ಮುಗಿದಿಲ್ಲ, ಟೋಲ್ ವಸೂಲಾಗುತ್ತಲೇ ಇದೆ.
ಯಾಕಾಗಿ ಭೂಸ್ವಾಧೀನ
ಪುರಸಭೆ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿಯ ಅಗಲ 22.5 ಮೀ. ಇದೆ. ನವಯುಗ ಸಂಸ್ಥೆಗೆ 22.5 ಮೀ.ಗೆ ಅವಶ್ಯವಿದ್ದಂತೆ ಭೂಸ್ವಾಧೀನ ಮಾಡಿಕೊಟ್ಟಿದ್ದು ಐಆರ್‌ಬಿ ಸಂಸ್ಥೆಗೆ 25 ಮೀ. ಅಗಲಕ್ಕೆ ಬೇಕಾದಂತೆ ಭೂಸ್ವಾಧೀನ ಮಾಡಿಕೊಡಲಾಗಿದೆ. ಈಗ ಬಾಕಿಯಾದ ರಸ್ತೆಯ ಕಾಮಗಾರಿಯನ್ನು ಐಆರ್ ಬಿಗೆ ನೀಡಿದ ಕಾರಣ ಹೆಚ್ಚುವರಿ 2.5 ಮೀ.ನಂತೆ ರಸ್ತೆಯ ಎರಡೂ ಬದಿ ಭೂಸ್ವಾಧೀನ ಮಾಡಬೇಕಾಗುತ್ತದೆ.
ಅಪಘಾತ ತಾಣ
ಎಪಿಎಂಸಿ ಬಳಿಯಿಂದ ಕೆಎಸ್‌ಆರ್ ಟಿಸಿವರೆಗೆ ಸರ್ವಿಸ್ ರಸ್ತೆ ಆಗದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಎಪಿಎಂಸಿ ಬಳಿ ಬ್ಯಾರಿಕೇಡ್ ಇಟ್ಟು ವಾಹನಗಳು ತಿರುಗಲು ಒದ್ದಾಡುತ್ತವೆ. ಸರ್ವಿಸ್ ರಸ್ತೆಯೇ ಇಲ್ಲದೇ ಇನ್ನೊಂದು ಹೆದ್ದಾರಿಯಿಂದ ಬಸ್ ಗಳು, ಲಾರಿಗಳು ತಿರುಗಲು ನಾನೊಲ್ಲೆ ಎನ್ನುತ್ತವೆ. ಈ ಮಧ್ಯೆಯೇ ಬರುವ ಸಣ್ಣಪುಟ್ಟ ವಾಹನಗಳು ಭೀತಿಯಿಂದ ಸಂಚರಿಸಬೇಕಿದೆ. ಹೆದ್ದಾರಿ ವಾಹನಗಳ ವೇಗಕ್ಕೂ ಕಡಿವಾಣ ಹಾಕುವುದು ಈ ಭಾಗದಲ್ಲಿ ಸಾಹಸದ ಕೆಲಸ.
ಅವಾರ್ಡ್ ಆಗಿ ಬಂದಿಲ್ಲ: ಭೂಸ್ವಾಧೀನ ಪ್ರಕ್ರಿಯೆಗೆ ಸರ್ವೇ, ನಕ್ಷೆ ತಯಾರಿಸಿ ಕಡತವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅವಾರ್ಡ್ ಆಗಿ ಬಂದಿಲ್ಲ. ಬಳಿಕವಷ್ಟೇ ಪರಿಹಾರ ನೀಡಿ ಭೂಮಿ ವಶಕ್ಕೆ ಪಡೆಯಲು ಸಾಧ್ಯ. -ಕೆ. ರಾಜು, ಸಹಾಯಕ ಕಮಿಷನರ್, ಕುಂದಾಪುರ
ಮಾಹಿತಿ ಇಲ್ಲ: ಭೂಸ್ವಾಧೀನ ಪ್ರಕ್ರಿಯೆಗೆ ಬಾಕಿ ಇರುವ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ಕಡತ ತರಿಸಿ ನೋಡಿ ವಿಚಾರಿಸುತ್ತೇನೆ. –ಲಿಂಗೇಗೌಡ, ಯೋಜನಾ ನಿರ್ದೇಶಕರು, ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ
-ಲಕ್ಷ್ಮೀ ಮಚ್ಚಿನ